ಮೈಸೂರು: ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ , ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.
ಸೋಮವಾರ ನಡೆದ ಮೈಸೂರು ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಅಧಿಕಾರಿ-ಸಿಬ್ಬಂದಿ ಕೈಗೆ ಸಿಗಬೇಕು. ಖಾತೆ ಮಾಡಿಸಿಕೊಳ್ಳಲು, ಜಾತಿ ಪ್ರಮಾಣ ಪತ್ರಕ್ಕೆ ಜನ ವಿಧಾನಸೌಧಕ್ಕೆ ಬರಬೇಕಾ ? ಜನರೇ ನಮ್ಮ ಮಾಲೀಕರು. ನಾವು ಜನಗಳ ಸೇವಕರು. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ, ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು. ಜನ ಸಣ್ಣ ಕೆಲಸಗಳಿಗೆ ವಿಧಾನಸೌಧಕ್ಕೆ ಬರುತ್ತಾರೆ ಎಂದರೆ, ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಇದು ನಿಮಗೆ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.
ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿ ಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಕೊಡಬೇಕು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.