ಗೋಡ್ಸೆ ಕೃತ್ಯವನ್ನು ನೀವು ಖಂಡಿಸಲು ಸಾಧ್ಯವೇ?ವಿಎಚ್‌ಪಿಗೆ ಸವಾಲೆಸೆದ ಕಾಮಿಡಿಯನ್ ಕುನಾಲ್ ಕಾಮ್ರಾ

ಕಾಮಿಡಿಯನ್ ಕುನಾಲ್ ಕಾಮ್ರಾ
ಉಮೇಶ ಗೌರಿ (ಯರಡಾಲ)

ಮುಂಬೈ: ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಕೃತ್ಯವನ್ನು ನೀವು ಖಂಡಿಸಲು ಸಾಧ್ಯವೇ ಎಂದು ವಿಶ್ವ ಹಿಂದೂ ಪರಿಷತ್‌ಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಸವಾಲೆಸೆದಿದ್ದಾರೆ. ಗುರುಗ್ರಾಮದ ಬಾರ್ ಒಂದರಲ್ಲಿ ಆಯೋಜನೆಗೊಂಡಿದ್ದ ಕುನಾಲ್ ಕಾಮ್ರಾ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಬಲಪಂಥೀಯ ಹಿಂದೂ ಪರ ಸಂಘಟನೆಗಳ ವಿರೋಧದಿಂದಾಗಿ ರದ್ದಾಗಿದೆ. ಈ ಬೆಳವಣಿಗೆ ನಡೆದ ಮಾರನೇ ದಿನವೇ ಕುನಾಲ್ ಕಾಮ್ರಾ ವಿಎಚ್‌ಪಿಯನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬಿಜೆಪಿ ಸಾರಥ್ಯದ ಎನ್‌ಡಿಎ ಸರ್ಕಾರದ ನೀತಿ ನಿರೂಪಣೆಗಳನ್ನು ಖಂಡಿಸುತ್ತಾ, ವಿರೋಧಿಸುತ್ತಾ ಗಮನ ಸೆಳೆದಿರುವ ಕುನಾಲ್ ಕಾಮ್ರಾ, ಇದೀಗ ತಮ್ಮನ್ನು ತಾವು ಅತಿ ದೊಡ್ಡ ಹಿಂದೂ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಜೀವ ಬೆದರಿಕೆ ಹಾಕುತ್ತಾ ಹಾಗೂ ಭಯ ಹುಟ್ಟಿಸುತ್ತಾ ಸಂಪಾದನೆ ಮಾಡೋದಿಲ್ಲ ಎಂದು ಹರಿಹಾಯ್ದಿದ್ದಾರೆ.

ನಾನು ಜೈ ಶ್ರೀ ಸೀತಾರಾಮ ಹಾಗೂ ಜೈ ರಾಧಾ ಕೃಷ್ಣ ಭಜನೆಯನ್ನು ಉಚ್ಚರಿಸುತ್ತೇನೆ. ದೊಡ್ಡ ದನಿಯಲ್ಲಿ ಹೆಮ್ಮೆಯಿಂದ ಹೇಳುತ್ತೇನೆ. ನೀವು ನಿಜವಾಗಿಯೂ ಭಾರತ ಮಾತೆಯ ಮಕ್ಕಳೇ ಆಗಿದ್ದರೆ ಗೋಡ್ಸೆ ಮುರ್ದಾಬಾದ್ ಎಂಬ ಸಂದೇಶವನ್ನು ಬರೆದು ಕಳಿಸಿ. ನೀವು ಹಾಗೆ ಮಾಡದಿದ್ದರೆ ನೀವು ಹಿಂದೂ ವಿರೋಧಿಗಳು ಹಾಗೂ ಭಯೋತ್ಪಾದಕರ ಬೆಂಬಲಿಗರು ಎಂದು ಕುನಾಲ್ ಕಾಮ್ರಾ ಕಿಡಿ ಕಾರಿದ್ಧಾರೆ.

ನೀವು ನಾಥೂರಾಮ್ ಗೋಡ್ಸೆಯನ್ನು ದೇವರು ಎಂದು ಭಾವಿಸಿದ್ದೀರಾ? ಹೌದು ಅನ್ನೋದೇ ಆದ್ರೆ, ನನ್ನ ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳು ಇನ್ನಷ್ಟು ರದ್ದಾಗಲಿ ನನಗೇನೂ ಚಿಂತೆಯಿಲ್ಲ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. ಈ ಪರೀಕ್ಷೆಯಲ್ಲಿ ನಾನು ನಿಮಗಿಂತ ದೊಡ್ಡ ಹಿಂದೂ ಆಗಿ ಹೊರ ಹೊಮ್ಮುತ್ತೇನೆ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. ನಾನು ಯಾವುದೇ ವೃತ್ತಿ ಮಾಡಲಿ, ಕಷ್ಟ ಪಟ್ಟು ದುಡಿದ ಹಣದಿಂದ ಅನ್ನ ತಿನ್ನುತ್ತೇನೆ. ಹೀಗಾಗಿ ನಾನು ನಿಮಗಿಂತಾ ದೊಡ್ಡ ಹಿಂದೂ ಎಂದು ಕಾಮ್ರಾ ಹೇಳಿದ್ದಾರೆ. ಭಯ ಹುಟ್ಟಿಸುತ್ತಾ, ಹೆದರಿಸುತ್ತಾ ಬದುಕೋದು ನಿಜಕ್ಕೂ ಪಾಪಕೃತ್ಯ ಎಂದು ಕುನಾಲ್ ಕಾಮ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿಯಲ್ಲಿ ಪತ್ರ ಬರೆದಿರುವ ಕುನಾಲ್ ಕಾಮ್ರಾ, ತಮ್ಮ ಪತ್ರವನ್ನು ವಿಎಚ್‌ಪಿ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ಧಾರೆ.

ಹರ್ಯಾಣದ ಗುರುಗ್ರಾಮದ ಸೆಕ್ಟರ್ 29ರಲ್ಲಿ ಇರುವ ಸ್ಟುಡಿಯೋ ಎಕ್ಸ್‌ಒ ಬಾರ್‌ನಲ್ಲಿ ಸೆಪ್ಟೆಂಬರ್ 17 ಹಾಗೂ 18 ರಂದು ಕುನಾಲ್ ಕಾಮ್ರಾ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಆಯೋಜನೆಗೊಂಡಿತ್ತು. ಆದ್ರೆ ವಿಎಚ್‌ಪಿ ಹಾಗೂ ಬಜರಂಗ ದಳದ ಕಾರ್ಯಕರ್ತರು ಡಿಸಿಗೆ ಮನವಿ ಸಲ್ಲಿಸಿದ್ದರು. ಕುನಾಲ್ ಕಾಮ್ರಾ ಅವರು ಹಿಂದೂ ದೇವರು ಹಾಗೂ ದೇವತೆಗಳ ಅವಹೇಳನ ಮಾಡುತ್ತಾರೆ. ಹೀಗಾಗಿ, ಅವರ ಕಾರ್ಯಕ್ರಮ ರದ್ದುಗೊಳಿಸುವಂತೆ ಆಗ್ರಹಿಸಿದ್ದರು. ಹಿಂದೂ ಪರ ಸಂಘಟನೆಗಳ ಈ ಆರೋಪಕ್ಕೆ ತಿರುಗೇಟು ನೀಡಿರುವ ಕುನಾಲ್ ಕಾಮ್ರಾ, ಹಿಂದೂ ದೇವತೆಗಳಿಗೆ ನಾನು ಯಾವಾಗ ಅವಹೇಳನ ಮಾಡಿದ್ದೆ? ಸಾಕ್ಷಿ ಇದೆಯೇ? ಎಂದು ಸವಾಲೆಸೆದಿದ್ದಾರೆ.

ನಾನು ಕೇವಲ ಸರ್ಕಾರವನ್ನು ಲೇವಡಿ ಮಾಡುತ್ತೇನೆ. ಆದ್ರೆ ದೇವರ ಬಗ್ಗೆ ಯಾವಾಗ ಅವಹೇಳನ ಮಾಡಿದ್ದೆ? ಸರ್ಕಾರವನ್ನು ನಾನು ಪ್ರಶ್ನಿಸೋದು ನಿಮಗೆ ಸಹ್ಯವಾಗುತ್ತಿಲ್ಲ ಎಂದರೆ ನಾನೇನು ಮಾಡಲಿ? ಸರ್ಕಾರವನ್ನು ಲೇವಡಿ ಮಾಡಿದರೆ ಹಿಂದೂ ಧರ್ಮದ ಅವಹೇಳನ ಹೇಗಾಗುತ್ತೆ? ಎಂದು ಕುನಾಲ್ ಕಾಮ್ರಾ ಪ್ರಶ್ನಿಸಿದ್ದಾರೆ. ಈ ಎಲ್ಲದರ ನಡುವೆ, ವಿವಾದಗಳಿಂದ ದೂರ ಉಳಿದ ಬಾರ್ ಆಡಳಿತ ಮಂಡಳಿ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನೇ ರದ್ದು ಮಾಡಿದೆ. ಈ ವಿಚಾರದಲ್ಲಿ ಬಾರ್ ಆಡಳಿತ ಮಂಡಳಿಯ ತಪ್ಪೇನೂ ಇಲ್ಲ ಎಂದಿರುವ ಕುನಾಲ್ ಕಾಮ್ರಾ, ಅವರು ತಮ್ಮ ವ್ಯಾಪಾರ ಮಾಡುತ್ತಾರೆ. ಸುಖಾಸುಮ್ಮನೆ ವಿವಾದಕ್ಕೆ ಸಿಲುಕಿದರೆ ಅವರು ಉದ್ಯಮ ನಡೆಸಲು ಸಾಧ್ಯವೇ? ಹೀಗಾಗಿ, ಕಾರ್ಯಕ್ರಮ ರದ್ದು ಮಾಡಿದ್ದಾರೆ ಎಂದು ಕಾಮ್ರಾ ಹೇಳಿದ್ದಾರೆ.

 

 

 

 

 

 

 

(NewsVK)

 

Share This Article
";