‘ ಓಮಿಕ್ರಾನ್’ ಭೀತಿಗೆ “ನಾಗರಿಕತೆ” ನೆಲ ಕಚ್ಚದಿರಲಿ

ಉಮೇಶ ಗೌರಿ (ಯರಡಾಲ)

ಇಡೀ ಜಗತ್ತು ಕರೋನ ಹೊಡೆತದಿಂದ ಈಗ ಕೊಂಚ ಚೇತರಿಸಿಕೊಳ್ಳುತ್ತಿದೆ, ಇಂತಹ ಸಂದರ್ಭದಲ್ಲಿ ಓಮಿಕ್ರಾನ್ ಎಂಬ ರೂಪಾಂತರಿ ವೈರಾಣು ಬಗ್ಗೆ ಚರ್ಚೆ ಸಾಗಿರುವುದು ಆತಂಕಕಾರಿ ಬೆಳವಣಿಗೆ. ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳು ಕೊಂಚ ಚೇತರಿಸಿಕೊಂಡು ಬದುಕು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಓಮಿಕ್ರಾನ್ ಕತೆ ಶುರುವಾಗಿದೆ.

ಕರೋನ, ಮತ್ತೆ ಅದು ಬಿತ್ತಿದ ಭೀತಿ ನೆನಪಾದರೆ ಇಂದಿಗೂ ಭಯವಾಗುತ್ತಿದೆ. ಸ್ಯಾನಿಟೈಸರ್,ಮಾಸ್ಕ್, ಸೋಷಿಯಲ್ ಡಿಸ್ಟನ್ಸಿಂಗ್ ಪಾಲಿಸಿದವರೂ ಕರೋನ ಪಾಲಾದ ಮೇಲೆ ನಿಯಮಗಳು ವಿಶ್ವಾಸ ಕಳೆದುಕೊಂಡವು. ಈಗ ಹೊಸ ನಿಯಮಗಳನ್ನು ಹೇಳಬಹುದು, ಅದನ್ನು ಪಾಲಿಸಲು ಒತ್ತಾಯಿಸುವುದು ಸರಿಯಾದ ಕ್ರಮ. ಆದರೆ ನಮ್ಮ ಮಾಧ್ಯಮಗಳು ಸುದ್ದಿ ಬಿತ್ತುವ ಭರಾಟೆಯ ಪೈಪೋಟಿ ಎಲ್ಲ ವೈರಾಣುಗಳಿಗಿಂತ ಅಪಾಯಕಾರಿ.

ಮುಂದಿನ ದಿನಗಳಲ್ಲಿ ಮನುಷ್ಯ ವಿಭಿನ್ನ ರೀತಿಯ ಭೀತಿಯಲ್ಲಿ ಬದುಕುವ ಅನಿವಾರ್ಯತೆ ಇದೆ; ಅದಕ್ಕೂ ಹೊಂದಿಕೊಳ್ಳುತ್ತಾನೆ.ಆದರೆ ಅವನ ನಿತ್ಯದ ಉದ್ಯೋಗದ ಮೇಲೆ ದುಷ್ಪರಿಣಾಮ ಬೀಳುವಂತಹ ಆತಂಕಕಾರಿ ಸುದ್ದಿ ಬೇಡ.
ಇಂತಹ ಪ್ರಸಂಗದಲ್ಲಿ ಶ್ರಮಜೀವಿಗಳ ಬದುಕು ಅತಂತ್ರವಾಗುತ್ತದೆ. ಈಗಾಗಲೇ ಜಗತ್ತು ಆರ್ಥಿಕ ತುರ್ತುಪರಸ್ಥಿತಿ ಎದುರಿಸುತ್ತಿದೆ.‌ ಅದನ್ನು ನಿಭಾಯಿಸುವ ಚಿಂತನೆ ಮುಂದುವರೆದ ಹೊತ್ತಿನಲ್ಲಿ ಮತ್ತೊಂದು ಆಘಾತ.

ನೌಕರರು ಉದ್ಯೋಗ ಮಾಡುತಿರುವುದು

ಮಕ್ಕಳು ಶಾಲೆಯ ಕಡೆ ಮುಖ ಮಾಡಿ ಕಲಿಕೆಗೆ ಮನಸು ಮಾಡಿದ್ದಾರೆ. ಸಣ್ಣಪುಟ್ಟ ಉದ್ಯಮಗಳು ಅರಳುವ ಸಮಯವಿದು, ಈಗ ಹೊಸ ಭೀತಿ ಯಾವ ನ್ಯಾಯ?

ಕರೋನ ಎರಡನೇ ಅಲೆ ಬಂದಾಗ, ರೋಗದ ಪರಿಣಾಮಕ್ಕಿಂತ ಹೆದರಿ ಸತ್ತವರ ಸಂಖ್ಯೆ ಅಪಾರ.
ಪೂರ್ವ ನಿರ್ಧಾರದಂತೆ ಎರಡನೇ ಡೋಸ್ ಮುಗಿದಿದೆ, ವ್ಯಾಕ್ಸಿನೇಷನ್‌ ಉತ್ತಮ ಪರಿಣಾಮ ಬೀರಿದೆ ಎಂಬ ಸುದ್ದಿ ಹರಡುವ ಸಡಗರ ಬಹಳ ದಿನ ಉಳಿಯದಿದ್ದರೆ ಹೇಗೆ?

ಕಾಣದ ಕೈಗಳು ತೆಗೆದುಕೊಳ್ಳುವ ವಿಚಿತ್ರ ನಿರ್ಧಾರಗಳಿಗೆ ಸಾಮಾನ್ಯರು ಸದಾ ಬಲಿಯಾಗುವ ಅನಿಷ್ಟ ಪದ್ಧತಿ ನಿಲ್ಲಬೇಕು. ಯಾವದೋ ಒಂದು ‘ವ್ಯವಸ್ಥೆ’ ಈ ರೀತಿಯ ಭೀತಿ ಹುಟ್ಟಿಸಿ, ಜಗತ್ತನ್ನು ನಿಯಂತ್ರಣ ಮಾಡುತ್ತದೆ ಎಂಬ ಅನುಮಾನ ಕಾಡಬಾರದು.

ಶಾಲೆ ಪ್ರಾರಂಭವಾಗಿರುವುದು

ನಿರಂತರ ಪ್ರಕೃತಿ ವಿಕೋಪಗಳ ಮಧ್ಯೆ ತಮ್ಮದೇ ಆದ ಮುನ್ನೆಚ್ಚರಿಕೆ ಕ್ರಮದಿಂದ ಬದುಕುವ ದ್ವೀಪ ರಾಷ್ಟ್ರ ಜಪಾನ್ ನಮಗೆ ಮಾದರಿಯಾಗಲಿ.
ಸೂಕ್ತ ರೀತಿಯ ಎಚ್ಚರಿಕೆಗಳನ್ನು ‘ವಿಶ್ವ ಆರೋಗ್ಯ ಸಂಸ್ಥೆ’ ಕಾಲ ಕಾಲಕ್ಕೆ ನೀಡಲು ಮುಂದಾಗಲಿ, ಕರೋನ ಕಾಲದಲ್ಲಿ ಇದ್ದ ಗೊಂದಲ ಬೇಡ, ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಮುಂದಿನ ಹೆಜ್ಜೆ ಇಡುವುದು ಒಳಿತು. ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳು ಭೀತಿ ಕೇಂದ್ರಗಳಾಗಿ ಮಾರ್ಪಾಡಾಗದಿರಲಿ.

ಆರೋಗ್ಯ, ನೆಮ್ಮದಿ ಮನುಷ್ಯನ ಮೂಲ ಆಶಯ, ಆದರೆ ಮನುಷ್ಯ ಆರೋಗ್ಯಪೂರ್ಣ ಜೀವನಶೈಲಿ ಹೊಂದಿದ್ದರೂ ಅನಿರೀಕ್ಷಿತ ಆಘಾತಗಳಿಗೆ ಸಿಲುಕಿ ಬದುಕನ್ನು ಅಪೂರ್ಣಗೊಳಿಸಿಕೊಳ್ಳುವಂತಹ ವಾತಾವರಣ ಶುರುವಾಗಿದೆ.

ಬದುಕನ್ನು ಈಗ ಅಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವ ಅಗತ್ಯ ಹೆಚ್ಚಾಗಿದೆ. ವೈಜ್ಞಾನಿಕ ಮನೋಭಾವದ ಜೊತೆಗೆ ಬಲವಾದ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ತಮ್ಮ ಪಾಡಿಗೆ ತಾವು ದುಡಿಯುವ ಜೀವಗಳಿಗೆ ಇಂತಹ ಆಘಾತ ಸಹಿಸಲಾಗುವುದಿಲ್ಲ. ರೈತರ ಬೆಳೆಗಳು ನೀರು ಪಾಲಾಗಿವೆ. ಅನ್ನದಾತನ ಅಳಲನ್ನು ಕೊಂಚ ಆಲಿಸುವ ಮನಸುಗಳಿಗೆ ಈಗ ಓಮಿಕ್ರಾನ್ ಆತಂಕ. ಜಗದಳಲು ನಿಯಂತ್ರಣ ಮಾಡುವ ಹೊಣೆಗಾರಿಕೆ ಪ್ರಜ್ಞಾವಂತ ಸಮಾಜದ ಮೇಲಿದೆ. ಆ ಪ್ರಜ್ಞಾವಂತರ ಸಾಲಿನಲ್ಲಿ ‘ಮಾಧ್ಯಮಗಳು ಅಗ್ರಸ್ಥಾನದಲ್ಲಿ ಇರಲಿ.’

ಓಮಿಕ್ರಾನ್ ಭೀತಿಯಲ್ಲಿ ಜನ

ಈ ಭೀತಿಯ ಹಿಂದೆ ಯಾವುದೋ ‘ಲಾಬಿ’ ಕೆಲಸ ಮಾಡುತ್ತಿದೆ ಎಂಬ ಮಾತು ಸುಳ್ಳಾಗಲಿ. ವಿಮಾನ ನಿಲ್ದಾಣಗಳಲ್ಲಿ ನಡೆಯುವ ಪರೀಕ್ಷೆಯ ಅವತಾರಗಳನ್ನು ಅನಿವಾಸಿಗಳು ತರಾಟೆಗೆ ತೆಗದುಕೊಂಡಿದ್ದಾರೆ. ಭಯ ಹುಟ್ಟಿಸಿ ಜನರನ್ನು ಸುಲಿಗೆ ಮಾಡುವ ಮನಸ್ಥಿತಿ ತುಂಬಾ ಆತಂಕಕಾರಿ. ಜಾತಿ,ಧರ್ಮದ ಹೆಸರಿನಲ್ಲಿ ಶೋಷಣೆ ಒಂದು ಕಡೆಗೆ, ಮತ್ತೊಂದೆಡೆಗೆ ಆರೋಗ್ಯದ ನೆಪದಲ್ಲಿ ‘ನಾಗರಿಕತೆ’ ನೆಲ ಕಚ್ಚುವುದು ಬೇಡ.

 

 ಪ್ರೊ.ಸಿದ್ದು ಯಾಪಲಪರವಿ

ಲೇಖಕರು:ಪ್ರೊ. ಸಿದ್ದು ಯಾಪಲಪರವಿ.
ಕಾರಟಗಿ.(M)-9448358040

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";