ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ವೈಯಕ್ತಿಕವಾಗಿ ನಮಗೆ ಪ್ರೀತಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ
ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಬಗ್ಗೆ ಊಹಾಪೋಹ ವಿಚಾರಕ್ಕೆ ಬೆಳಗಾವಿಯಲ್ಲಿಂದು ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ಈ ಭಾಗದ ಪ್ರಬಲ ಹಿಂದುಳಿದ ನಾಯಕ. ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ರು ತಪ್ಪು, ಬರಬೇಡ ಅಂದ್ರೂ ತಪ್ಪಾಗುತ್ತದೆ. ಆದರೆ ಈ ಸಂಬಂಧ ರಮೇಶ್ ಜಾರಕಿಹೊಳಿ ಜೊತೆಗೆ ಮಾತುಕತೆ ಆಗಿಲ್ಲ. ಫೋನ್‌ನಲ್ಲಿ ಹಲವು ಸಲ ಮಾತನಾಡಿದ್ದೇವೆ. ಆದರೆ ಜೆಡಿಎಸ್ ಸೇರ್ಪಡೆ ಸಂಬಂಧ ಚರ್ಚೆ ಆಗಿಲ್ಲ ಎಂದರು.
ಜೆಡಿಎಸ್ ಸೇರ್ಪಡೆ ಆಗುವವರ ಪಟ್ಟಿ ದೊಡ್ಡದಿದೆ. ಅದನ್ನು ಈಗಲೇ ಬಹಿರಂಗ ಪಡಿಸಲ್ಲ. ನಾವು ಯಾರಿಗೂ ಜೆಡಿಎಸ್ ಸೇರ್ಪಡೆ ಆಗುವಂತೆ ಆಹ್ವಾನಿಸಿಲ್ಲ. ಬರುವವರೂ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಆಗುವಂತೆ ಕೋರುತ್ತೇನೆ. ಡಿಸೆಂಬರ್ ಡೆಡ್‌ಲೈನ್ ಹಾಕಿರುವುದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ನಮ್ಮಲ್ಲಿ ಎಷ್ಟು ಮಾಲಿದೆ ಎಂಬುದನ್ನು ನೋಡಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಬಗ್ಗೆ ಖಚಿತಪಡಿಸಲು ಹೇಳಿದ್ದೇವೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ಬಿಜೆಪಿ ಜೆಡಿಎಸ್ ಗುರಿ ಒಂದೇ, ಕಾಂಗ್ರೆಸ್ ಅಧಿಕಾರದಿಂದ ದೂರ ಇಡುವುದು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ್ನು ಸೋಲಿಸಬೇಕು ಓಕೆ, ಬಿಜೆಪಿಯವರೇನು ನಮ್ಮ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾ? ಅವರು ಕಂಪನಿ ಸರ್ಕಾರದವರು, ಇವರೂ ಕಂಪನಿ ಸರ್ಕಾರದವರು.ಎಂದು ಲೇವಡಿ ಮಾಡಿದ ಅವರು ಕನ್ನಡಕ್ಕೆ ಕೈ ಎತ್ತು ಎಂಬುದು ನಮ್ಮ ನಿಲುವು, ನಮ್ಮದು ಕನ್ನಡಿಗರ ಪಕ್ಷ ಎಂದು ಹೇಳಿದರು.
ಜೆಡಿಎಸ್‌ನಲ್ಲಿರುವ ಹಲವರು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಹುಡುಗಿ ಚನ್ನಾಗಿದ್ದಾಳೆ ಎಂದರೆ ಅನೇಕರು ನೋಡಲು ಬರುತ್ತಾರೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಿಲ್ಲ, ನಾವೂ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿಕೊಳ್ಳಲು ಅರ್ಜಿ ಹಾಕಿದ್ದಾರೆ. ನಮ್ಮಲ್ಲಿ ಟಿಕೆಟ್‌ಗಾಗಿ ಲಕ್ಷ ಕೊಡ್ರಿ, ಎರಡು ಲಕ್ಷ ಕೊಡ್ರಿ ಅಂತೇನೂ ಇಲ್ಲ. ಅರ್ಹರನ್ನು ಗುರುತಿಸಿ ಟಿಕೆಟ್ ನೀಡುತ್ತೇವೆ ಎಂದರು.
ಕೃಪೆ:Etv