‘ಏಕ ಭಾರತ ವಿಜಯೀ ಭಾರತ’ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ: ಪ್ರಸ್ತುತ. ಭಾಗ-2

ಉಮೇಶ ಗೌರಿ (ಯರಡಾಲ)

ಸ್ಮಾರಕ ನಿರ್ಮಾಣದ ಮಹಾಯಜ್ಞಕ್ಕೆ ಆರಂಭದ ವಿಘ್ನ

1963- ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷ. ಈ ದೇಶ ಕಂಡ ಅಪ್ರತಿಮ ವೀರಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಕನ್ಯಾಕುಮಾರಿಯಲ್ಲೊಂದು ಸ್ಮಾರಕ ನಿರ್ಮಿಸುವ ಪ್ರಯತ್ನ ಆರಂಭವಾಯಿತು.ಒಂದು ಕಾಲದಲ್ಲಿ ಇದು ಕನ್ಯಾಕುಮಾರಿಯಲ್ಲ, ಕನ್ನೆ ಮೇರಿಯ ಸ್ಥಳವೆಂದೂ, ಅದು ನಮಗೇ ಸೇರಬೇಕೆಂದು ವಿತಂಡವಾದ ಮಂಡಿಸಿದ್ದ ಕ್ರಿಶ್ಚಿಯನ್ ಮಿಷನರಿಗಳು ಈಗಲೂ ಸಹ, ವಿವೇಕಾನಂದರು ಧ್ಯಾನಸ್ಥರಾಗಿದ್ದ ಸಾಗರ ಮಧ್ಯದ ಬಂಡೆಯ ಮೇಲೆ ಸಂತ ಕ್ಸೇವಿಯರ್ ಸ್ಮಾರಕ ನಿರ್ಮಿಸಬೇಕೆಂದು ತಕರಾರು ತೆಗೆದರು.ಅಷ್ಟಕ್ಕೆ ಸುಮ್ಮನಾಗದೆ, ಅಲ್ಲಿ ಶಿಲೆಯ ದೊಡ್ದ ಶಿಲುಬೆಯನ್ನು ಸ್ಥಾಪಿಸಿದರು.ಈ ಬಗ್ಗೆ ಅನೇಕ ವಾದ- ವಿವಾದಗಳು ನಡೆದು,ಸಂಘರ್ಷಕ್ಕೆ ಕಾರಣವಾಗಿ, ಸ್ಥಳೀಯರು ರಾತ್ರೋರಾತ್ರಿ ಶಿಲುಬೆಯನ್ನು ಕಿತ್ತೊಗೆದರು.ಕೊನೆಗೆ ತಮಿಳುನಾಡು ಸರ್ಕಾರ ಮಧ್ಯ ಪ್ರವೇಶಿಸಿ, ಅದು ‘ವಿವೇಕಾನಂದ ಶಿಲೆ ‘ ಎಂದು ಘೋಷಿಸಿತು.ಆದರೆ ಅಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕೆಂಬ ಸ್ಥಳೀಯರ ಆಗ್ರಹವನ್ನು ತಳ್ಳಿಹಾಕಿತು.

ಸ್ವಾಮಿ ವಿವೇಕಾನಂದರ ಭಾವಚಿತ್ರ.

https://suddisaddu.com/News-ID.1704/ ಹಿಂದಿನ ಸಂಚಿಕೆಯಲ್ಲಿ ಸಂಬಂಧಿಸಿದ ಲೇಖನ

ಇದೇ ಸಮಯದಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ‘ವಿವೇಕಾನಂದ ಶಿಲಾ ಸ್ಮಾರಕ ಸಮಿತಿ’ ರಚನೆಯಾಗಿ,ಈ ಸಮಿತಿಯು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಂಪರ್ಕಿಸಿ, ಶಿಲಾ ಸ್ಮಾರಕಕ್ಕೆ ಕೈಜೋಡಿಸಬೇಕಾಗಿ ಮನವಿ ಮಾಡಿತು. ಹಾಗೆಯೇ ಚೆನ್ನೈನ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಸಹ ಸ್ಮಾರಕದ ಬಗ್ಗೆ ಆಸಕ್ತಿ ವಹಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ನಾಗಪುರಕ್ಕೆ ತೆರಳಿ ಆಗಿನ ಸರಸಂಘಚಾಲಕರಾದ  ಮಾಧವ ಸದಾಶಿವ ಗೋಳ್ವಲ್ಕರ್ ರವರನ್ನು ಭೇಟಿಮಾಡಿ ಸ್ಮಾರಕದ ವಿಚಾರವಾಗಿ ಚರ್ಚಿಸಿತು. ಗುರೂಜಿ ಎಂದೇ ಜನಜನಿತರಾದ  ಗೋಳ್ವಲ್ಕರ್ ಜೀ ರವರು ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿಯ ಅನ್ವೇಷಣೆಯಲ್ಲಿ ತೊಡಗಿದರು. ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿವೇಕಾನಂದರ ನುಡಿಮುತ್ತುಗಳ ಪುಸ್ತಕವನ್ನು ಸಂಪಾದಿಸಿದ್ದ, ಅಖಿಲಭಾರತ ಬೌದ್ಧಿಕ್ ಪ್ರಮುಖ್  ಏಕನಾಥ್ ರಾನಡೆಯವರೇ ಈ ಕಾರ್ಯಕ್ಕೆ ಸಮರ್ಥರು ಎಂದು ತೀರ್ಮಾನಿಸಿದರು.

ಗುರೂಜಿ ಮಾಧವ ಸದಾಶಿವ ಗೋಳ್ವಲ್ಕರ ಚಿತ್ರ

ಏಕನಾಥ್ ರಾನಡೆಯವರನ್ನು ವಿವೇಕಾನಂದ ರಾಕ್ ಸ್ಮಾರಕ ಸಮಿತಿಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.ಆ ಮೂಲಕ ಭವ್ಯ ಭಾರತದ ದಿವ್ಯ ಸ್ಮಾರಕ ನಿರ್ಮಾಣಕ್ಕೆ ರಾನಡೆಯವರ ರಂಗಪ್ರವೇಶವಾಯಿತು. ಆ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲವೆoಬ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಭಕ್ತವತ್ಸಲಂ ರವರ ದೃಢ ನಿಶ್ಚಯದ ನಡುವೆಯೂ,ಪರಿಸರ ನಾಶ ಮತ್ತು ಕೋಮು ಗಲಭೆಯ ನೆಪವೊಡ್ಡಿದ್ದ ಕೇಂದ್ರದ ಸಂಸ್ಕೃತಿ ಸಚಿವ ಹುಮಾಯೂನ್ ಕಬೀರರ ವಿರೋಧದ ನಡುವೆಯೂ, ಸ್ಮಾರಕ ನಿರ್ಮಾಣದ ಮಹಾಯಜ್ಞಕ್ಕೆ ಚಾಲನೆ ದೊರೆತಿತು.

ತ್ರಿ-ಸಮಸ್ಯೆಗಳನ್ನು ಜಯಿಸಿದ ತ್ರಿವಿಕ್ರಮ ರಾನಡೆಯವರು

ಹೆಗಲಲ್ಲೊಂದು ಬಟ್ಟೆಚೀಲ ತೂಗಿ, ಏಕನಾಥ ರಾನಡೆ ಯವರು ತನಗೆ ವಹಿಸಿದ್ದ ಬಹುದೊಡ್ಡ ಜವಾಬ್ದಾರಿಯ ನಿರ್ವಹಣೆಗೆ ಪ್ರೇರಣೆ ಬಯಸಿ,ನೇರವಾಗಿ ಕೋಲ್ಕತ್ತಾಗೆ ತೆರಳಿ, ದೈವಾಂಶ ಸಂಭೂತ ಶ್ರೀ ರಾಮಕೃಷ್ಣ ಪರಮಹಂಸರ ಪವಿತ್ರಕ್ಷೇತ್ರದ ಪಾದಸ್ಪರ್ಶ ಮಾಡಿದರು.ಬೇಲೂರು ಮಠಕ್ಕೆ ಭೇಟಿ ಕೊಟ್ಟು ಕಾಳಿಮಾತೆಯ ಎದುರು ಕುಳಿತು,ಕಾಳಿ ಹಾಗೂ ಪರಮಹಂಸರನ್ನು ಕುರಿತು ಧ್ಯಾನಸ್ಥರಾದರು. ಕಾರ್ಯಸಿದ್ಧಿಯಾಗುವ ಅಂತರ್ಗತ ಒಪ್ಪಿಗೆ ಅವರಿಗೆ ದೊರಕಿತು.ನಂತರ ರಾಮಕೃಷ್ಣ ಮಿಷನ್ನಿಗೆ ಭೇಟಿ ಕೊಟ್ಟು ಅದರ ಅಧ್ಯಕ್ಷರಾದ ಮಾಧವಾನಂದಜಿ ಮಹಾರಾಜ್ ರವರ ಆಶೀರ್ವಾದ ಪಡೆದರು. ಅಲ್ಲಿಂದ ಹೊರಟ ರಾನಡೆಯವರ ಪ್ರಯಾಣ ಕನ್ಯಾಕುಮಾರಿಯತ್ತ ಸಾಗಿತು. ಕನ್ಯಾಕುಮಾರಿ ತಲುಪಿ ದೇವಿಯ ಮುಂದೆ ಕುಳಿತು ಮತ್ತೊಮ್ಮೆ ಧ್ಯಾನಸ್ಥರಾದರು. ಅಲ್ಲಿಯೂ ಅವರಿಗೆ ಕಾರ್ಯಸಿದ್ಧಿಯ ಅಂತರ್ಗತ ಒಪ್ಪಿಗೆ ದೊರಕಿತು.ಇದೀಗ ರಾನಡೆಯವರು ಪುಟವಿಟ್ಟ ಚಿನ್ನದಂತಾದರು.

ಏಕನಾಥ ರಾನಡೆ ಜಿ ಭಾವಚಿತ್ರ.

 

ರಾನಡೆಯವರು ತಾನು ಕೈಗೊಂಡಿರುವ ಮಹಾಯಜ್ಞದ ಸಾಧಕ- ಬಾಧಕಗಳ ಬಗ್ಗೆ ಟಿಪ್ಪಣಿ ಸಿದ್ಧಪಡಿಸಿದರು.ಆ ಟಿಪ್ಪಣಿಯಲ್ಲಿ ಕೇಂದ್ರಸಚಿವರು ಮತ್ತು ತಮಿಳುನಾಡು ಸರ್ಕಾರದ ವಿರೋಧದ ಜೊತೆಗೆ, ಸ್ಥಳೀಯ ಕೆಲ ಕ್ರಿಶ್ಚಿಯನ್ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದ ಅಂಶವೂ ಸೇರಿತ್ತು. ಮರಾಠಿ ಮತ್ತು ಹಿಂದಿ ಭಾಷೆಯನ್ನು ಬಲ್ಲವರಾಗಿದ್ದ ರಾನಡೆಯವರಿಗೆ ತಮಿಳು ಭಾಷೆಯ ಗಂಧಗಾಳಿಯೂ ಗೊತ್ತಿರಲಿಲ್ಲ. ಅದನ್ನು ಕಲಿಯುವ ಜರೂರತ್ತು ಇದೀಗ ಅವರ ಮುಂದಿತ್ತು. .

ಮೊದಲ ವಿರೋಧದ ನಿವಾರಣೆಗೆ ರಾನಡೆಯವರು ಕಾರ್ಯೋನ್ಮುಖರಾದರು. ದೆಹಲಿಗೆ ತೆರಳಿ ಹುಮಾಯೂನ್ ಕಬೀರ್ ಅವರನ್ನು ಭೇಟಿಯಾಗಲು ಬಯಸಿದರು. ಆದರೆ ಕಬೀರರು ರಾನಡೆ ಅವರೊಂದಿಗಿನ ಭೇಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.ಚಾಣಕ್ಯಮತಿ ರಾನಡೆಯವರು ಅಲ್ಲಿಂದ ನೇರವಾಗಿ ಕೋಲ್ಕತ್ತಾಕ್ಕೆ ತೆರಳಿ ಪತ್ರಿಕಾಗೋಷ್ಠಿ ಕರೆದರು. ಮಾರನೇ ದಿನದ ಎಲ್ಲಾ ಪತ್ರಿಕೆಗಳಲ್ಲಿ ಕೋಲ್ಕತ್ತಾದ ಸುಪುತ್ರ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಕೋಲ್ಕತ್ತಾದ ಸಂಸದರಿಂದ ವಿರೋಧ ಸರಿಯೇ? ಎಂಬ ತಲೆಬರಹ ಪ್ರಕಟವಾಗಿದ್ದವು. ಕೊಲ್ಕತ್ತದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಈ ಒಂದೇ ಒಂದು ಪತ್ರಿಕಾಗೋಷ್ಠಿ, ರಾನಡೆ ಮತ್ತು ಹುಮಾಯುನ್ ಕಬೀರರ ನಡುವಿನ ಭೇಟಿಗೆ ಕಾರಣವಾಯಿತು. ಈ ಭೇಟಿಯ ನಂತರ ಸ್ವತಃ ಕಬೀರರೇ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ತನ್ನ ವಿರೋಧವಿಲ್ಲವೆoದು ಸ್ಪಷ್ಟನೆಯನ್ನಿತ್ತರು. ಅಲ್ಲಿಗೆ ಸ್ಮಾರಕ ನಿರ್ಮಾಣಕ್ಕಿದ್ದ ಮೊದಲ ತಡೆ ನಿವಾರಣೆಯಾಯಿತು.

ಹುಮಾಯೂನ್ ಕಬೀರ್ ರವರ ಭಾವಚಿತ್ರ.

ಈಗ ರಾನಡೆಯವರ ಮುಂದಿನ ಪಯಣ ಚೆನ್ನೈನತ್ತ. ಅಲ್ಲಿಗೋಗಿ ಮುಖ್ಯಮಂತ್ರಿ  ಭಕ್ತವತ್ಸಲಂರವರ ಭೇಟಿಯಾದರು. ಆದರೆ ಹಟಕ್ಕೆ ಬಿದ್ದಂತೆ ಭಕ್ತವತ್ಸಲo ರವರು ಸ್ಮಾರಕ ನಿರ್ಮಾಣವನ್ನು ವಿರೋಧಿಸಿದರು.ಅಲ್ಲಿಂದ ವಾಪಸ್ ಹೊರಟ ರಾನಡೆಯವರ ತಲೆಯ ತುಂಬ ಈ ತಡೆಯನ್ನು ದಾಟಲು ಬೇಕಾದ ಕಾರ್ಯತಂತ್ರವೊoದು ರೂಪುಗೊಳ್ಳುತ್ತಿತ್ತು. ರಾನಡೆಯವರು ನೇರವಾಗಿ ದೆಹಲಿ ತಲುಪಿ  ಲಾಲ್ ಬಹದ್ದೂರ್ ಶಾಸ್ತ್ರಿ ಅವರೊಂದಿಗೆ ಸ್ಮಾರಕದ ಕುರಿತು ಚರ್ಚಿಸಿದರು.ಅದು ಭಾರತ- ಚೀನಾ ನಡುವಿನ ಯುದ್ಧದ ಸಮಯವಾದ್ದರಿಂದ, ಶಾಸ್ತ್ರೀಜಿಯವರು ಸ್ವಲ್ಪ ಸಮಯ ಕಾಯಲು ತಿಳಿಸಿದರು.

ಆದರೆ ಯಾವತ್ತಿಗೂ ಕಾಯುವ ಜಾಯಮಾನ ರಾನಡೆಯವರದಾಗಿರಲಿಲ್ಲ. ಮುಂದೇನು ಮಾಡುವುದೆಂದು ರಾನಡೆಯವರು ಚಿಂತಿಸುತ್ತಿದ್ದರು. ಜನ್ಮಶತಾಬ್ದಿ ವರ್ಷ ಸಮೀಪಿಸುತ್ತಿತ್ತು. ರಾನಡೆಯವರ ಚಡಪಡಿಕೆ ಹೆಚ್ಚಾಯಿತು. ಅವರು ಮತ್ತೊಮ್ಮೆ ಶಾಸ್ತ್ರೀಜಿಯವರನ್ನು ಭೇಟಿಯಾಗಿ ಈ ಸ್ಮಾರಕದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು. ಸ್ಮಾರಕ ನಿರ್ಮಾಣಕ್ಕೆ ಸಂಪೂರ್ಣ ಬದ್ಧರಾಗಿದ್ದ ಶಾಸ್ತ್ರೀಜಿಗಳು, ರಾನಡೆಯವರಿಗೆ ಮೂರು ದಿನಗಳಲ್ಲಿ ಕೆಲವು ಸಂಸದರ ಒಪ್ಪಿಗೆ ಪತ್ರವನ್ನು ತರಬೇಕೆಂದು ಸೂಚಿಸಿದರು.

ಲಾಲ್ ಬಹದ್ದೂರ ಶಾಸ್ತ್ರಿ ಜಿ ಭಾವಚಿತ್ರ.

ಶಾಸ್ತ್ರೀಜಿಗಳ ಈ ಸೂಚನೆ ರಾನಡೆಯವರಿಗೆ ಜೀವನ್ಮರಣದ ಪ್ರಶ್ನೆಯಾಗಿತ್ತು. ಒಂದು ಕ್ಷಣವೂ ತಡಮಾಡದೆ ತಮ್ಮ ಪ್ರಯತ್ನ ಆರಂಭಿಸಿದರು.ಹಗಲು- ರಾತ್ರಿ ಎನ್ನದೆ ಎಲ್ಲಾ ರಾಜ್ಯಗಳ, ಎಲ್ಲಾ ಪ್ರಾಂತ್ಯಗಳ ಸಂಸತ್ ಸದಸ್ಯರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪತ್ರ ಪಡೆಯತೊಡಗಿದರು. ಶಾಸ್ತ್ರೀಜಿಯವರ ಗಡುವಿನಂತೆ ಮೂರು ದಿನಗಳ ನಂತರ ಸಂಸತ್ ಸದಸ್ಯರ ಒಪ್ಪಿಗೆ ಪತ್ರವನ್ನು ಅವರ ಕೈಗಿತ್ತರು. ಶಾಸ್ತ್ರೀಜಿಯವರು ನಿಜಕ್ಕೂ ಒಂದುಕ್ಷಣ ಅವಕ್ಕಾದರು. ಕೇವಲ ಮೂರೇ ದಿನಗಳಲ್ಲಿ 323 ಸಂಸತ್ ಸದಸ್ಯರ ಒಪ್ಪಿಗೆ ಪತ್ರ ಅವರ ಮುಂದಿತ್ತು. ರಾನಡೆಯವರ ಅಗಾಧ ಕಾರ್ಯತತ್ಪರತೆಗೆ ಶಾಸ್ತ್ರೀಜಿಯವರು ಮೂಕವಿಸ್ಮಿತರಾದರು.

ಮುಂದಿನ ಹಂತವಾಗಿ ಲೋಕಸಭೆಯಲ್ಲಿ ಸಂಸದರು ಈ ವಿಷಯವನ್ನು ಮಂಡಿಸುತ್ತಾರೆ. ಲೋಕಸಭಾ ಅಧಿವೇಶನದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಖಾಸಗಿ ಸಂಸ್ಥೆಯ ಮನವಿಯೊಂದು ಮಂಡನೆ ಆಗಿರುತ್ತದೆ.ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣದ ಆ ಮನವಿಗೆ ಬಹುಮತದಿಂದ ಒಪ್ಪಿಗೆಯೂ ದೊರಕುತ್ತದೆ.

ಇದೀಗ ರಾನಡೆಯವರ ಪಯಣ ಚೆನ್ನೈನತ್ತ ಸಾಗಿತು. ಎಲ್ಲಾ ಸಮುದಾಯಗಳಿಗೆ ಸೇರಿದ 323 ಸಂಸದರು ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿರುವ ಸುದ್ದಿ, ಲೋಕಸಭೆಯಲ್ಲಿ ಅದು ಅಂಗೀಕೃತವಾಗಿರುವ ಸುದ್ದಿ ದೇಶದಾದ್ಯಂತ ಬಿರುಗಾಳಿಯನ್ನೇ ಸೃಷ್ಟಿಸಿತು.ಇದೀಗ ತಮಿಳುನಾಡು ಮುಖ್ಯಮಂತ್ರಿಯವರ ವಿರೋಧ ಅರ್ಥವಿಲ್ಲ ದಂತಾಯಿತು.ಶ್ರೀ ಭಕ್ತವತ್ಸಲಂರವರ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ. ಕೂಡಲೇ ಅವರು ತಮ್ಮ ನಿರ್ಧಾರ ಪ್ರಕಟಿಸಿದರು. ‘ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ, ಆದರೆ ಆ ಸ್ಮಾರಕದ ವಿಸ್ತೀರ್ಣ 15 ×15 ಅಳತೆಯಲ್ಲಿರಬೇಕು‘. ಕೊಟ್ಟರೂ ಕೊಡದಂತಹ, ಬಿಟ್ಟರೂ ಬಿಡದಂತಹ ತೀರ್ಮಾನ ಅದಾಗಿತ್ತು.

ಎಂ.ಭಕ್ತವತ್ಸಲo ಭಾವಚಿತ್ರ

ರಾನಡೆಯವರು ಆಗಲೆಂದು ತಲೆಯಲ್ಲಾಡಿಸಿ ಹೊರಬಂದರು. ಅಷ್ಟರಲ್ಲಾಗಲೇ ರಾನಡೆಯವರಿಗೆ ಒಂದು ಗುಟ್ಟು ತಿಳಿದು ಹೋಗಿತ್ತು. ಶ್ರೀ ಭಕ್ತವತ್ಸಲಂ ರವರ ಮೂಗುದಾರ ಅಂದಿನ ಪ್ರಧಾನಿ ಶ್ರೀ ಜವಾಹರಲಾಲ್ ನೆಹರು ಮತ್ತು ಕಂಚಿಕಾಮಕೋಟಿ ಮಠದ ಸ್ವಾಮೀಜಿಯವರ ಬಳಿ ಇದೆ ಎಂಬುದು. ಅಂದರೆ ಅವರಿಬ್ಬರ ಮಾತಿಗೆ ಹೆಚ್ಚು ಗೌರವ ಕೊಡುತ್ತಾರೆಂಬ ಗುಟ್ಟು ಅದಾಗಿತ್ತು. ಅದರಂತೆ ರಾನಡೆಯವರು ಕಂಚಿಪೀಠಾಧ್ಯಕ್ಷರಾಗಿದ್ದ ಪೂಜ್ಯ ಪರಮಾತ್ಮಚಾರ್ಯರನ್ನು ಭೇಟಿ ಮಾಡಿ ಸ್ಮಾರಕದ ಮಾದರಿಯ ನೀಲನಕ್ಷೆ ರೂಪಿಸಿಕೊಡಲು ವಿನಂತಿಸಿದರು. ಹಾಗೆಯೇ ಇತರೆಡೆಯಿಂದಲೂ ಕೆಲವೊಂದು ಮಾದರಿಗಳನ್ನು ಸಿದ್ಧಪಡಿಸಿದರು. ಆ ಎಲ್ಲಾ ಮಾದರಿಗಳೊಂದಿಗೆ ರಾನಡೆಯವರು ಮತ್ತೊಮ್ಮೆ ತಮಿಳುನಾಡು ಮುಖ್ಯಮಂತ್ರಿಯವರನ್ನು ಭೇಟಿಯಾದರು.

ಬೇರೆಯವರು ತಯಾರಿಸಿದ ಮಾದರಿಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಮುಖ್ಯಮಂತ್ರಿಗಳು, ಪೂಜ್ಯ ಪರಮಾಚಾರ್ಯರು ನೀಡಿದ ಸ್ಮಾರಕ ಮಾದರಿಯನ್ನು ಅನುಮೋದಿಸಿದರು. ರಾನಡೆಯವರ ಆನಂದಕ್ಕೆ ಪಾರವೇ ಇರಲಿಲ್ಲ.ಕೇವಲ ಕೆಲವೇ ಕೆಲವು ದಿನಗಳ ಹಿಂದೆ ಇದೇ ಭಕ್ತವತ್ಸಲಂ ರವರು ಸ್ಮಾರಕ ನಿರ್ಮಾಣ ಬಿಲ್ ಕುಲ್ ಸಾಧ್ಯವಿಲ್ಲ ಎಂದದ್ದು, ಆನಂತರ ಕೇವಲ 15 ×15 ವಿಸ್ತೀರ್ಣದಲ್ಲಿರಲಿ ಎಂದದ್ದು ನೆನಪಾಗಿ ಮನದಲ್ಲೇ ನಕ್ಕರು. ಮತ್ತೆ ಇಂತಹ ಸಂದರ್ಭ ಇನ್ನೆಂದೂ ಸಿಗದೆಂದು ರಾನಡೆಯವರಿಗೆ ತಿಳಿದಿತ್ತು. ಹಾಗಾಗಿ ಭಕ್ತವತ್ಸಲಂ ರವರನ್ನು ‘ನೀವು ಕೇವಲ 15 ×15 ವಿಸ್ತೀರ್ಣದಲ್ಲಿರಲಿ ಎಂದಿದ್ದೀರಿ ಆದರೆ ಪೂಜ್ಯ ಪರಮಾತ್ಮಚಾರ್ಯರು ಬಹಳ ದೊಡ್ಡ ವಿಸ್ತೀರ್ಣದ ಮಾದರಿ ನೀಡಿದ್ದಾರೆ’ ಎಂದು ಚುಡಾಯಿಸಿದರು. ‘ಎಷ್ಟೇ ದೊಡ್ಡದಿರಲಿ ಚಿಂತೆಯಿಲ್ಲ,ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಿ’ ಎಂಬುದು  ಭಕ್ತವತ್ಸಲಂ ರವರ ಅಂತಿಮ ಒಪ್ಪಿಗೆಯಾಗಿತ್ತು.

ಕಂಚಿ ಕಾಮಕೋಟಿ ಮಠದ ಪೂಜ್ಯ ಪರಮಾತ್ಮಾಚಾರ್ಯರು

ಇದೀಗ ರಾನಡೆಯವರ ಟಿಪ್ಪಣಿಯ ಮೂರನೆಯ ಅಂಶ ಬಾಕಿ ಇತ್ತು. ಅದು ಕ್ರಿಶ್ಚಿಯನ್ ಮಿಷನರಿಗಳ ವಿರೋಧ. ಆದರೆ ದೀಪದ ಬೆಳಕಿಗೆ ಸಿಕ್ಕಿ ಕೀಟಗಳು ತಂತಾನೆ ಸುಟ್ಟುಹೋಗುವಂತೆ , ಕೇಂದ್ರದ ಸಚಿವರು, 323 ಸಂಸದರು, ತಮಿಳುನಾಡು ಮುಖ್ಯಮಂತ್ರಿಗಳ ಒಪ್ಪಿಗೆಯ ನಂತರ ಕ್ರಿಶ್ಚಿಯನ್ ಮಿಷಿನರಿಗಳ ಜಂಘಾಬಲವೇ ಉಡುಗಿ ಹೋಗಿತ್ತು. ಯಾವತ್ತೂ ನ್ಯಾಯ- ಸತ್ಯ-ಧರ್ಮಕ್ಕೆ ಗೆಲುವು ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು ಹಾಗಾಗಿ ರಾನಡೆಯವರು ಅತ್ಯಂತ ನಿರ್ಲಿಪ್ತತೆಯಿಂದ ಮೂರನೇ ಅಂಶದ ಮೇಲೆ ಕ್ರಾಸ್ ಮಾರ್ಕ್ ಎಳೆದರು. ಅಂತಿಮವಾಗಿ ಸ್ವಾತಂತ್ರ್ಯನಂತರದ ಭಾರತದ ಬಹುದೊಡ್ಡ ಸ್ಮಾರಕ ನಿರ್ಮಾಣವೆಂಬ ಮಹಾಯಜ್ಞಕ್ಕೆ ರಾನಡೆಯವರು ಭೂಮಿಕೆ ಸಿದ್ಧಪಡಿಸಿದ್ಧರು………

(ಮುಂದಿನ ಸಂಚಿಕೆಯಲ್ಲಿ :ಒಂದು ರೂ. ಕೂಪನ್, ಎಂಬತ್ತೈದು ಲಕ್ಷ ರೂ. ಕಲೆಕ್ಷನ್.) 

(ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಸಂಭ್ರಮಾಚರಣೆಯ ಸಮಾರೋಪ ದೇಶದೆಲ್ಲೆಡೆ ನಡೆಯುತ್ತಿದೆ. 2019 ರ ಸೆಪ್ಟೆಂಬರ್ 2ರಿಂದ ಆರಂಭಗೊಂಡಿರುವ ಈ ಸಂಭ್ರಮಾಚರಣೆಯು. ಕರ್ನಾಟಕದಲ್ಲೂ ಸಹ ಬೆಂಗಳೂರು, ಮೈಸೂರು ಮತ್ತು ಧಾರವಾಡ ಭಾಗಗಳಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. 31-10.-21 ರಂದು ಮೈಸೂರಿನ ಶ್ರೀ ಗೋವಿಂದರಾವ್ ಮೆಮೋರಿಯಲ್ ಹಾಲ್ ನಲ್ಲಿ ,14-11-21 ರಂದು ಧಾರವಾಡದಲ್ಲಿ , 21-11.21 ರಂದು ಬೆಂಗಳೂರಿನ ಜಿಗಣಿಯ ಕಲ್ಲುಬಾಳು ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಸಮಾರೋಪವಾಗಿರದೆ, ಸ್ವಾಮಿ ವಿವೇಕಾನಂದ ಸ್ಮಾರಕದ ಕರ್ತೃ ಏಕನಾಥ್ ಜೀ ರಾನಡೆಯವರ ಅದ್ವಿತೀಯ ಸಾಧನೆಯ ಸ್ಮರಣೆಯೂ ಆಗಿರುವುದು ಅರ್ಥಗರ್ಭಿತವಾಗಿದೆ.

ವಿವೇಕಾನಂದ ಕೇಂದ್ರಕ್ಕೆ ದೇಣಿಗೆ ನೀಡಬಯಸುವವರು ಹಾಗೂ ಅಲ್ಲಿನ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಸಂಪರ್ಕಿಸಿ: ವಿವೇಕಾನಂದ ಕೇಂದ್ರ ವಿದ್ಯಾಲಯ, ಕಲ್ಲುಬಾಳು, ಜಿಗಣಿ. ಸಂಪರ್ಕ ಸಂಖ್ಯೆ: 94486 70527)


ಲೇಖನ:ಮಣ್ಣೆ ಮೋಹನ್
(M)-6360507617
[email protected]

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";