ಲೇಖನ: ಸಿದ್ದರಾಮ ತಳವಾರ
“ಪಕ್ಷದೊಳಗಿದ್ದು ಪಕ್ಷವನ್ನು ಮೀರಿದ ರಾಜಕೀಯ ನಾಯಕತ್ವ ಬೇಕು,ಜಾತಿಯೊಳಗಿದ್ದು ಜಾತಿಯನ್ನು ಮೀರಿದ ನಾಯಕತ್ವ ಬೇಕು,ಧರ್ಮದೊಳಗಿದ್ದು ಧರ್ಮವನ್ನು ಮೀರಿದ ಧಾರ್ಮಿಕ ನಾಯಕತ್ವ ಬೇಕು” ಇಂತಹ ನಾಯಕತ್ವದ ಗುಣಗಳನ್ನು ಹೊಂದಿದವರು ನಮ್ಮ ನಡುವೆ ಇರುವುದು ತುಂಬ ವಿರಳ.ಅಂತಹ ವಿರಳಾತಿ ವಿರಳ ಜನಾನುರಾಗಿ ಜನಸೇವಕರಲ್ಲಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜಗದೀಶ ಹಾರುಗೊಪ್ಪ ಅವರು ಕೂಡ ಒಬ್ಬರು.
ಡಾ.ಜಗದೀಶ ಹಾರುಗೊಪ್ಪ ಅವರು ಗಂಗಪ್ಪ ಬಸವಂತಪ್ಪ ಹಾರುಗೊಪ್ಪ ಹಾಗು ಕಾಶವ್ವಾ ಗಂಗಪ್ಪ ಹಾರುಗೊಪ್ಪ ಉದರದಲ್ಲಿ ಹಿರಿಯ ಮಗನಾಗಿ 13 ಆಗಷ್ಟ1973 ರಂದು ಜನಿಸಿದರು.ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಇವರು ಉಳವಿಯಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ವ್ಯಾಸಂಗ ಮುಗಿಸಿ ನಂತರ ಉನ್ನತ ಶಿಕ್ಷಣವನ್ನು ಬೆಳಗಾವಿಯಲ್ಲಿ ಪಡೆದು ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಎಲ್ಲಾರ ಇರು ಇದ್ದು ಬಿಡು ನೀ ನರಳದಂತೆ
ಕೆಸರೊಳಿದ್ದು ಕೆಸರನಂಟಿಸಿಕೊಳದ ಕಮಲದಂತೆ
ಮುಳ್ಳೊಳಗಿನ ಮೃದು ಗುಲಾಬಿಯಂತೆ
ಜೇನ್ನೊಣಗಳ ದಂಡಿನಾ ರಾಣಿ ಜೇನಂತೆ
ಇದ್ದು ಬಿಡು ಜಗದೀಶ…..
ಬಡವರಾ ನೊಸಲಿನಾ ಬಸವ ವಿಭೂತಿಯಂತೆ
ದ್ವೇಷ, ಅಸೂಯೆ, ಮತ್ಸರಗಳ, ಮತಿಹೀನರ ಮಧ್ಯೆ
ಮಹಾ ಮೌನಿಯಂತೆ ಮಾನವೀಯತೆಯ ಮೇಧಾವಿಯಂತೆ.. ”
ಅನ್ನುವ ಹಾಗೆ ಸಮಾಜ ಸೇವೆ ಮಾಡುವ ಮೂಲಕ ಚನ್ನಮನ ಕಿತ್ತೂರು ನಾಡಿನಾದ್ಯಂತ ಮನೆ ಮಗನಾದ ಡಾ.ಜಗದೀಶ ಹಾರುಗೊಪ್ಪ
ಅಪ್ಪಟ ಬಸವ ತತ್ವನಿಷ್ಠ: ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಜಗದೀಶ ಹಾರುಗೊಪ್ಪ ಅವರು ಸಾಹಿತ್ಯ ಸಂಸ್ಕೃತಿ ಮತ್ತು ಸಂಘಟನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡವರು.
‘ಸ್ವಾತಂತ್ರ್ಯದ ಸವಿ ಸಾಮರಸ್ಯದಲ್ಲಿದೆ ‘ ಅನ್ನೋ ಸಾಂಕೇತಿಕ ಅಡಿಬರಹದಲ್ಲಿ ಕಿತ್ತೂರು ನಾಡಿನಾದ್ಯಂತ ಜಾತಿ ಮತ ಧರ್ಮಗಳ ಎಲ್ಲೆ ಮೀರಿ ಸಮಾಜದ ಸಾಮರಸ್ಯಕ್ಕಾಗಿ ಶ್ರಮಿಸುತ್ತಿರುವ ಪ್ರತಿಭಾನ್ವಿತರನ್ನು ಗುರುತಿಸಿ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸುವ ಮೂಲಕ ಸಾಮರಸ್ಯಕ್ಕೆ ಹೊಸದೊಂದು ಅರ್ಥವನ್ನೇ ಕಲ್ಪಿಸಿದವರು.
ʼಸ್ವಾಸ್ಥ್ಯ ಸಂಕಲ್ಪ’ದ ರಾಯಭಾರಿ: ‘ಯಥಾ ಆಹಾರ ತಥಾ ವಿಚಾರ’ ‘ಆರೋಗ್ಯವೇ ಭಾಗ್ಯ’ ಎಂಬ ಆಶಯದಡಿ ಸಮಾಜದಲ್ಲಿ ಸಾವಯವ ಆಹಾರದ ಬಳಕೆ ಜೊತೆಗೆ ಆರೋಗ್ಯದ ಕಾಳಜಿ ಕುರಿತು ಉಪನ್ಯಾಸಗಳ ಮೂಲಕ ಕಿತ್ತೂರು ನಾಡಿನ ಪ್ರತಿ ಶಾಲಾಕಾಲೇಜಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಸಾವಯವ ಕೃಷಿ ಉತ್ತೇಜಕ:ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಜಗಕ್ಕೆ ಅನ್ನ ನೀಡುವ ರೈತ ವಿಷ ಉಣಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು ದೇಸಿ ತಳಿಯ ಆಕಳುಗಳ ಬಳಕೆ, ರಾಸಾಯನಿಕ ಬದಲಿಗೆ ಸಾವಯವ ಗೊಬ್ಬರದ ಬಳಕೆಯನ್ನು ಸ್ವತಃ ಕೃಷಿಯಲ್ಲಿ ಬಳಸಿಕೊಂಡು ತರಹೇವಾರಿ ಕೃಷಿ ಉತ್ಪನ್ನಗಳನ್ನು ಬೆಳೆಯುವ ಮೂಲಕ ಸಾವಯವ ಕೃಷಿ ಸಾಧನೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.ಗೋವುಗಳ ಬಳಕೆ ಮತ್ತು ಉಪಯುಕ್ತತೆಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸುವ ಮೂಲಕ ದೇಸಿ ಸಂಸ್ಕೃತಿ ಉಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸನ್ಮಾನಗಳ ಸರದಾರ: ಸಮಾಜದ ಪ್ರತಿಯೊಂದು ಸ್ಥರದಲ್ಲೂ ಎಲೆ ಮರೆಯ ಕಾಯಿಯಂತೆ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಸತ್ಕರಿಸುವ ಮೂಲಕ ಡಾ.ಜಗದೀಶ ಹಾರುಗೊಪ್ಪ ಅವರು ಅವರ ಸಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಸಾಧಕರ ಬೆನ್ನು ಚಪ್ಪರಿಸುವ ಕೆಲಸ ಮಾಡಿದ್ದಾರೆ. ಇದೂವರೆಗೂ ಸುಮಾರು 2800 ಜನ ಸಾಧಕರನ್ನು ಸನ್ಮಾನ ಮಾಡಿದ ಸನ್ಮಾನಗಳ ಸರದಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
‘ಅನುಭವ ಮಂಟಪ’ ಹೆಸರಿನ ಕಲ್ಯಾಣ ಮಂಟಪವನ್ನು ನಿರ್ಮಿಸಿದ ಇವರು ಕೇವಲ ಉದ್ಯಮದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳದೇ ಸಮಾಜಮುಖಿ ಸಂಘಟನೆ ಸಾಹಿತ್ಯ ಸಂಸ್ಕೃತಿಗಳಿಗೆ ಮುಖ್ಯ ವೇದಿಕೆಯಾಗಿಯೂ ಈ ಅನುಭವ ಮಂಟಪವು ಸದ್ಬಳಕೆಯಾಗುತ್ತಿರುವುದು ವಿಶೇಷ.
ಮದ್ಯಮುಕ್ತ ಸಮಾಜ ನಿರ್ಮಾಣದ ಕನಸು: ಸಮಾಜದ ಸ್ವಾಸ್ಥ್ಯ ಕಾಪಾಡುವ ಸಂಕಲ್ಪ ಇಟ್ಟುಕೊಂಡು ಮದ್ಯವ್ಯಸನಿಗಳನ್ನು ಚಟಮುಕ್ತರನ್ನಾಗಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆ ಸಹಯೋಗದಲ್ಲಿ ಕಿತ್ತೂರು ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾಕಷ್ಟು ಜನ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದಾರೆ. ಕಿತ್ತೂರು ರಾಣಿ ಚನ್ನಮನ ಸುಪುತ್ರ ಡಾ.ಜಗದೀಶ ಹಾರುಗೊಪ್ಪ.
ಇಲ್ಲಿ ಅಲ್ಲಿ ಎಲ್ಲೆಲ್ಲೂ ಸಲ್ಲುವ ಸಮತಾವಾದಿ, ಸಮಾಜವಾದಿ, ಮಾನವತಾವಾದಿ, ಅಧ್ಯಾತ್ಮ ಬಂಧು, ವೈದ್ಯರತ್ನ, ಸ್ನೇಹ ಕಿರಣ, ಕಿತ್ತೂರಿನ ಕರ್ಣ ಆಗಿರುವ ಡಾ.ಜಗದೀಶ ಹಾರುಗೊಪ್ಪ ಅವರ 49 ಜನ್ಮದಿನ ಇಂದು .