*ಸಿಎಂ ಬೊಮ್ಮಾಯಿಯವರು ಮಹಾದಾಯಿ, ಮೇಕೆದಾಟು ಬಗ್ಗೆ ಚಕಾರ ಎತ್ತಿಲ್ಲ:ಡಿ.ಕೆ.ಶಿವಕುಮಾರ್ ಗುಡುಗು*
ಹುಬ್ಬಳ್ಳಿ: 07 ರಾಜ್ಯದ ಜನರಿಗೆ ಒಳ್ಳೆಯದು ಆಗಬೇಕು ಅಂದರೆ ಈ ಬಿಜೆಪಿ ಸರ್ಕಾರದಿಂದ ಆಗಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಈವರೆಗೆ ಮಹದಾಯಿ ಹಾಗೂ ಮೇಕೆದಾಟು ಬಗ್ಗೆ ಚಕಾರ ಎತ್ತಿಲ್ಲ. ಅವರ ಬಗ್ಗೆ ಒಳ್ಳೆಯ ನಿರೀಕ್ಷೆ ಇತ್ತು, ಆದರೆ ಈವರೆಗೆ ಅದರ ಬಗ್ಗೆ ಯಾರೂ ಚಕಾರ ಎತ್ತಿಲ್ಲ. ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಯಾವುದೇ ಕೆಲಸಗಳಾಗಿಲ್ಲ ಎಂದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉಪ ಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿ ಅಂತಾ ಹೇಳೊಕಾಗಲ್ಲ. ಬೈ ಎಲೆಕ್ಷನ್ ಅನ್ನುವುದು ಈ ಹಿಂದೆ ಆಗಿರುವ ನೋವನ್ನ ಹೇಳಿಕೊಳ್ಳೋಕೆ ಮತದಾರರಿಗೆ ಅವಕಾಶ. ಆಡಳಿತ ಯಂತ್ರವೂ ಕೂಡ ಬಹಳ ಬಿಗಿಯಾಗಿದೆ. ಬಿಜೆಪಿಯವರಿಗೆ ಅದು ಚೆನ್ನಾಗಿ ಗೊತ್ತಿದೆ. ಆಡಳಿತ ಯಾವುದೇ ರೀತಿ ದುರುಪಯೋಗ ಮಾಡಿಕೊಂಡರೂ ಮತದಾರರ ತೀರ್ಪು ಅಂತಿಮ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಬೈ ಎಲೆಕ್ಷನ್ ಎಫೆಕ್ಟ್ ಆಗುತ್ತದೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇದೆಯಾ ಎಂದು ಡಿಕೆಶಿ ಪ್ರಶ್ನೆ ಮಾಡಿ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.
ಚುನಾವಣೆ ಬಗ್ಗೆ ಬಿಜೆಪಿಯವರನ್ನೇ ಕೇಳಿ. ಬಿಜೆಪಿ ಆಂತರಿಕದ ಬಗ್ಗೆ ಅವರ ನಾಯಕರಿಗೇ ಗೊತ್ತಿದೆ.
ಅರುಣಸಿಂಗ್ ನಮ್ಮ ನಾಯಕರು ಪ್ರಾಮಾಣಿಕರು ಎಂದು ಹೇಳಿದ್ದರು. ಆದರೆ ಯತ್ನಾಳ, ಬೆಲ್ಲದ ಅವರು ಪರೀಕ್ಷೆ ಪಾಸ್ ಮಾಡೋಕೆ ಓಡಾಡುತ್ತಿದ್ರು. ಬಿಜೆಪಿಯವರ ಯಾವುದೇ ಮಾತುಗಳಲ್ಲಿಯೂ ನಂಬಿಕೆ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ವ್ಯಂಗ್ಯವಾಡಿದರು