ಉಡುಪಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರು. ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂಪರ ಸಂಘಟನೆಯ ವಾಗ್ಮಿ ಚೈತ್ರಾ ಕುಂದಾಪುರ ಬಂಡವಾಳ ಒಂದೊಂದಾಗಿಯೇ ಇದೀಗ ಬಹಿರಂಗವಾಗುತ್ತಿದೆ. ಆಕೆ ಆಪ್ತನ ಹೆಸರಲ್ಲಿ ಸಹಕಾರಿ ಬ್ಯಾಂಕ್‌ನಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 40 ಲಕ್ಷ ರೂ. ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.
ಜೊತೆಗೆ 1.08 ಕೋಟಿ ರೂ. ಆಸ್ತಿ-ಪಾಸ್ತಿ ದಾಖಲೆಗಳು ಕೂಡ ಬೆಂಗಳೂರಿನ ಸಿಸಿಬಿ ಪೊಲೀಸರ ಕೈಸೇರಿವೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬೈಂದೂರು, ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿಗೆ ಭೇಟಿ ನೀಡಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಮತ್ತು ಆಕೆಯ ಆಪ್ತರ ಆಸ್ತಿ, ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದು, ಈ ವೇಳೆ ಬೇನಾಮಿ ಹೆಸರಲ್ಲಿರುವ ಒಂದಷ್ಟು ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಂಧನದಲ್ಲಿರುವ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಶ್ರೀಕಾಂತ್‌ನ ಬಾಯ್ಬಿಡಿಸಿದ ಸಿಸಿಬಿ ಪೊಲೀಸರು ಆತನನ್ನು ಬೆಂಗಳೂರಿನಿಂದ ಉಪ್ಪೂರಿಗೆ ಕರೆತಂದು ಆಸ್ತಿ-ಪಾಸ್ತಿ ದಾಖಲೆ ಪರಿಶೀಲಿಸಿದ್ದಾರೆ. ಉಪ್ಪೂರಿನ ಶ್ರೀರಾಮ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಶ್ರೀಕಾಂತ್ ಹೆಸರಿನಲ್ಲಿ ಚೈತ್ರಾ ಇಟ್ಟಿದ್ದ 40 ಲಕ್ಷ ಠೇವಣಿ, 65 ಲಕ್ಷದ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈ ವೇಳೆ ಚೈತ್ರಾಗೆ ಸೇರಿದ್ದೆನ್ನಲಾದ 1.08 ಕೋಟಿ ರು. ಆಸ್ತಿ-ಪಾಸ್ತಿ ದಾಖಲೆಗಳು ಕೂಡ ಬೆಂಗಳೂರಿನ ಸಿಸಿಬಿ ಪೊಲೀಸರ ಕೈಸೇರಿದೆ ಎಂದು ಹೇಳಲಾಗುತ್ತಿದೆ.
ವಿನಯ್ ಗುರೂಜಿ ಸಹಾಯ ಕೇಳಿದ್ದ ಗೋವಿಂದ ಪೂಜಾರಿ: ಬಿಜೆಪಿ ಟಿಕೆಟ್ ಆಸೆಗಾಗಿ ಚೈತ್ರಾ ಆ್ಯಂಡ್ ಟೀಮ್‌ನಿಂದ 5 ಕೋಟಿ ರು. ಪಂಗನಾಮ ಹಾಕಿಸಿಕೊಂಡ ಗೋವಿಂದ ಬಾಬು ಪೂಜಾರಿ, ಈ ಬಗ್ಗೆ ತಮಗೆ ಸಹಾಯ ಮಾಡುವಂತೆ ಅವಧೂತ ವಿನಯ್ ಗುರೂಜಿ ಅವರ ಸಹಾಯ ಕೇಳಿದ್ದು ಈಗ ಬಹಿರಂಗವಾಗಿದೆ. ಗೋವಿಂದ ಪೂಜಾರಿ ಅವರು ಈ ಹಿಂದೆ ಬಡವರಿಗೆ ಕಟ್ಟಿಸಿಕೊಟ್ಟಿದ್ದ ಮನೆಗಳ ಹಸ್ತಾಂತರಕ್ಕೆ ಗುರೂಜಿ ಅವರನ್ನು ಕರೆಸಿದ್ದರು. ಆಗ ವೇದಿಕೆಯಲ್ಲಿ ಚೈತ್ರಾ ಕೂಡ ಇದ್ದಳು. ಕೆಲ ಸಮಯದ ನಂತರ ಗೋವಿಂದ ಪೂಜಾರಿ ಅವರು ಗುರೂಜಿಗೆ ವಾಟ್ಸಾಪ್‌ನಲ್ಲಿ 4 ಪುಟಗಳ ಸುಧೀರ್ಘ ಪತ್ರವೊಂದನ್ನು ಬರೆದು, ತಾನು ಚೈತ್ರಾಳಿಂದ ಜೀವನದಲ್ಲಿ ಬಹಳ ದೊಡ್ಡ ಮೋಸ ಹೋಗಿದ್ದೇನೆ, ಚೈತ್ರಾಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ್ದಲ್ಲದೆ ಪ್ರಕರಣದಲ್ಲಿ ತಮಗೆ ದಾರಿ ತೋರಿಸಿ ಎಂದು ಮನವಿಯನ್ನೂ ಮಾಡಿದ್ದರು.
ಕೃಪೆ:ಸುವರ್ಣಾ