ಸುದ್ದಿ ಸದ್ದು ನ್ಯೂಸ್
ಬೀಳಗಿ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿ ಬಂದು ನಿಂತಿದೆ ಎಂದರೆ ಮಠ ಮಾನ್ಯಗಳೂ ಸಹ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಡೆಯಲು ಪ್ರತಿಶತ 30 ರಷ್ಟು ಕಮಿಷನ್ ನೀಡಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಜಗದ್ಗುರು ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಭಾನುವಾರ ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ “ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆ”ಯ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ ಪ್ರತಿಶತ 30 ಕಡಿತ ಆದ ನಂತರವೇ ಕಾಮಗಾರಿ ಆರಂಭವಾಗುತ್ತದೆ. ಇಲ್ಲದೆ ಇದ್ದರೆ ಆಗುವುದಿಲ್ಲ ಎಂದು ಸ್ವತಃ ಅಧಿಕಾರಿಗಳೇ ಬಂದು ರೊಕ್ಕ ಕಡಿತ ಮಾಡದಿದ್ದರೆ ನಿಮ್ಮ ಕೆಲಸ ಆಗುವುದಿಲ್ಲ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ದೇಶದಲ್ಲಿ ಬುದ್ಧಿಗೇಡಿ ಸರ್ಕಾರಗಳು ಆಡಳಿತಕ್ಕೆ ಬರುತ್ತಿವೆ ಎಂದ ಅವರು ಕಾಂಕ್ರೀಟ್ ರಸ್ತೆ ಮೆಷಿನ್ ಹಚ್ಚಿ ಒಡೆಸಿ ಪೈಪ್‌ಲೈನ್ ಹಾಕಿ ನಳದ ಮೂಲಕ ನೀರು ಕೊಡುವ ಬದಲು ದೇಶದ ಬೆನ್ನೆಲುಬಾದ ರೈತರ ಹೊಲಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದರು. ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು-ನೋವಿಗೂ ಅಂಜದೇ ಹಗಲಿರುಳು ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿರೋಧಕ್ಕೆ ಇಲ್ಲಿಯ ರೈತರು ಸಿದ್ಧರಾದರೆ ಮಾತ್ರ ನಿಮಗೆ ಅನ್ನ ಅಂಬಲಿ ಸಿಗುವುದು ಇಲ್ಲದಿದ್ದರೆ ಏನೂ ಸಿಗುವುದಿಲ್ಲ. ಆದ್ದರಿಂದ ನೀವು ಬಹಳ ಜಾಣರಾಗಬೇಕು ಎಂದು ಕಿವಿಮಾತು ಹೇಳಿದರು.