ಚುನಾವಣೆ ನಡೆದು ಒಂದೂವರೆ ವರ್ಷದ ನಂತರ ಮರು ಮತ ಎಣಿಕೆಗೆ ಕೋರ್ಟ್​ ಆದೇಶ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಪಂಚಾಯತ್​ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಮರು ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶ ಹೊರಡಿಸಿದ್ದು, ಎಲ್ಲರ ಚಿತ್ತ ಕೋರ್ಟ್​ನತ್ತ ನೆಟ್ಟಿದೆ. ಈ ಆದೇಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬರುವ ಅ.20 ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶ ಕೂಡ ಡಿ.30 ರಂದು ಹುಕ್ಕೇರಿಯಲ್ಲಿ ಪ್ರಕಟವಾಗಿತ್ತು. ಈ ಚುನಾವಣಾ ಫಲಿತಾಂಶದಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ 2ರ ಹಿಂದುಳಿದ “ಬ” ಸ್ಥಾನಕ್ಕೆ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದು ಕೊನೆಗೆ ಕೇವಲ ಒಂದೇ ಒಂದು ಮತದಿಂದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದರು. ಆದರೆ, ಈ ಬಗ್ಗೆ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಮರು ಮತ ಎಣಿಕೆ ನಡೆಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು.

ಒಂದು ಮತದಿಂದ ಸೋತ್ತಿದ್ದ ಹೆಬ್ಬಾಳ ಗ್ರಾಮದ ರಾವಸಾಹೇಬ ಪಾಟೀಲ, ಸಂಕೇಶ್ವರ ಪಟ್ಟಣದ ದಿವಾನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಾದ ಪ್ರತಿ ವಾದ ಆಲಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಅವರು ಮರು ಎಣಿಕೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಕೋರ್ಟ್ ತೀರ್ಪಿನಿಂದ ಸೋತ ಅಭ್ಯರ್ಥಿ ಹುಮ್ಮಸ್ಸಿನಲ್ಲಿದ್ದರೆ, ಗೆದ್ದ ಅಭ್ಯರ್ಥಿಗೆ ಕಳವಳ ಶುರುವಾಗಿದೆ. ಇತ್ತ ಕೋರ್ಟ್‌ ಆದೇಶವೂ ಕುತೂಹಲ ಮೂಡಿಸಿದೆ. ರಾವಸಾಹೇಬ್ ಪರವಾಗಿ ನ್ಯಾಯವಾದಿ ಸಂಜು ಮಗದುಮ್ ವಾದ ಮಂಡಿಸಿದ್ದಾರೆ.

ಇನ್ನು, 2020 ಡಿಸೆಂಬರ್ 30 ರಂದು ನಡೆದ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿ 506 ಮತಗಳನ್ನು ಪಡೆದಿದ್ದರು‌. ಪರಾಜಿತ ಅಭ್ಯರ್ಥಿ ರಾವಸಾಹೇಬ ಪಾಟೀಲ 505 ಮತಗಳನ್ನು ಪಡೆದು ಒಂದು ಮತದಿಂದ ಸೋತಿದ್ದರು. ಅಂದು ಚುನಾವಣಾ ಅಧಿಕಾರಿಗಳಿಗೆ ಮರು ಮತ ಎಣಿಕೆ ನಡೆಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಗೆದ್ದ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾವಸಾಹೇಬ ಪಾಟೀಲ, ಕೋರ್ಟ್ ಮೂಲಕ ಮರು ಮತ ಎಣಿಕೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ವರ್ಷ, ಹತ್ತು ತಿಂಗಳ ಬಳಿಕ ಕೋರ್ಟ್ ಮರು ಎಣಿಕೆಗೆ ಆದೇಶಿಸಿದ್ದು, ಹಲವು ಗೊಂದಲಕ್ಕೂ ಕಾರಣವಾಗಿದೆ. ಈಗ ಮರು ಮತ ಎಣಿಕೆ ವೇಳೆ ರಾವಸಾಹೇಬ ಪಾಟೀಲ ಗೆದ್ದರೆ, ಸೋತ ಅಭ್ಯರ್ಥಿ ಎರಡು ವರ್ಷ ಅಧಿಕಾರ ಅನುಭವಿಸಿದ ದಾಖಲೆ ಬರೆದಿದ್ದಾರೆ‌. ಇತ್ತ ಸೋತ ಅಭ್ಯರ್ಥಿ ರಾವಸಾಹೇಬ್ ಚುನಾವಣೆಯಲ್ಲಿ ಗೆದ್ದರೆ ಎರಡು ವರ್ಷಗಳ ಅಧಿಕಾರದಿಂದ ವಂಚಿತನಾಗುತ್ತಾರೆ. ಸದ್ಯ ಎರಡು ವರ್ಷಗಳಿಂದ ಪಂಚಾಯಿತಿ ಸದಸ್ಯನಾಗಿರುವ ವ್ಯಕ್ತಿಗೆ ಅನರ್ಹತೆ ಭೀತಿಯೂ ಎದುರಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";