ಹೇರಲ್ಪಟ್ಟ ಸನ್ಯಾಸತ್ವ ತುಂಬಾ ಅಪಾಯಕಾರಿಯಾದುದು

ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ?
ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ?
ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಶರಣರು ವಾಸ್ತವವಾದಿಗಳು. ವೈದಿಕರಂತೆ ಅವರದು ಬೂಟಾಟಿಕೆಯ ಬದುಕಲ್ಲ. ಎಲ್ಲವನ್ನೂ ತೆರೆದ ಕಣ್ಣುಗಳ- ಬಿಚ್ಚು ಹೃದಯದ ಮೂಲಕ ಚಿಂತಿಸಿದವರು. ಹಾಗೆ ಬದುಕಿದವರು. ಅವರೆಂದೂ ಸನ್ಯಾಸವೆ ಶ್ರೇಷ್ಠವೆಂದು ಭಾವಿಸಿರಲಿಲ್ಲ . ಆದರೆ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೆ ಮರಣ ಎಂದು ಸುಳ್ಳು ಸೊಟ್ಟುಗಳನ್ನು ಬೋಧಿಸಲು ಹೋಗಲಿಲ್ಲ. ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಜೀವಿಸಿದವರು.

ಕಮಲ ಕೆಸರಿನಲ್ಲಿಯೇ ಬೆಳೆಯುತ್ತದೆ. ಆ ಕೆಸರಿನ ರಸವನ್ನೇ ಹೀರಿ ಬೆಳೆಯುತ್ತದೆ. ಆದರೆ ಅದು ಎಂದಾದರೂ ಆ ಕೆಸರನ್ನು ಅಂಟಿಸಿಕೊಳ್ಳುತ್ತದೆಯೆ ? ಶಿವನೊಲಿಸಬಂದ ಪ್ರಸಾದ ಕಾಯವ ಚೆನ್ನಾಗಿ ಬಳಸಿಕೊಳ್ಳಬೇಕೆ ಹೊರತು, ಅದನ್ನು ನಿರ್ಲಕ್ಷಿಸಬಾರದು. ಪ್ರಕೃತಿಗೆ ವಿರುದ್ಧವಾದ ಕ್ರಿಯೆ ಹಲವಾರು ಅವಗಡಗಳಿಗೆ ಕಾರಣವಾಗಬಲ್ಲುದು. ಆದ್ದರಿಂದಲೇ ಶರಣರು ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಹೇಳಿದರು.

ಹೇರಲ್ಪಟ್ಟ ಸನ್ಯಾನತ್ವ ತುಂಬಾ ಅಪಾಯಕಾರಿಯಾದುದು. ಸೊನ್ನಲಿಗೆ ಸಿದ್ದರಾಮ ಶರಣರು, ಅಲ್ಲಪ್ರಭುಗಳಂತೆ ಐಚ್ಚಿಕ ಸನ್ಯಾಸದ ಹಂಬಲಿಗರಾದರೆ ತಪ್ಪಿಲ್ಲ. ಆದರೆ ಇಂದ್ರಿಯ ನಿಗ್ರಹ ಮಾಡಿದರೆ ಮಾತ್ರ ದೇವರನ್ನು ಒಲಿಸಬಹುದು ಬಹುದೊಡ್ಡ ಭ್ರಮೆ. ನಿದ್ದೆಯನ್ನೆ ಮಾಡಬೇಡ, ನೀರನ್ನೇ ಕುಡಿಯಬೇಡ, ಆಹಾರವನ್ನೇ ಉಣ್ಣದೆ ಹಾಗೆ ಇರು ಎಂದರೆ ಇರಲು ಸಾಧ್ಯವೆ ? ಮಲ ಮೂತ್ರ ಕೀವು ಮಾಂಸ ಮಜ್ಜೆಗಳಿಂದಾದ ಶರೀರ. ಕಾಲ ಕಾಲಕ್ಕೆ ದೈಹಿಕವಾದ ಆಕಾಂಕ್ಷೆಗಳಿಗೆ ಮನ ಸ್ಪಂದಿಸಬೇಕು. ಇಲ್ಲದೆ ಹೋದರೆ ದೇಹ ಹಾಗೂ ಮನಸ್ಸು ಬಾಧೆಗೆ ಒಳ ಪಡುತ್ತದೆ. ಕೆರೆ ಭರಪೂರವಾಗಿ ತುಂಬಿ ನಿಂತಿದೆ, ಆ ಕೆರೆಗೆ ಕೋಡಿಯೆ ಬಿಡದಿದ್ದರೆ ? ಆಗ ಕೆರೆಯ ಸಂರಕ್ಷಣೆಗೆ ಕಟ್ಟಿದ ಒಡ್ಡು ಒಡೆದು ಹೋಗುತ್ತದೆ.

ಶರಣರು ಯಾವತ್ತೂ ಬೂಟಾಟಿಕೆಯ ಬದುಕು ಮಾಡಿದವರಲ್ಲ. ಹೆಣ್ಣಿನೊಳಗೆ ಮನವಾದರೆ ಲಗ್ನವಾಗಿ ಕೂಡುವುದು ಎಂದು ಹೇಳಿದರು.

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು, ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ

ಆಧ್ಯಾತ್ಮಿಕ ಅನುಭೂತಿಗೆ, ಸಾತ್ವಿಕವಾದ ಬದುಕಿಗೆ ಹೆಣ್ಣು ವೈರಿ ಅಲ್ಲವೆ ಅಲ್ಲ. ಹೆಣ್ಣು,ಮಣ್ಣು, ಹೊನ್ನುಗಳನ್ನು ಬಳಸಲೇಬೇಕು. ಆದರೆ ಅವುಗಳ ನಡುವೆ ಕುಂಬಾರನ ಹುಳದಂತೆ ಇದ್ದೂ ಇಲ್ಲದಂತಿರಬೇಕು. ವಿಷಯ ವಾಸನೆಗಳಿಗೆ ಅಂಟಿಕೊಂಡು ಬದುಕನ್ನು ವ್ಯರ್ಥ ಮಾಡಬಾರದು. ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಸಹಜವಾಗಿ ಆಕರ್ಷಿಸುತ್ತದೆ. ಇದು ಪ್ರಕೃತಿ ಸಹಜ ಗುಣ. ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆ ಕೆಟ್ಟದು. ನನ್ನದಲ್ಲದ ವಸ್ತುವನ್ನು ನನ್ನದೆಂದು ಭೋಗಿಸುವುದು ಅನ್ಯಾಯ. ಇಲ್ಲಿ ಹೆಣ್ಣು ಕನಿಷ್ಠ ಗಂಡು ಶ್ರೇಷ್ಠ ಎಂಬ ಯಾವ ಭಾವವೂ ಇರಬಾರದು.

ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ

ಹೆಣ್ಣು ಗಂಡುಗಳ ಸಹ ಜೀವನವೆ ಪರಮ ಪವಿತ್ರ. ಆದರೆ ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ ಎಂಬಂತೆ ಜೀವಿಸಬೇಕಾದುದು ತುಂಬಾ ಮುಖ್ಯ. ಹೆಣ್ಣು ಹೇಗೆ ಗಂಡಿನ ಒಡವೆ ಅಲ್ಲವೋ ಹಾಗೆ ಗಂಡು ಹೆಣ್ಣಿನ ಒಡವೆಯೂ ಅಲ್ಲ. ಹೆಣ್ಣು ಗಂಡು ಎಂಬ ಉಭಯ ಕುಳವನ್ನು ಅರಿತು ಬದುಕಬೇಕಾಗಿದೆ.

 

ಲೇಖಕರು:ವಿಶ್ವಾರಾಧ್ಯ ಸತ್ಯಂಪೇಟ
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";