ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಿಜಾಬಗೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಪ್ರತಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಕಾಲೇಜಿನ ಬಿಕಾಂ ವಿಭಾಗದಲ್ಲಿ ಉಪನ್ಯಾಸಕಿಯೊಬ್ಬರು ಹಿಜಾಬ್ ಧರಿಸಿ ಆಗಮಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗಳು ಸರ್ಕಾರದ ನಿಯಮ ಉಲ್ಲಂಘಿಸಿ ಪ್ರವೇಶಕ್ಕೆ ಅವಕಾಶ ನೀಡಿದ್ದು, ತರವಲ್ಲ ಎಂದು ಆರೋಪಿಸಿ, ಕೇಸರಿ ಶಾಲು ಧರಿಸಿ, ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರರ ಮಧ್ಯ ವಾಗ್ವಾದ ನಡೆಯಿತು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಉದ್ರಿಕ್ತಗೊಂಡ ವಾತಾವರಣ ತಿಳಿಗೊಳಿಸಿದರು. ಬಳಿಕ ಬಿ.ಕಾಂ ವರ್ಗ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲಾಯಿತು.
ಪ್ರಕರಣದ ಹಿಂದೆ ಎರಡೂ ಸಂಘಟನೆಗಳ ಪ್ರಚೋದನೆ ಕಾರಣ ಇರುವ ಸಾಧ್ಯತೆ ಇದೆ ಎಂದು ಸಾರ್ವಜನಿಜರು ಮಾತನಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂತು.