ಸರಾಯಿ ಭಾಗ್ಯ ನೀಡಿ ʼಕುಡುಕರ ತೋಟʼ ಮಾಡುತ್ತಿದೆ ಧನಪಿಶಾಚಿ ಸರ್ಕಾರ: ಮಾಜಿ ಸಿಎಂ ಹೆಚ್.ಡಿ.ಕೆ.

ಬೆಂಗಳೂರು,(ಸೆ.24): ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆಮನೆಗೂ ಮದ್ಯಭಾಗ್ಯ ನೀಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಸರ್ಕಾರವು ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆಗೆ ಮುನ್ನ ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಿದ್ದರು, ಗೆದ್ದ ನಂತರ ಕರ್ನಾಟಕ ಕುಡುಕರ ತೋಟ ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಲ್ಪ ಎಂದು ಅವರು ಟೀಕಿಸಿದ್ದಾರೆ.

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು. ಖೊಟ್ಟಿ ಗ್ಯಾರಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತೀ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು ಎಂದಿದ್ದಾರೆ. ಅಕ್ಕಿ, ಬೇಳೆ, ದವಸ ಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವ. ಇದೇನಾ ಸಮಾಜವಾದ ಎಂದು ಅವರು ಪ್ರಶ್ನಿಸಿದ್ದಾರೆ.

3,000 ಜನಸಂಖ್ಯೆಯುಳ್ಳ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರ್‍ತೆಗೆದು ಮನೆಹಾಳು ಮಾಡಲಿದೆ ಸರ್ಕಾರ. ಸುಳ್ಳು ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಎದುರಾಗಿದೆ ಸಂಚಕಾರ. ಇದು ಮನೆಹಾಳು ಸರ್ಕಾರ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ನಾರಿಯರಿಗೆ ಶಕ್ತಿ ತುಂಬುತ್ತೇವೆ ಎಂದ ಸರ್ಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ಗೃಹಲಕ್ಷ್ಮೀ ಎಂದ ಸರ್ಕಾರ ಅವರ ಬಾಳಿಗೆ ಗ್ರಹಣವಾಗಿದೆ. ಗೃಹಜ್ಯೋತಿ ಎಂದ ಸರ್ಕಾರ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ. ಅನ್ನಭಾಗ್ಯ ಎಂದ ಸರ್ಕಾರ, ಈಗ ಮದ್ಯಭಾಗ್ಯ ಎನ್ನುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

 ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸರಾಯಿ ಪಾಕೇಟ್‌  ಹಾಗೂ ಲಾಟರಿ ಬಂದ ಮಾಡಿ ಮಾದರಿ ಮುಖ್ಯಮಂತ್ರಿ ಅನಸಿಕೊಂಡಿದ್ದರು. 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";