ಧಾರವಾಡ : ಧಾರವಾಡದಿಂದ ಬೆಳಗಾವಿಗೆ ರಸ್ತೆ ಮಾರ್ಗವಾಗಿ ಹೋದರೆ ಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಆದರೆ, ರೈಲಿನ ಮುಖಾಂತರ ಹೋದರೆ ಮೂರು ಗಂಟೆ ಸಮಯ ಬೇಕಾಗುತ್ತದೆ. ಇದಕ್ಕೆ ಕಾರಣ ರೈಲು ಸುತ್ತು ಬಳಸಿ ಹೋಗಬೇಕಾಗುತ್ತದೆ. ಹೀಗಾಗಿ, ಧಾರವಾಡದಿಂದ ನೇರವಾಗಿ ಬೆಳಗಾವಿಗೆ ರೈಲು ಮಾರ್ಗ ಮಾಡಬೇಕು ಅನ್ನುವುದು ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಕೂಗು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದಾಗ ಈ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತು.ಅಷ್ಟೇ ಅಲ್ಲ, ಭೂಸ್ವಾಧೀನ ಪ್ರಕ್ರಿಯೆ ಕೂಡ ಅತಿ ವೇಗವಾಗಿ ನಡೆಯಿತು. ಆದರೆ ಅವರು ಮೃತಪಟ್ಟ ನಂತರ ಆ ಕೆಲಸ ಗತಿ ನಿಧಾನವಾಗಿದೆ ಅನ್ನೋ ಆರೋಗಳು ಕೇಳಿ ಬರುತ್ತಿವೆ. ಈ ಮಧ್ಯೆ ಈ ರೈಲು ಮಾರ್ಗಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಈಗಾಗಲೇ ಸಂಬಂಧಿಸಿದ ಯೋಜನೆ 927 ಕೋಟಿ ರೂಪಾಯಿ ತಗುಲಿದೆ ಅಂತಾ ಹೇಳಲಾಗಿದ್ದು, ಅದಕ್ಕೆ 2019 ರಲ್ಲಿಯೇ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಆದರೆ ಇದೀಗ ಈ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಯ ಅಲೈನ್ ಮೆಂಟ್‌ನ ಬದಲಾವಣೆ ಮತ್ತು ಮರು ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಿದ್ದರಿಂದ ವಿಳಂಬವಾಗುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
ಈಗಾಗಲೇ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದರಿಂದ ಕೆಲಸ ಕೂಡ ಅತಿ ಶೀಘ್ರದಲ್ಲಿ ಆರಂಭವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಈ ಯೋಜನೆಗೆ ಸಣ್ಣದೊಂದು ಅಡ್ಡಿಯಾಗಿದೆ. ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ಕೃಷಿ ಭೂಮಿ ಈ ಯೋಜನೆಗೆ ಹೋಗಲಿದೆ. ಆದರೆ, ಆ ಜಮೀನಿನ ಪಕ್ಕದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಸರಕಾರಿ ಭೂಮಿಯಿದೆ. ಕೃಷಿಕರ ಭೂಮಿ ಕೈಬಿಟ್ಟು ಸರಕಾರಿ ಭೂಮಿಯಲ್ಲಿ ರೈಲು ಮಾರ್ಗ ನಿರ್ಮಾಣ ಮಾಡಿದರೆ ಒಳ್ಳೆಯದು ಅನ್ನುವ ಸಲಹೆ ಕೇಳಿ ಬಂತು. ಈ ಸರಕಾರಿ ಭೂಮಿ ಮೂಲಕ ಮಾರ್ಗ ರೂಪಿತವಾದರೆ ಕನಿಷ್ಠ 5-6 ಕಿಮೀ ದೂರ ಕಡಿಮೆಯಾಗಲಿದೆ.
ಜೊತೆಗೆ, ಯೋಜನಾ ವೆಚ್ಚದಲ್ಲಿಯೂ ಉಳಿತಾಯವಾಗಲಿದೆ ಎಂದು ಅನೇಕ ಜನಪ್ರತಿನಿಧಿಗಳು ಸಲಹೆ ನೀಡಿದ್ದರು. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದ ನೈರುತ್ಯ ರೈಲ್ವೆಯು, ಮಾರ್ಗ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಂಡು, ಯೋಜನಾ ವೆಚ್ಚಕ್ಕೆ ಹೆಚ್ಚುವರಿಯಾಗಿ ಮತ್ತೆ 250 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಪ್ರಸ್ತಾಪ ಇಟ್ಟಿದೆ. ಇದಕ್ಕೆ ತೀವ್ರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಸರಕಾರಿ ಭೂಮಿ ಮೂಲಕ ಮಾರ್ಗವನ್ನು ಮಾಡುವುದರಿಂದ ರೈತರಿಗೆ ಕೊಡಬೇಕಾದ ಪರಿಹಾರದ ಮೊತ್ತ ಉಳಿಯಲಿದೆ. ಆದರೂ ಹೆಚ್ಚುವರಿಯಾಗಿ 250 ಕೋಟಿ ರೂಪಾಯಿ ಏಕೆ ಎಂಬುದು ಅವರ ಪ್ರಶ್ನೆ.
ಇದೀಗ ಹೊಸ ಪ್ರಸ್ತಾಪದ ಪ್ರಕಾರ ಹೆಚ್ಚುವರಿ 250 ಕೋಟಿ ರೂಪಾಯಿ ಹಣ ಖರ್ಚು ಮಾಡುವ ಬದಲು ಅದನ್ನೇ ಹಳೆಯ ಪ್ರಸ್ತಾಪದ ಪ್ರಕಾರ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪರಿಹಾರದ ರೂಪದಲ್ಲಿ ನೀಡಿ ಅನ್ನೋದು ಜನಪ್ರತಿನಿಧಿಗಳ ವಾದ. ಇಲ್ಲದಿದ್ದರೆ ಇನ್ನೊಮ್ಮೆ ಮರು ಸಮೀಕ್ಷೆ ಕೈಗೊಂಡು ವೆಚ್ಚ ಹೆಚ್ಚಳವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಜನಪ್ರತಿನಿಧಿಗಳ ಈ ಸಲಹೆಗೆ ರೈಲ್ವೆ ಅಧಿಕಾರಿಗಳು ಇನ್ನೊಮ್ಮೆ ಸಮೀಕ್ಷೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ . ಆದರೆ ಈ ಕಾರ್ಯ ಮಾತ್ರ ಇನ್ನು ಕೂಡ ಆರಂಭವಾಗಿಲ್ಲ. ಇದು ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಮಗಾರಿ ಮುಗಿಯೋದು ಯಾವಾಗ?: ಮರು ಸಮೀಕ್ಷೆ ಕೈಗೊಂಡು ಅದಕ್ಕೆ ತಕ್ಕಂತೆ ಮಾರ್ಗ ವಿನ್ಯಾಸ ಹಾಗೂ ಮರು ಹೊಂದಾಣಿಕೆ (ಅಲೈನ್‌ಮೆಂಟ್) ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲವೂ ಮುಗಿದ ಬಳಿಕ ಸ್ವಾಧೀನ ಪಡಿಸಿಕೊಳ್ಳುವ ಭೂಮಿ ಸಮೀಕ್ಷೆ ನಡೆಸಬೇಕು. ನಂತರ ಸ್ವಾಧೀನ ಪ್ರಕ್ರಿಯೆ ಸುಸೂತ್ರವಾಗಿ ಪೂರ್ಣಗೊಂಡು ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕು. ನಂತರದಲ್ಲಿ ಟೆಂಡರ್ ಕಾರ್ಯ ಮತ್ತು ಕಾಮಗಾರಿ ಅನುಷ್ಠಾನ ಆರಂಭವಾಗಬೇಕು. ಇದುವರೆಗೂ ಮಾರ್ಗದ ನೀಲನಕ್ಷೆಯೇ ಅಂತಿಮಗೊಂಡಿಲ್ಲ. ಹೀಗಾಗಿ ಈ ಪ್ರಕ್ರಿಯೆ ಎಂದು ಮುಗಿಯುವುದು ಯಾವಾಗ ಅನ್ನುವುದು ಜನರ ಪ್ರಶ್ನೆ
ಈ ಯೋಜನೆಗೆ ಬೇಕಾಗಿರುವ ಭೂಮಿ ಎಷ್ಟು?: ಈ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಒಟ್ಟು 827.78 ಎಕರೆ (335 ಹೆಕ್ಟೇರ್ ) ಭೂಮಿ ಬೇಕು. ಈ ಮಾರ್ಗದ ಒಟ್ಟು ಉದ್ದ 73 ಕಿಮೀ. ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಧಾರವಾಡದಿಂದ 7 ನೇ ಕಿ.ಮೀ. ನಿಂದ 26 ಕಿಮೀವರೆಗೆ 255.93 ಎಕರೆ ಹಾಗೂ ಬೆಳಗಾವಿ ಜಿಲ್ಲೆ ವ್ಯಾಪ್ತಿಯ 26 ನೇ ಕಿ.ಮೀ. ನಿಂದ 73 ಕಿ.ಮೀ. ವರೆಗೆ 601 ಎಕರೆ ಭೂಮಿ ಬೇಕಾಗುತ್ತದೆ ಈ ಮುಂಚೆ ಅಂದಾಜು ಮಾಡಲಾಗಿತ್ತು. ಇದೀಗ ಕೆ.ಕೆ. ಕೊಪ್ಪ ಗ್ರಾಮದ ಸುತ್ತಮುತ್ತ ನಡೆಸಿದ ಮರುಸಮೀಕ್ಷೆಯಲ್ಲಿ ಮತ್ತಷ್ಟು ಭೂಮಿ ಬೇಕಾಗಬಹುದು ಎನ್ನಲಾಗಿದೆ
ಧಾರವಾಡ ಜಿಲ್ಲೆಯಲ್ಲಿ ಮುಗಿದಿರೋ ಸರ್ವೆ ಕಾರ್ಯ: ಬೆಳಗಾವಿ ಜಿಲ್ಲೆಗೆ ಹೋಲಿಸಿದರೆ ಧಾರವಾಡದ ಕಂದಾಯ ಇಲಾಖೆ ಅಧಿಕಾರಿಗಳು ಸಾಕಷ್ಟು ಬೇಗನೆ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ. ಧಾರವಾಡ ಜಿಲ್ಲೆಯ ಭಾಗದ ರೈಲು ಮಾರ್ಗಕ್ಕೆ ಬೇಕಾಗುವ ಜಮೀನು ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರೈತರಿಗೆ ಭೂ ಪರಿಹಾರ ಮೊತ್ತ ಅಂದಾಜು 22 ಕೋಟಿ ರೂಪಾಯಿಯ ಬೇಡಿಕೆಯ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಡಾ . ಬಿ . ಗೋಪಾಲಕೃಷ್ಣ ತಿಳಿಸಿದ್ದಾರೆ. ಐಐಟಿ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಕೇಂದ್ರದ ಅನುಮತಿ ಪಡೆಯುವಂತೆ ಐಐಟಿಯವರು ತಿಳಿಸಿದ್ದು, ಸರಕಾರಕ್ಕೆ ಪತ್ರ ಬರೆಯಲಾಗಿದೆ.ಅದೊಂದು ಭಾಗದ ಸಮೀಕ್ಷೆ ಮುಗಿದರೆ ಪೂರ್ಣಗೊಂಡಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ
ಧಾರವಾಡ – ಬೆಳಗಾವಿ ರೈಲು ಮಾರ್ಗ ಯೋಜನೆಗೆ ಕೆಕೆ ಕೊಪ್ಪ ಬಳಿ ಹೆಚ್ಚುವರಿ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಪಕ್ಕದ ಸರಕಾರಿ ಭೂಮಿ ಬಳಸಿಕೊಂಡರೆ ಆರ್ಥಿಕವಾಗಿ ಉಳಿತಾಯವಾಗುತ್ತದೆ. ಅಲ್ಲದೇ ರೈತರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.:– ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ.
ಬೆಳಗಾವಿ ತಾಲೂಕು ರಾಜಹಂಸಗಡ ಬಳಿಯ ರೈಲು ಮಾರ್ಗ ಅಲೈನ್‌ಮೆಂಟ್ ಮರುಪರಿಶೀಲಿಸುವಂತೆ ಸಂಸದ ಈರಣ್ಣ ಕಡಾಡಿಯವರು ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸಿದಾಗ ಎತ್ತರ ಪ್ರದೇಶದಲ್ಲಿ ಸುರಂಗ ಕೊರೆಯಬೇಕಾಗಬಹುದು . ಇದರಿಂದ ವೆಚ್ಚ ಹೆಚ್ಚಾಗುತ್ತದೆ ಎಂಬುದು ಗೊತ್ತಾಯಿತು. ಇದರ ಹೊರತಾಗಿ ಕಡಿಮೆ ಭೂಮಿ, ಖರ್ಚು ಹೆಚ್ಚಾಗದಂತೆ ಪರ್ಯಾಯ ಅಲೈನ್ ಮೆಂಟ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.:-ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಆನೀಶ್ ಹೆಗಡೆ.
ವರದಿ: ನರಸಿಂಹಮೂರ್ತಿ ಪ್ಯಾಟಿ