ಪಣಜಿ: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎನ್ನುವುದಕ್ಕೆ ಪ್ರಸ್ತುತ ಮಹಿಳಾ ಕುಸ್ತಿಪಟುಗಳಿಗೆ ನೀಡುತ್ತಿರುವ ಚಿಕಿತ್ಸೆಯೇ ಸಾಕ್ಷಿಯಾಗಿದೆ. ದೇಶದ ಹೆಸರನ್ನು ಬೆಳಗಿದ ಮಹಿಳೆಯರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ತಮ್ಮ ಕಚೇರಿಯಿಂದ 40 ನಿಮಿಷ ಜಂತರ್ ಮಂತರ್ ಮೈದಾನಕ್ಕೆ ಹೋಗಲು ಸಮಯವಿಲ್ಲ ಎಂದು ಗೋವಾ ರಾಜ್ಯ ಕಾಂಗ್ರೇಸ್ ಮಾಜಿ ಅಧ್ಯಕ್ಷ ಗಿರೀಶ್ ಚೋಡಣಕರ್ ನುಡಿದರು.
ಪ್ರಸ್ತುತ ಜಂತರ್ ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಇಂದು ಮಡಗಾಂವ್ ಲೋಹಿಯಾ ಮೈದಾನದ ಎದುರು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ನಾಗರಿಕರು ಕ್ಯಾಂಡಲ್ ಮೆರವಣಿಗೆ ನಡೆಸಿದರು. ಎಎಪಿ ಶಾಸಕರಾದ ವೆಂಜಿ ವಿಗಾಸ್, ಕ್ರೂಜ್ ಸಿಲ್ವಾ, ಮಹಿಳಾ ಮುಖಂಡರಾದ ಸಿಸಿಲ್ ರೋಡ್ರಿಗಸ್, ಪ್ರತಿಮಾ ಕುಟಿನ್ಹೋ, ವಾಲ್ಮೀಕಿ ನಾಯಕ್, ಸಾಮಾಜಿಕ ಕಾರ್ಯಕರ್ತರಾದ ಶಂಕರ್ ಪೋಲ್ಜಿ, ರಾಮ ಕಂಕೋಣಕರ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಮಾ ಕುಟಿನ್ಹೊ ಆಗ್ರಹಿಸಿದರು. ಈ ಬಾರಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರಿಗೆ ಗೋವಾಕ್ಕೆ ಬಂದು ಖಾಸಗಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಸಮಯವಿದೆ ಎಂದು ಸೆಸಿಲ್ ರಾಡ್ರಿಗಸ್ ವಾಗ್ದಾಳಿ ನಡೆಸಿದರು; ಆದರೆ ಜಂತರ್ ಮಂತರ್ ಗೆ ಹೋಗಿ ಕುಸ್ತಿಪಟುಗಳ ಮಾತು ಕೇಳಲು ಸಮಯ ಸಿಗದಿರುವುದು ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.