ಬೆಳಗಾವಿ:ಅ.06 ಬೆಳಗಾವಿಯ ಪ್ರಮುಖ ದಿನಪತ್ರಿಕೆ ಎನಿಸಿರುವ ಹಸಿರು ಕ್ರಾಂತಿಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಸಿರು ಕ್ರಾಂತಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಪತ್ರಿಕೆ. ಈ ಪತ್ರಿಕೆ ರೈತರ ಜೀವನಾಡಿಯಾಗಿತ್ತು. ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸವನ್ನು ಹಸಿರು ಕ್ರಾಂತಿ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈ ಪತ್ರಿಕೆಯನ್ನು ಕಟ್ಟಿಬೆಳೆಸಿದ ಕಲ್ಯಾಣರಾವ ಮುಚಳಂಬಿ ಅವರು ಇಂದು ನಿಧನರಾಗಿರುವುದು ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.
ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಮುಚಳಂಬಿಯವರು ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಮುಜರಾಯಿ,ವಕ್ಫ್ ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರೈತ ಹೋರಾಟದಲ್ಲೇ ತಮ್ಮ ಜೀವನದ ಬಹುತೇಕ ಸಮಯ ಕಳೆದ ಮುಚಳಂಬಿ ಅವರು, ಪ್ರೋ ನಂಜುಡಸ್ವಾಮಿ, ಬಾಬಾಗೌಡ ಪಾಟೀಲ್, ಪುಟ್ಟಣ್ಣಯ್ಯ ಸೇರಿದಂತೆ ರೈತ ಹೋರಾಟಗಾರರಿಗೆ ಸಾಥ್ ನೀಡಿದ್ದರು.. ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಲೆಕ್ಕಿಸದೇ ಗಡಿ ಜಿಲ್ಲೆಗಳಲ್ಲಿ ರೈತರ ಪರವಾಗಿ ನಿರಂತರ ಹೋರಾಟ ಮಾಡುತ್ತಲೇ ಇದ್ದರು.
ಹೋರಾಟದ ಮನೋಭಾವದ ಕಲ್ಯಾಣರಾವ್ ಮುಚಳಂಬಿಯವರು ಬುಧವಾರ ಮುಂಜಾನೆಯೂ ಸಾವಳಗಿ ಬಳಿ ಹೋರಾಟದ ಅಂಗವಾಗಿ ಪಾದಯಾತ್ರೆಯೊಂದರಲ್ಲಿ ಪಾಲ್ಗೊಂಡು, ಹೋರಾಟದ ಸಮಯದಲ್ಲಿಯೇ ಅಸುನೀಗಿರುವುದು ಅವರ ವ್ಯಕ್ತಿತ್ವದ ಸಾಧನೆಗೆ ಸಿಕ್ಕ ಗೌರವ. ಗಡಿ ಜಿಲ್ಲೆಯಲ್ಲಿ ಕನ್ನಡದ ವಾತಾವರಣ ಜೀವಂತವಾಗಿಡಲು ಹಸಿರು ಕ್ರಾಂತಿ ಎಂಬ ಪತ್ರಿಕೆಯ ಮೂಲಕ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರಿಗೆ ಕೃಷಿ ಸಂಕಷ್ಟಗಳ ಬಗ್ಗೆ ಲೇಖನಗಳ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿದ್ದರು.
ರೈತ ಹೋರಾಟಗಳ ಜೊತೆಗೆ ಮಠ ಮಾನ್ಯಗಳೊಂದಿಗೆ, ಮಠಾಧೀಶರೊಂದಿಗೆ, ಜನಪರ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕಲ್ಯಾಣರಾವ್ ಮುಚಳಂಬಿ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರಾದ ಶಶಿಕಲಾ ಜೊಲ್ಲೆಯವರು ಸಂತಾಪದಲ್ಲಿ ತಿಳಿಸಿದ್ದಾರೆ