ಚುನಾವಣೆ-2023; ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಕಾಲೆಳೆಯುವ ಆಟ ಜೋರು!

ಉಮೇಶ ಗೌರಿ (ಯರಡಾಲ)

ಚನ್ನಮ್ಮನ ಕಿತ್ತೂರು (ಏ.1) : ಚುನಾವಣೆ ಘೋಷಣೆಯಾಗಿದೆ. ಟಿಕೆಟ್‌ಗಾಗಿ ಭಾರೀ ಪೈಪೋಟಿ ಮುಂದುವರಿದಿದೆ. ಕೆಲವು ಆಕಾಂಕ್ಷಿಗಳು ಪಕ್ಷಗಳ ಟಿಕೆಟ್‌ಗಾಗಿ ವಾಮಮಾರ್ಗ ಹಿಡಿದಿದ್ದು, ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

‌ಹೌದು…,ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲೂ ಟಿಕೆಟ್‌ಗಾಗಿ ಸ್ವಪಕ್ಷೀಯರದ್ದೆ ಕಾಲು ಎಳೆಯುವ ಆಟ ಜೋರಾಗಿದೆ. ಕೆಲವರು ತಮಗೆ ಟಿಕೆಟ್‌ ನೀಡಿ ಎಂದು ಕೇಳುವುದೇ ಇಲ್ಲ. ತಮ್ಮ ಪಕ್ಷದ ಪ್ರಬಲ ಆಕಾಂಕ್ಷಿ, ಶಾಸಕರು ಅಥವಾ ಮಾಜಿ ಶಾಸಕರಿಗೆ ಟಿಕೆಟ್‌ ತಪ್ಪಿಸಲು ವಿವಿಧ ರೀತಿಯ ತಂತ್ರ ಕುತಂತ್ರ ನಡೆಸುತ್ತಿದ್ದಾರೆ. ಅಂದರೆ ಹೇಗಾದರೂ ಅವರಿಗೆ ಟಿಕೆಟ್‌ ಕೈತಪ್ಪಿದರೆ ತನ್ನ ಕಿಸೆಯೊಳಗೆ ಟಿಕೆಟ್‌ ಬಂದು ಬೀಳಲಿದೆ ಎನ್ನುವುದ ಇವರ ಲೆಕ್ಕಾಚಾರ. ಇದರಿಂದ ಈಗ ಬಹುತೇಕ ಕ್ಷೇತ್ರದಲ್ಲಿ ಕಾಲೆಳೆಯುವ ಆಟವೇ ಜೋರಾಗಿ ನಡೆಯುತ್ತಿದೆ.

ಕೆಲವರು ವಿರೋಧಿ ಪಕ್ಷದೊಂದಿಗೂ ಕದ್ದುಮುಚ್ಚಿ ಶಾಮೀಲಾಗಿ ಸ್ವಪಕ್ಷೀಯ ಅಭ್ಯರ್ಥಿಯ ವಿರುದ್ಧವೇ ಮಸಲತ್ತು ನಡೆಸುತ್ತಿರುವುದೂ ರಹಸ್ಯವೇನಲ್ಲ. ಪ್ರಬಲ ಅಭ್ಯರ್ಥಿಗೆ ಟಿಕೆಟ್‌ ಕೈತಪ್ಪಿದರೆ ತಾವೇ ಗೆಲ್ಲಬಹುದು ಎಂದು ವಿರೋಧಿ ಪಕ್ಷದವರೂ ಇದಕ್ಕೆ ಕೈಜೋಡಿಸಿ ಅವರ ತೇಜೋವಧೆಗಿಳಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಅವರ ತೇಜೋವಧೆ ಮಾಡುವುದು, ಇಂತಹ ಕಾಲೆಳೆಯುವ ಆಟ ನಡೆಯುತ್ತಿದೆ.ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲೂ ಇಂತಹ ತೆರೆಯ ಮರೆಯ ಆಟಗಾರರು ಇದ್ದಾರೆ. 

ತಾವಾಗಿ ಟಿಕೆಟ್‌ ಕೇಳಿದರೆ ಸಿಗುವುದಿಲ್ಲ ಎನ್ನುವುದೂ ಇವರಿಗೆ ಗೊತ್ತು. ಅದೇ ಕಾರಣಕ್ಕೆ ಪ್ರಬಲ ಆಕಾಂಕ್ಷಿಗಳ ಕಾಲೆಳೆದು ಅಪಪ್ರಚಾರ ಮಾಡಿ ಅವರಿಗೆ ಟಿಕೆಟ್‌ ತಪ್ಪಿದರೆ ಸಾಕು. ತಮ್ಮದೆ ಹೆಸರು ಮೇಲೆ ಬರಲಿದೆ ಎಂದು ಇಂತಹ ಕೃತ್ಯಕ್ಕಿಳಿದಿದ್ದಾರೆ. ಪಕ್ಷದ ಅಧ್ಯಕ್ಷರು ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕಿದೆ ಎಂಬ ಆಗ್ರಹ ಆಯಾ ಪಕ್ಷಗಳ ಕಾರ್ಯಕರ್ತರಿಂದ ಕೇಳಿಬರುತ್ತಿದೆ.ಒಂದು ವೇಳೆ ಕಡಿವಾಣ ಹಾಕಿದರೂ ಕೂಡ ಈ ಭಾರಿ ಬಂಡಾಯದ ಬಿಸಿ ಭುಗಿಲೇಳುವ ಸಾಧ್ಯತೆ ಇದೆ ಎಂದು ರಾಜಕೀಯ ಲೆಕ್ಕಾಚಾರಿಗಳು ಹೇಳುತ್ತಿದ್ದಾರೆ.  

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";