ಬೀಳಗಿ : ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ದಿ ಕಾರ್ಯಗಳಿಗೆ ವೇಗ ದೊರಕಿದೆ. ಸಮರ್ಥ ನಾಯಕತ್ವ, ಸ್ವಚ್ಚ ಆಡಳಿತ, ಜನಪರ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಇದು ಯುವಕರ ಪಕ್ಷ ಹೀಗಾಗಿ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಬೀಳಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬೀಳಗಿ ವಿಧಾನ ಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಇದರ ಫಲವಾಗಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಕಳೆದ ೪ ವರ್ಷಗಳ ಅವಧಿಯಲ್ಲಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೊವಿಡ್ ಸಂಕಷ್ಟದ ಮಧ್ಯೆಯೂ ಉತ್ತಮ ಆಡಳಿತ ನೀಡಿದೆ, ನೀರಾವರಿ, ಕೃಷಿ, ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಸೇರಿದಂತೆ ಎಲ್ಲ ಶ್ರಮಿಕ ವರ್ಗಗಳ ಏಳ್ಗೆಗೆ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ಮುರುಗೇಶ ನಿರಾಣಿ ದೂರದೃಷ್ಟಿಯ ನಾಯಕ. 2 ಬಾರಿ ಕೈಗಾರಿಕಾ ಸಚಿವರಾಗಿ ಕರ್ನಾಟಕ ಕೈಗಾರಿಕಾ ರಂಗಕ್ಕೆ ಹಲವು ಮಹತ್ವಾಕಾಂಕ್ಷೆಯ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದ ಕೈಗಾರಿಕಾ ರಂಗ ವಿಸ್ತರಿಸುವ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವರು ಕಾರಣೀಕರ್ತರಾಗಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿಯೂ ಅವರು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ಸಮಸ್ಯೆ ಅರಿತು ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳುವುದು ನಿಶ್ಚಿತ, ಮುರುಗೇಶ ನಿರಾಣಿಯವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಬಿಜೆಪಿಗೆ ಬೀಳಗಿಯ ಜನತೆ ಶಕ್ತಿ ತುಂಬಬೇಕು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಅಭಿವೃದ್ದಿ ಕಾರ್ಯಗಳು, ಶೋಷಿತರು ಹಾಗೂ ಶ್ರಮಿಕರ ಕಲ್ಯಾಣಕ್ಕೆ ಹಮ್ಮಿಕೊಂಡ ಕಾರ್ಯಕ್ರಮಗಳು ಬಿಜೆಪಿ ಬಗೆಗಿನ ಜನರ ವಿಶ್ವಾಸವನ್ನು ಹೆಚ್ಚಿಸಿವೆ. ಆಡಳಿತಾತ್ಮಕವಾಗಿ ತುಂಬ ವಿಶಾಲವಾದ ಬೀಳಗಿ ಮತಕ್ಷೇತ್ರವನ್ನು ಮುರುಗೇಶ ನಿರಾನಿಯವರು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ. ಎಲ್ಲ ವರ್ಗದ ಜನರನ್ನು ಪ್ರೀತಿಸುವ, ಗೌರವಿಸುವ ಮುರುಗೇಶ ನಿರಾಣಿಯವರಿಗೆ ಆಶಿರ್ವದಿಸುವ ಮೂಲಕ ಮತ್ತೊಮ್ಮೆ ದಾಖಲೆಯ ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ವಿ. ಪ. ಸದಸ್ಯ ಹಣಮಂತ ನಿರಾಣಿ, ಬೀಳಗಿ ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಮಲ್ಲಪ್ಪ ಶಂಬೋಜಿ, ವೀರಣ್ಣ ತೋಟದ, ಹೊಳಬಸು ಬಾಳಶೆಟ್ಟಿ, ಮಹಾಂತೇಶ ಕೋಲಕಾರ, ವಿ. ಜಿ. ರೇವಡಗಾರ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.