ರಾಜ್ಯ ಸರ್ಕಾರಕ್ಕೆ ಶತ ದಿನಗಳ ಸಂಭ್ರಮ ! 5 ರಲ್ಲಿ 4 ಗ್ಯಾರಂಟಿ “ಗೃಹಲಕ್ಷ್ಮಿ” ಯೋಜನೆಗೆ ಇಂದು ಅದ್ಧೂರಿ ಚಾಲನೆ!

ಮೈಸೂರು(ಆ.30): ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ಮೂಲಕ ರಾಜ್ಯ ಸರಕಾರ ಶತ ದಿನಗಳ ಸಂಭ್ರಮಕ್ಕೆ ಕಾಲಿಟ್ಟಿದೆ.

ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಕಲ್ಯಾಣ ಕಾರ್ಯಕ್ರಮ ಎನ್ನಲಾಗುತ್ತಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ನೀಡುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ” ಯೋಜನೆಗೆ ಇಂದು ಅದ್ಧೂರಿ ಚಾಲನೆ ಸಿಗಲಿದೆ.

​​​ಬೆಲೆ ಏರಿಕೆ ಹೊಡೆತದಿಂದ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದ ಜನಸಾಮಾನ್ಯರ ದುಗುಡ, ದುಮ್ಮಾನಗಳಿಗೆ ಸ್ಪಂದನೆಯ ಭರವಸೆ ತುಂಬಿರುವ ಗ್ಯಾರಂಟಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ‘ಶಕ್ತಿ’ ಯೋಜನೆಯಿಂದ ಖುಷಿಯಾಗಿರುವ ಮಹಿಳಾ ಸಮುದಾಯ ಇದೀಗ, ‘ಗೃಹ ಲಕ್ಷ್ಮಿ’ ಯನ್ನು ಎದುರು ನೋಡುತ್ತಿದೆ.ಜನರಿಂದಲೂ ಭರ್ಜರಿ ರೆಸ್ಪಾನ್ಸ್‌

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿರುವ ಈ ಯೋಜನೆಯ ವೇದಿಕೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಉಪಸ್ಥಿತಿಯಲ್ಲಿ ರಾಜ್ಯಸಭಾ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್‌, ಕೆ.ಎಚ್‌.ಮುನಿಯಪ್ಪ, ಕೆ.ವೆಂಕಟೇಶ್‌, ಎನ್‌. ಚಲುವರಾಯಸ್ವಾಮಿ, ಕೆ.ಎನ್‌.ರಾಜಣ್ಣ, ಎಸ್‌.ಎಸ್‌. ಬೋಸರಾಜು, ಮೇಯರ್‌ ಶಿವಕುಮಾರ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

1.11 ಕೋಟಿ ಮಂದಿಗೆ ಅನುಕೂಲ:

ಗೃಹಲಕ್ಷ್ಮಿ ಯೋಜನೆಯಡಿ ಮೊದಲ ತಿಂಗಳು ಬರೊಬ್ಬರಿ 1.11 ಕೋಟಿ ಪಡಿತರ ಕುಟುಂಬಗಳ ಮನೆಯೊಡತಿಯರಿಗೆ ತಲಾ 2000 ರು.ನಂತೆ ಒಟ್ಟು ಅಂದಾಜು .2,220 ಕೋಟಿ ಹಣ ನೇರ ನಗದು ಪಾವತಿ(ಡಿಬಿಟಿ)ಯಾಗುವ ನಿರೀಕ್ಷೆ ಇದೆ. ಈ ಯೋಜನೆಗೆ ಪ್ರತಿ ವರ್ಷ 32 ಸಾವಿರ ಕೋಟಿ ರು. ಅನುದಾನ ಬೇಕೆಂದು ಸರ್ಕಾರ ಅಂದಾಜಿಸಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 5 ತಿಂಗಳು ಕಳೆದಿರುವುದರಿಂದ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದೆಂದು ಹೇಳಲಾಗಿದೆ.

ಪ್ರಸ್ತುತ ನೋಂದಣಿಯಾಗಿರುವ 1.11 ಕೋಟಿ ಕುಟುಂಬಗಳ ಜೊತೆಗೆ ಬರುವ ತಿಂಗಳುಗಳಲ್ಲಿ ಈ ಯೋಜನೆಗೆ ಅರ್ಹತೆ ಇರುವ ಇನ್ನೂ 23 ಲಕ್ಷ ಕುಟುಂಬಗಳು ನೋಂದಣಿಯಾಗುವ ನಿರೀಕ್ಷೆ ಇದೆ. ಇಷ್ಟಾದರೂ ಪ್ರತಿ ತಿಂಗಳು 2660 ಕೋಟಿ ರು.ನಂತೆ ಈ ಆರ್ಥಿಕ ವರ್ಷದ (2024ರ ಮಾಚ್‌ರ್‍ ವರೆಗೆ) 8 ತಿಂಗಳಿಗೆ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.

2 ಸಾವಿರ ಬಸ್‌ ವ್ಯವಸ್ಥೆ

ಕಾರ್ಯಕ್ರಮಕ್ಕೆ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಒಂದು ಲಕ್ಷ ಮಹಿಳೆಯರನ್ನು ಕರೆತರಲು ಉದ್ದೇಶಿಸಲಾಗಿದೆ. ಗ್ರಾಪಂ ಪಿಡಿಒ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮಹಿಳೆಯರನ್ನು ಕರೆತರುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ 2 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

10 ಸಾವಿರಕ್ಕೂ ಹೆಚ್ಚು ಕಡೆ ನೇರ ಪ್ರಸಾರ

ಮೈಸೂರಿನಲ್ಲಿ ನಡೆಯಲಿರುವ ‘ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟಹೆಜ್ಜೆ: ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು .2000’ ನೀಡುವ ಈ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ರಾಜ್ಯದ 10,400 ಸ್ಥಳಗಳಲ್ಲಿ ನೇರ ಪ್ರಸಾರಗೊಳ್ಳಲಿದೆ. 6 ಸಾವಿರಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ, ಮೂರು ಪಂಚಾಯಿತಿಗಳಿಗೆ ಒಂದು ಕಡೆ, ವಾರ್ಡ್‌ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಅಲ್ಲದೆ, ಪಂಚಾಯಿತಿ ಮಟ್ಟದ ಒಂದಷ್ಟುಮಹಿಳೆಯರು ರಾಷ್ಟ್ರೀಯ ನಾಯಕರ ಜೊತೆ ನೇರವಾಗಿ ಸಂವಾದಕ್ಕೂ ಈ ವೇಳೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಮೈಸೂರಿನಲ್ಲಿ ಕಾರ್ಯಕ್ರಮದ ವೇದಿಕೆಯ ಅಳತೆಯಷ್ಟೇ 140 ಅಡಿಯ ಪರದೆಯ ವ್ಯವಸ್ಥೆಯನ್ನೂ ಮಾಡಿದ್ದು, ಆ ಪರದೆಯಲ್ಲಿ ವಿವಿಧ ಪಂಚಾಯಿತಿಗಳಲ್ಲಿ ನೇರವೀಕ್ಷಣೆ ಮಾಡುತ್ತಿರುವವರನ್ನೂ ಪ್ರದರ್ಶಿಸಲಾಗುತ್ತದೆ.

 

ದೇಶದಲ್ಲೇ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ

ಗೃಹಲಕ್ಷ್ಮಿಗೆ ವಾರ್ಷಿಕ .32 ಸಾವಿರ ಕೋಟಿ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆಗೆ ಇಷ್ಟುದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಯಾರಂಟಿ ಯೋಜನೆಗಳ ಜಾರಿ ನಮಗೆ ಸವಾಲು ಅನಿಸಲಿಲ್ಲ. ಗ್ಯಾರಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇದೆ.

                                              ♦ ಮುಖ್ಯಮಂತ್ರಿ ಸಿದ್ದರಾಮಯ್ಯ 

 

 

ನುಡಿದಂತೆ ನಾವು ನಡೆದುಕೊಂಡಿದ್ದೇವೆ

ಮೈಸೂರಿನ ಭಾಗದ ಜನತೆ ನಮ್ಮ ಸರ್ಕಾರ ರಚನೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ. ರಾಜ್ಯದ ಮಹಿಳೆಯರಿಗೆ ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂದು ಗೃಹಲಕ್ಷ್ಮಿಯನ್ನು ಇಲ್ಲೇ ಆರಂಭಿಸುತ್ತಿದ್ದೇವೆ. ಚುನಾವಣೆಗೂ ಮುನ್ನ ದೇವಿ ಸನ್ನಿಧಾನದಲ್ಲಿ ಕೊಟ್ಟಮಾತಿನಂತೆ ನಮ್ಮ ಸರ್ಕಾರ ನಡೆದಿದೆ. ನುಡಿದಂತೆ ನಡೆದಿರುವುದು ಈ ಸರ್ಕಾರದ ಸಾಧನೆ. 

                                              ♦  ಡಿಸಿಎಂ ಡಿ.ಕೆ.ಶಿವಕುಮಾರ್‌ 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";