ಹೈಕಮಾಂಡ್​ ಒಪ್ಪಿದರೂ ವರುಣಾದಿಂದ ವಿಜಯೇಂದ್ರ ಬೇಡ: ಬಿಎಸ್ ಯಡಿಯೂರಪ್ಪ.! ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ರಕ್ಷಾ ಕವಚವಾಗಿ ನಿಂತಿ ಬಿಎಸ್‌ವೈ

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಂತೂ ವಿಧಾಸನಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಪಟ್ಟಿ ಸಾಕಷ್ಟು ಚರ್ಚೆಯಾಗುತ್ತಿದೆ.ಬಿಜೆಪಿ  ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸಿದೆ. ಈ ಮಧ್ಯೆ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಸ್ಪರ್ಧೆ ಸಾಕಷ್ಟು ಚರ್ಚೆಯಾಗುತ್ತಿದೆ. ಮೊನ್ನೆ (ಮಾ.30) ರಂದು ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು“ಪುತ್ರ ವಿಜಯೇಂದ್ರ ವರುಣಾದಿಂದ ಸ್ಪರ್ಧಿಸುವ ಸಾಧ್ಯೆತೆ ಇದೆ” ಎಂದಿದ್ದರು. ನಿನ್ನೆ (ಮಾ.31) ವರುಣಾದಿಂದ ಸ್ಪರ್ಧಿಸುವುದಿಲ್ಲ, ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ. ಮುಂದುವರೆದು ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್​ ಒಪ್ಪಿತ್ತು. ಆದರೆ ನಾನೇ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎಂದು ಹೇಳಿದ್ದೇನೆ ಎಂದು ಹೇಳುವ ಮೂಲಕ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ರಕ್ಷಾ ಕವಚವಾಗಿ ನಿಂತಿರುವ ಹಾಗೆ ಕಾಣುತ್ತದೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿಜಯೇಂದ್ರ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ಮನವೊಲಿಸುತ್ತೇನೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟು ಬರುವುದಿಲ್ಲ. ವರುಣ ಕ್ಷೇತ್ರದಲ್ಲಿ ಒಳ್ಳೇ ಅಭ್ಯರ್ಥಿಯನ್ನೇ ಹಾಕುತ್ತೇವೆ ಎಂದು ಹೇಳಿದ್ದಾರೆ.

ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ಪುತ್ರ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಬೇಕು. ವರುಣಾ ಕ್ಷೇತ್ರದ ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ. ಆದರೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ. ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡದ ಕಾರಣ ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕು. ಇದು ನನ್ನ ನಿರ್ಧಾರ ಎಂದು ಖಡಕ್​ ಸೂಚನೆ ನೀಡಿದ್ದಾರೆ.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಬಿವೈ ವಿಜಯೇಂದ್ರ ಅವರ ಹೆಸರು ವರುಣಾ ಕ್ಷೇತ್ರಕ್ಕೆ ಪ್ರಸ್ತಾಪವಾಗಿತ್ತು. ಸಾಕಷ್ಟು ಪ್ರಚಾರ ನಡೆಸಿದ್ದರೂ ಕೂಡಾ ಬಿಜೆಪಿ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು. ಇದರಿಂದಾಗಿ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಅಸಮಧಾನಗೊಂಡಿದ್ದು ಇತಿಹಾಸ.

ಬಿವೈ ವಿಜಯೇಂದ್ರ ಅವರಿಗೆ ಇದು ಮೊದಲ ಚುನಾವಣೆಯಾಗಿದ್ದು, ಮೊದಲ ಚುನಾವಣೆಯಲ್ಲಿಯೇ ವಿಜಯೇಂದ್ರ ಸ್ಪರ್ಧೆ ಮಾಡಿ ಸೋತರೆ ಅವರ ರಾಜಕೀಯ ಭವಿಷ್ಯಕ್ಕೆ ಪೂರ್ಣ ವಿರಾಮ ಬೀಳುವ ಆತಂಕವಿದೆ. ಈ ಹಿನ್ನೆಲೆ ಎಸ್​ ಯಡಿಯೂರಪ್ಪ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಯಾವುದು ಬೇರೆ ಕ್ಷೇತ್ರ ಬೇಡ ಎಂದು ತಮ್ಮ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಣೆ ಮಾಡಿ ಪುತ್ರನ ರಕ್ಷಣೆಗೆ ಬಿಎಸ್​ವೈ ಮುಂದಾಗಿದ್ದಾರೆ.

ಕಾರ್ಯಕರ್ತರನ್ನು ಸಮಾಧಾನ ಮಾಡುವ ಮೂಲಕ ಹೆಜ್ಜೆ ಹಿಂದಿಟ್ಟರಾ ವಿಜಯೇಂದ್ರ

ಇನ್ನೂ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಬಿವೈ ವಿಜಯೇಂದ್ರ ಅವರು ಹೈಕಮಾಂಡ್​​ ಒಪ್ಪಿದರೇ ವರುಣಾದಿಂದ ಸ್ಪರ್ಧಿಸಲು ನಾನು ಸಿದ್ದ ಎಂದಿದ್ದರು. ಆದರೆ ಇಂದು ಅಪ್ಪ ಬಿಎಸ್​ ಯಡಿಯೂರಪ್ಪ ಅವರು ಪುತ್ರನ ಸ್ಪರ್ಧೆಗೆ ನಕಾರ ಅಂದಿದ್ದು, ಮೈಸೂರಿನಲ್ಲಿ ವರುಣಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ.

ನಿಮ್ಮ ಪ್ರೀತಿ ವಿಶ್ವಾಸ ನನಗೆ ಧೈರ್ಯ ಕೊಟ್ಟಿದೆ. ನಾನು ರಾಜಕಾರಣಕ್ಕೆ ಬರಬೇಕೆಂದು ಎಂದೂ ಅಂದುಕೊಂಡಿರಲಿಲ್ಲ. ಕಳೆದ ಬಾರಿ ಅನಿರೀಕ್ಷಿತವಾಗಿ ಅಭ್ಯರ್ಥಿ ಮಾಡಿ ಅಂತಾ ಹೇಳಿದ್ದೀರಿ. ಅದಕ್ಕಾಗಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಲು ಪ್ರಯತ್ನಿಸಿದೆ. ವರುಣ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಲ್ಲಲು ನನಗೆ ಸಲಹೆ ಬಂದಿತ್ತು. ಆಗ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಬಿಎಸ್​ವೈ ಮಗನಾಗಿ ಪಕ್ಷದ ವಿರುದ್ಧ ಹೋಗಬಾರದೆಂದು ತೀರ್ಮಾನ. ಅದಕ್ಕಾಗಿಯೇ ನಾನು ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದೆ. ಅಂದಿನ ಚಿತ್ರಣ ಈಗಲೂ ನನ್ನ ಕಣ್ಮುಂದೆ ಇದೆ ಇತಿಹಾಸ ಮೆಲಕು ಹಾಕಿದರು.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವರುಣಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಬಿವೈ ವಿಜಯೇಂದ್ರ ಮಾತನಾಡಿ ಸ್ಪರ್ಧಿಸದ ಹಿನ್ನೆಲೆ ಎಷ್ಟೋ ಜನ ವಾಪಸ್​ ಊರಿಗೂ ಹೋಗಿರಲಿಲ್ಲ. ನಾನು ಸಂಯಮ ಕಳೆದುಕೊಂಡಿದ್ದರೆ ನಮ್ಮ ಪಕ್ಷಕ್ಕೆ ಹಾನಿಯಾಗುತ್ತಿತ್ತು. ಅವತ್ತು ಸ್ಪರ್ಧೆ ಮಾಡದೆ ಇರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಅಭ್ಯರ್ಥಿ ಮಾಡಲಿಲ್ಲ, ಆದರೆ ನಿಮ್ಮ ಪ್ರೀತಿ ನನಗೆ ಉತ್ತಮ ಸ್ಥಾನ ಸಿಕ್ಕಿತು. ವರುಣದ ಪ್ರೀತಿಯಿಂದ K.R.ಪೇಟೆಯಲ್ಲಿ ಕೆಲಸ ಮಾಡಲು ಸಾಧ್ಯವಾಯ್ತು ಎಂದರು.

ನನ್ನನ್ನು ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದು ವರುಣಾ ಕ್ಷೇತ್ರ. ಯಡಿಯೂರಪ್ಪ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ. ಎಲ್ಲಾ ವರ್ಗಗಳನ್ನು ಒಂದು ಕುಟುಂಬದಂತೆ ಕರೆದೊಯ್ಯಬೇಕು. ಇದು ಬಿ.ಎಸ್.ಯಡಿಯೂರಪ್ಪನವರ ಆಶಯವಾಗಿದೆ. ನಾನು ಯಡಿಯೂರಪ್ಪನವರ ಹಾದಿಯಲ್ಲಿ ಸಾಗಲು ಬಂದಿದ್ದೇನೆ. ವೀರಶೈವ ಲಿಂಗಾಯತ ವೋಟ್ ಇದೆ ಅಂತಾ ವರುಣಾಗೆ ಬಂದಿಲ್ಲ. ಎಲ್ಲಿ ನಿಲ್ಲಬೇಕು ಬೇಡ ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ವರುಣ ಕ್ಷೇತ್ರ ಬೇರೆ ಶಿಕಾರಿಪುರ ಕ್ಷೇತ್ರ ಬೇರೆ ಅಂದುಕೊಂಡಿಲ್ಲ. ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿದ್ದು ಶಿಕಾರಿಪುರ. ಪಕ್ಷ ಏನೇ ತೀರ್ಮಾನ ಮಾಡಿದ್ರೂ ನನ್ನ ಹೃದಯದಲ್ಲಿ ಇರುತ್ತೀರಿ ಎಂದು ಹೇಳಿದರು.

ವರುಣ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ

ವರುಣ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಯಡಿಯೂರಪ್ಪನವರ ನಿವಾಸ ದಿನದ 24 ಗಂಟೆಯೂ ತೆರೆದಿರುತ್ತದೆ. ಮುಖ್ಯಮಂತ್ರಿ ಮಗ ಅದು ಇದು ಅಂತ ಏನಾದರೂ ಹೇಳಬಹುದು. ಆದರೆ ದೇವರು ಮೆಚ್ಚುವಂತಹ ಕೆಲಸ ಮಾಡಿದ್ದೇನೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಅವಕಾಶ ಇದೆ. ಮಂಡ್ಯದ ಕೆ.ಆರ್.ಪೇಟೆ, ತುಮಕೂರಿನ ಶಿರಾದಲ್ಲಿ ನಾನು ನಿಂತಿರಲಿಲ್ಲ. ಯಾರೇ ಅಭ್ಯರ್ಥಿ ಆದರೂ ಕಮಲ ಅರಳಿಸಬೇಕೆಂದು ಶಪಥ ಮಾಡಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎನ್ನು ಕ್ಷೇತ್ರದಿಂದ ಅಧಿಕೃತವಾಗಿ ಹಿನ್ನಡೆದರು.

(ಕೃಪೆ:ಟಿವಿ9)
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";