ಬೆಂಗಳೂರು; ಪಿಎಸ್ ಐ ನೇಮಕಾತಿ ಅಕ್ರಮದ ವಿಚಾರವಾಗಿ ಕನಕಗಿರಿ ಶಾಸಕ ಬಸವರಾಜ ದಡೇಸಗೂರ್ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಮಾಡಿರುವ ಕಾಂಗ್ರೆಸ್ ಈ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ವಿಡಿಯೋ ದಾಖಲೆ ಬಿಡುಗಡೆ ಮಾಡುವ ಮೂಲಕ ಆರೋಪ ಮಾಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವಿಡಿಯೋ ಹಾಗೂ ಒಂದು ಫೋಟೋ ಬಿಡುಗಡೆ ಮಾಡಿ, ಕನಕಗಿರಿ ಶಾಸಕ ಬಸವರಾಜ ದಡೇಸಗೂರ್ ಭ್ರಷ್ಟಾಚಾರ ನಡೆಸಿದ್ದಾರೆ, ಆಡಿಯೋ ವೈರಲ್ ಆದ ಬಳಿಕ ಹಣ ನೀಡಿ ಹೇಳಿಕೆಯನ್ನ ಬೇರೆ ರೀತಿ ಹೇಳಿಸಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪ ಮಾಡಿದರು.
ಮೊದಲ ವಿಡಿಯೋದಲ್ಲಿ ಪಿಎಸ್ಐ ನೇಮಕಾತಿಗೆ 30 ಲಕ್ಷ ಹಣ ಶಾಸಕ ದಡೇಸಗೂರ್ ಕೇಳಿದ್ದನ್ನು ಒಪ್ಪಿದ್ದ ಪರಸಪ್ಪ, ಎರಡನೇ ವಿಡಿಯೋದಲ್ಲಿ ಅಲ್ಲಗೆಳೆದಿದ್ದಾರೆ. ಹಾಗೂ ಯಾವುದೇ ರೀತಿ ಹಣದ ವ್ಯವಹಾರ ಆಗಿಲ್ಲ ಎಂದು ಹೇಳುವ ಮೂಲಕ ಗೊಂದಲ ಹಾಗೂ ಅನುಮಾನ ಸೃಷ್ಟಿಮಾಡಿದ್ದಾರೆ.
ವಿಡಿಯೋ 2 ರಲ್ಲಿ ಇದ್ದ ಬಟ್ಟೆಯನ್ನು ಧರಿಸಿದ್ದ ಪರಸಪ್ಪ ಅದೇ ಬಟ್ಟೆಯಲ್ಲಿ ಫೋಟೋದಲ್ಲಿ ಕಾಣಿಸಿದ್ದಾರೆ. ಹಾಗೂ ಈ ಫೋಟೋದಲ್ಲಿ ಅದೇ ಬಟ್ಟೆಯಲ್ಲಿ ಕಾಣಿಸಿದ್ದು, ಪಕ್ಕದಲ್ಲಿ ಪರಸಪ್ಪ ಅವರ ಪರಿಚಯ ವ್ಯಕ್ತಿಯೊಬ್ಬರು ಹಳದಿ ಬ್ಯಾಗ್ ಹಿಡಿದಿದ್ದಾರೆ. ಹಣ ನೀಡಿ ಪರಸಪ್ಪ ಅವರು ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ತಂಗಡಗಿ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಕಾನೂನು ತನಿಖೆಯಾಗಲಿ. 15 ಕ್ಕೂ ಹೆಚ್ಚು ಜನರು ನಮ್ಮ ಕ್ಷೇತ್ರದಲ್ಲಿ ಹಣ ಕೊಟ್ಟಿದ್ದಾರೆ. ಯಾರು ಮುಂದೆ ಬಂದು ಮಾತನಾಡುತ್ತಿಲ್ಲ. ಜಮೀನು ಮಾರಿ ಹಣ ಕೊಟ್ಟಿದ್ದಾರೆ. ಭಯದಿಂದ ಯಾರು ಮುಂದೆ ಬರುತ್ತಿಲ್ಲ ಎಂದ ಅವರು, 40% ಕಮಿಷನ್ ಮುರಿದುಕೊಂಡು ಹಣ ವಾಪಸ್ ಮಾಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಪರಸಪ್ಪ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷರ ಬಳಿ ದೂರು ಕೊಟ್ಟಿದ್ರು. ಸರ್ಕಾರದ ಯಾರು ಕೂಡ ಆಡಿಯೋ ಬಗ್ಗೆ ಮಾತನಾಡುತ್ತಿಲ್ಲ. ಪರಸಪ್ಪ ಆಡಿಯೋ ನಂದಲ್ಲ ಅಂತ ಸುದ್ದಿಗೊಷ್ಠಿ ಮಾಡಿದ್ರು. ನನ್ನ ಮಗ ಫಿಜಿಕಲ್ ಪಾಸ್ ಆಗಿಲ್ಲ ಅಂದಿದ್ದಾರೆ. ಪರಸಪ್ಪ ಒಂದು ಹಣದ ಚೀಲ ಕೊಟ್ಟಿದ್ದಾರೆ. ಅದರ ಪೋಟೋ ನಾನು ತೋರಿಸುತ್ತೇನೆ. ಎಲ್ಲಿ ಹಣ ಪಡೆದ್ರು ಅಂತ ನಾನು ತೋರಿಸ್ತೇನೆ ಎಂದು ಹಣ ಚೀಲ ಹಿಡಿದುಕೊಂಡಿರುವ ಫೋಟೋ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಶಾಸಕರ ಕಡೆಯವರು ಬಂದು ಹಣಕಾಸು ಬಗ್ಗೆ ಮಾತನಾಡಿದ್ದಾರೆ. 2020 ರ ಆಗಸ್ಟ್ ನಲ್ಲಿ ಮಾತುಕತೆ ಆಗುತ್ತೆ. ಶಾಸಕರ ಕಾರ್ ನಲ್ಲಿ ಮಾತು ಮಾತುಕತೆ ಆಗುತ್ತೆ. ಊಟ ಮಾಡಿಸಿ ಶಾಸಕರು ವ್ಯವಹಾರ ಮಾಡಿದ್ದಾರೆ. ಮೂವತ್ತು ಲಕ್ಷಕ್ಕೆ ವ್ಯಾವಹಾರ ಆಗಿದೆ. 15 ಲಕ್ಷ ಅಡ್ವಾನ್ಸ್ ಪಡೆದುಕೊಳ್ತಾರೆ. ಶಾಸಕರ ಭವನ ವ್ಯಾಪಾರದ ಅಡ್ಡೆಯಾಗಿದೆ ಎಂದು ಆರೋಪಿಸಿದರು.
ಹಣ ಕೊಟ್ಟಾಗ ಗೃಹ ಸಚಿವರು ಯಾರಾಗಿದ್ರು. ಕೆಲಸ ಆಗಲ್ಲ ಅಂದಾಗ ಪರಸಪ್ಪ ಹಣ ವಾಪಸ್ ಕೇಳಿದ್ದಾರೆ. ಸಚಿವರಿಗೆ, ಶಾಸಕರು ಬ್ರೋಕರ್ ಆಗಿದ್ದರೆ. ಬಿಜೆಪಿ ಈಗ ಭ್ರಷ್ಟ ಜನತಾ ಪಕ್ಷ ಆಗಿದೆ. ಬ್ರೋಕರ್ ಜನತಾ ಪಕ್ಷವಾಗಿ ಬದಲಾಗಿದೆ ಎಂದು ಆರೋಪಿಸಿದ ಅವರು, ಶಾಸಕರ ಮೇಲೆ ಇನ್ನೂ ಯಾಕೆ ಕ್ರಮ ಆಗಿಲ್ಲ. ಒಂದು ನೋಟಿಸ್ ಕೂಡ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಸಿಎಂ ಬೊಮ್ಮಾಯಿ ಆಗ ಗೃಹ ಸಚಿವರಾಗಿದ್ದರು. ಈಗ ನಮಗೆ ಸವಾಲು ಹಾಕುತ್ತಿದ್ದಾರೆ. ತಾಕತ್ತು, ಧಮ್ ಬಗ್ಗೆ ಸಿಎಂ ಮಾತನಾಡಿದ್ದಾರೆ. ಜನರಿಗೆ ಸ್ಪಂದನೆ ಬಿಟ್ಟು ಭ್ರಷ್ಟರಿಗೆ ಸ್ಪಂದಿಸುತ್ತಿದ್ದಾರೆ ಮೊದಲು ಸೂಮೋಟೊ ಕೇಸ್ ದಾಖಲಾಗಬೇಕು. ಕೊಟ್ವರು ಮತ್ತು ತೆಗೆದುಕೊಂಡವರು ಒಪ್ಪಿಕೊಂಡಿದ್ದಾರೆ. ಆದ್ರೂ ಕ್ರಮ ಜರುಗಿಸಿಲ್ಲ. ಈ ನಿಟ್ಟಿನಲ್ಲಿ ಮೊದಲು ಶಾಸಕರ ಬಂಧನ ಮಾಡಿ ತನಿಖೆ ಮಾಡಿ ಎಂದು ಆಗ್ರಹಿಸಿದರು.