ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರ:- ಭಾರತ ದೇಶವು ವಿವಿಧ ಭಾಷೆ,ಜನಾಂಗ,ಪ್ರದೇಶ,ರೂಢಿ ಸಂಪ್ರದಾಯಗಳ ಆಗರವಾಗಿದ್ದು ಇವುಗಳಲ್ಲಿ ಏಕತೆಯನ್ನು ತಂದು ಕೋಮು ಸೌಹಾರ್ದತೆಯನ್ನು ಬೆಳೆಸುವದು ಅತೀ ಅವಶ್ಯಕತೆಯಾಗಿದೆ ಎಂದು ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಅಭಿಪ್ರಾಯ ಪಟ್ಟರು.ಅವರು ಸ್ಥಳೀಯ ಶ್ರೀ ಗ್ರಾಮ ದೇವಿ ಮಹಿಳಾ ಮಂಡಳ ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಮತ್ತು ಕೋಮು ಸೌಹಾರ್ದತಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಭಾರತ ದೇಶವು ಎಪ್ಪತ್ತೈದನೆಯ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೂ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗದೇ ಇರುವದಕ್ಕೆ ವಿಷಾದ ವ್ಯಕ್ತ ಪಡಿಸಿದರು.ಇಂದು ಶಿಕ್ಷಣದ ಮೂಲಕ ಪ್ರತಿಯೊಬ್ಬ ರಲ್ಲಿ ಕೋಮು ವಿಷ ಬೀಜದಿಂದ ಹೊರಬಂದು ಸೌಹಾರ್ದತೆಯಿಂದ ಸುಖೀ ಜೀವನ ಹೊಂದುವಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣ ಯುವಶಕ್ತಿ ಸೇನಾ ತರಬೇತಿ ಕೇಂದ್ರ ದ ಸಂಸ್ಥಾಪಕರಾದ ಗಂಗಾಧರ ಪೂಜೇರ ಪ್ರತಿಯೊಬ್ಬರು ಸಂವಿಧಾನ ಅರಿತು ಕೋಮು ಸಂಕುಚತೆಯಿಂದ ಹೊರ ಬರುವಂತೆ ತಿಳಿಸಿದರು.ಸಂತೋಷ ಹಿರೇಮಠ, ರೋಹಿತ ಕಲರಾ ಸಂವಿಧಾನ ಕುರಿತು ಮಾತನಾಡಿದರು.ಡಾ.ಬಿ.ಸಿ.ತೊರಗಲ್ಮಠ,ಮಹಿಳಾ ಮಂಡಳದ ಅಧ್ಯಕ್ಷರಾದ ಗಿರಿಜಾ ತೊರಗಲ್ಮಠ,ಆನಂದ ಬೆಣ್ಣಿ ಮತ್ತು ಮಹಿಳಾ ಮಂಡಳದ ಸದಸ್ಯರು,ಸೇನಾ ತರಬೇತಿ ಕೇಂದ್ರದ ಯುವಕರು ಉಪಸ್ಥಿತರಿದ್ದರು. ರುದ್ರಪ್ಪ ಪೂಜೇರ ಸ್ವಾಗತಿಸಿದರು.ಸುಕನ್ಯಾ ಗುಗವಾಡ ನಿರೂಪಿಸಿದರು.ಶೈಲಾ ಶಿಂಗನಳ್ಳಿ ವಂದಿಸಿದರು.