ಸುದ್ದಿ ಸದ್ದು ನ್ಯೂಸ್
ಗೋಕಾಕ: ಜಾನಪದ ಅನಕ್ಷರಸ್ಥ ಹಳ್ಳಿಗರದು ಮಾತ್ರವಲ್ಲ, ಅಕ್ಷರಸ್ಥ ನಗರದವರಿಗೂ ಸಂಬಂಧಿಸಿದ್ದು ಎಂದು ಜಾನಪದ ಚಿಂತಕ ಡಾ. ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ‘ಜಾನಪದ ಸಾಹಿತ್ಯ’ ಕುರಿತು ಮಾತನಾಡುತ್ತ, ಹಳ್ಳಿಗಳಲ್ಲಿ ನಗರದ ಕನಸು ಇದೆ. ನಗರಗಳಲ್ಲಿ ಹಳ್ಳಿಯ ಅಂತಃಸತ್ವವಿದೆ. ಜಾನಪದ ಈಗಲೂ ಹುಟ್ಟುತ್ತಲಿದೆ. ನಗರ ಜಾನಪದ ಆಧುನಿಕ ಜಾನಪದ ತುಂಬ ಬೆಳೆಯುತ್ತಲಿದೆ. ಇಂದು ಜಾನಪದದ ಪರಿಕಲ್ಪನೆಯೇ ಬೇರೆಯಾಗುತ್ತಿದೆ. ಇದು ಜಾನಪದದ ಸತ್ವ-ಶಕ್ತಿ ಮತ್ತು ನಿರಂತರತೆಯ ಪ್ರತೀಕವೆಂದರು. ಜಾನಪದದ ಮೂಲ ಬೇರಿನಿಂದ ಬೆಳೆದ ಕನ್ನಡ ಸಾಹಿತ್ಯ-ಭಾಷೆ ಇಂದು ಭಾರತೀಯ ಭಾಷೆಗಳಲ್ಲಿಯೇ ಉತ್ಕೃಷ್ಟ ಸ್ಥಾನ ಪಡೆದಿದೆ ಎಂದು ಸಿ ಕೆ ನಾವಲಗಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿಕೊಂಡ ಮುಖ್ಯೋಪಾಧ್ಯಾಪಕಿ ಚೇತನಾ ಪಾಗಾದ ಮಾತನಾಡಿ ಆಂಗ್ಲ ಭಾಷೆಯೊಂದಿಗೆ ಕನ್ನಡಭಾಷೆ-ಸಂಸ್ಕೃತಿಯನ್ನು ತುಂಬ ಪ್ರೀತಿ-ಹೆಮ್ಮೆಯಿಂದ ನಮ್ಮ ಮಕ್ಕಳು ಕಲಿಯುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಸಿ.ಕೆ. ನಾವಲಗಿ ಮತ್ತು ವಿನೂತಾ ನಾವಲಗಿ ದಂಪತಿಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಸಮಸ್ತ ಸಾಹಿತಿಗಳ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ವಣ್ಣೂರ, ವಾಳ್ವೇಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಎಸ್.ಎ. ಹರಕುಣಿ ಸ್ವಾಗತಿಸಿದರು. ಬಿ.ಜಿ.ಪಾಟೀಲ ಪರಿಚಯಿಸಿದರು, ಪಿ.ಆರ್.ತಾಂವಶಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಕೆ.ಬಿ. ಪಾಟೀಲ ವಂದಿಸಿದರು.