ಮುದಗಲ್ : ಪಟ್ಟಣದ ಸಮೀಪ ನಾಗರಾಳ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರ ನೀಡುವಂತೆ ಸೋಮವಾರ ಪ್ರತಿಭಟನೆ ನಡೆಸಿದರು. ನಾಗರಾಳ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷೆ ಕೇಂದ್ರಕ್ಕೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಇದು ತೊಂಡಿಹಾಳ, ಹಲ್ಕಾವಟಗಿ, ಪಲ್ಲದಿನ್ನಿ, ಅಂಕನಾಳ, ಉಪನಾಳ, ತುಂಬಲಗಡ್ಡಿ, ರಾಂಪೂರು, ಕಮಲದಿನ್ನಿ, ನವಲಿ, ನರಕಲದಿನ್ನಿ, ಜೂಲಗುಡ್ಡ, ಭೊಗಾಪೂರು, ಬಯ್ಯಾಪೂರು, ಖೈರವಾಡಗಿ, ಬೊಮ್ಮನಾಳ ಗ್ರಾಮಗಳನ್ನು ಹೊಂದಿರುವ ಬಹು ದೊಡ್ಡ ಕೇಂದ್ರ ಬಿಂದು ಆಗಿದೆ.
ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿರುವ ಈ ಗ್ರಾಮದ ಸರ್ಕಾರಿ ಕಾಲೇಜಿಗೆ ಪರೀಕ್ಷೆ ಕೇಂದ್ರ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಪರೀಕ್ಷೆ ಕೇಂದ್ರಕ್ಕೆ ಎಲ್ಲಾ ಅರ್ಹತೆ ಹೊಂದಿರುವ ಕಾಲೇಜಿಗೆ ಪರೀಕ್ಷೆ ಕೇಂದ್ರಕ್ಕಾಗಿ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲದಿರುವದು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸ, ಪ, ಪೂ,ಕಾಲೇಜು ವಿದ್ಯಾರ್ಥಿನಿ ಮಂಜುಳಾ ಮಾತನಾಡಿ ನಮ್ಮ ಕಾಲೇಜು ಪರೀಕ್ಷೆ ಕೇಂದ್ರಕ್ಕೆ ಎಲ್ಲಾ ಅರ್ಹತೆ ಹೊಂದಿದ್ದು ಮತ್ತು ಹಳ್ಳಿಗಳಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತಿರವಾಗಿದ್ದು ಪರೀಕ್ಷೆ ಬರೆಯಲು ಅನುಕೂಲವಾಗಿದೆ. ಇಷ್ಟೆಲ್ಲಾ ಸೌಕರ್ಯ ಹೊಂದಿರುವ ನಮ್ಮ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅದೃಷ್ಟ ಇಲ್ಲದಂತಾಗಿದೆ. ಸುಮಾರು ಇಪ್ಪತ್ತೈದು ಕಿ.ಮೀ ದೂರ ಇರುವ ಮುದಗಲ್ಲ ಪಟ್ಟಣಕ್ಕೆ ಪರೀಕ್ಷೆ ಬರೆಯಲು ಹೋಗಲು ಬಸ್ ಸೌಲಭ್ಯ ಮತ್ತು ಸಮಯಕ್ಕೆ ಸರಿಯಾಗಿ ಓಡಾಡದ ವಾಹನಗಳು ಇರುವದರಿಂದ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಗೋಳು ಹೇಳತೀರದು ಎಂದು ಅಳಲು ತೋಡಿಕೊಂಡರು.
ಇದೆ ವೇಳೆ ಮಾತನಾಡಿದ ವಿದ್ಯಾರ್ಥಿ ಮೈನುದ್ದಿನ್ ಸುತ್ತ ಮುತ್ತಲಿನ ಎಲ್ಲಾ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ನಾಗರಾಳ ಗ್ರಾಮ ಮುಖ್ಯ ಕೇಂದ್ರವಾಗಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನೂಕೂಲವಾಗಿದೆ. ಇಲ್ಲೆಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ ವಿದ್ಯಾರ್ಥಿ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮುಖ್ಯ ಹೃದಯ ಭಾಗವಾಗಿರುವ ನಾಗರಾಳ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷೆ ಕೇಂದ್ರದ ಬಹು ದಿನದ ಬೇಡಿಕೆಗಳನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಿಡೇರಿಸುತ್ತೆಯೇ ಕಾದು ನೋಡಬೇಕಾಗಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಿವರಾಜ, ಸಾಯಿಬಣ್ಣ, ವಿದ್ಯಾರ್ಥಿಗಳಾದ ಅಶೋಕ ಗೌಂಡಿ, ಅಮರೇಶ ಅಂಗಡಿ, ನಾಗರಾಜ ಬಿರಾದಾರ, ವೆಂಕಟೇಶ ಹುಡೇದ್, ಸಂಗೀತಾ ಅಗೆದಾಳ, ಪ್ರಿಯಾಂಕ ಮಂಜುನಾಥ, ಸುಷ್ಮಾ, ಹನುಮಂತ ಗೌಂಡಿ, ಅಮರೇಶ ಭಜಂತ್ರಿ, ಸುಮಾ ಉಪ್ಪಾರ, ಗದ್ದೆಮ್ಮ ಮುದಿಗೌಡರ, ಸುರಕ್ಷಿತಾ ಗೌಡರ, ಬಸಮ್ಮ ಇನ್ನೂ ಮುಂತಾದ ವಿದ್ಯಾರ್ಥಿಗಳು ಇದ್ದರು.
ವರದಿ: ಮಂಜುನಾಥ ಕುಂಬಾರ