ಬೆಂಗಳೂರು (ಅ.16): ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕೆ.ಎನ್. ವೆಂಕಟನಾರಾಯಣ ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯರು ಹಾಗೂ ವಿಪ್ರನುಡಿ ಮಾಜಿ ಸಂಪಾದಕರೂ ಆಗಿರುವ ವೆಂಕಟನಾರಾಯಣ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಮತ್ತು ಇತರೆ ಐವರು ಪದಾಧಿಕಾರಿಗಳ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಕೊಲೆ ಬೆದರಿಕೆ ಆರೋಪ ಸಂಬಂಧ ಭಜರಂಗದಳದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ದೂರು ದಾಖಲಿಸಿದ್ದಾರೆ.
ಅದರ ವಿಚಾರಣೆ ನಡೆಸಿರುವ ಹಾಸನದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ದೂರು ಕುರಿತು ವರದಿ ಸಲ್ಲಿಸುವಂತೆ ಪೋಲೀಸರಿಗೆ ಆದೇಶಿಸಿದ್ದಾರೆ.
ಆದ್ದರಿಂದ ತಮ್ಮ ಮೇಲೆ ಆರೋಪಗಳು ಕೇಳಿ ಬಂದಿರುವ ಕಾರಣ ನೈತಿಕ ಹೊಣೆ ಹೊತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಹಾರನಹಳ್ಳಿ ಅವರು ರಾಜೀನಾಮೆ ನೀಡಬೇಕು ಎಂದು ಕೆ.ಎನ್.ವೆಂಕಟನಾರಾಯಣ ಒತ್ತಾಯಿಸಿದ್ದಾರೆ.