♦.ಉಮೇಶ ಗೌರಿ (ಯರಡಾಲ)
ಬೆಳಗಾವಿ (ಸೆ.21): ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದ ಪಡಸಾಲೆ ಎಂದರೆ ತಪ್ಪಾಗಲಾರದು ಇಲ್ಲಿನ ರಾಜಕೀಯ ವಿದ್ಯಮಾನ ಇಡೀ ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುವಂತಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ರಾಜ್ಯದ ಜನ ನೋಡಿದ್ದಾರೆ.ಇದೀಗ ಬೈಲಹೊಂಗಲ ಮತಕ್ಷೇತ್ರದ ರಾಜಕೀಯ ಪ್ರಹಸನದಲ್ಲಿ ಬಿಜೆಪಿ ಟಿಕೇಟ್ ಗಾಗಿ ತೀವ್ರ ಪೈಪೋಟಿ ಶುರುವಾಗಿದ್ದರೂ ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದಕ್ಕೆ ತೆರೆಮರೆಯಲ್ಲೇ ಮದ್ದು ನೀಡಿದ್ದು ಬಣ ರಾಜಕೀಯದ ಶಮನಕ್ಕೆ ಮುಂದಾಗಿರುವುದು ವಿಶೇಷ.
ಮಾಜಿ ಸಿಎಂ ಬಿ.ಎಸ್.ವೈ ಈ ಹಿಂದೆ ತಾವೇ ಕಟ್ಟಿ ಸೈಕಲ್ ಮೇಲೆ ನಿರಂತರವಾಗಿ ಸಂಘಟಿಸಿ ಪಕ್ಷವನ್ನು ಬೆಳೆಸಿ ಕೆಲವು ಆಂತರಿಕ ಮುನಿಸುಗಳಿಂದ ಪಕ್ಷ ತೊರೆದು ಬಿಜೆಪಿಗೆ ಪರ್ಯಾಯವಾಗಿ ಕೆಜೆಪಿ ಸ್ಥಾಪನೆ ಮಾಡಿ ಸೆಡ್ಡು ಹೊಡೆದಿದ್ದು ಅವರ ಅಪ್ರತಿಮ ಸಾಧನೆಗಳಲ್ಲೊಂದು. ಈಗ ಕೆಜೆಪಿ-ಬಿಜೆಪಿ ಪಕ್ಷದಲ್ಲಿ ವಿಲೀನಗೊಂಡು ವರ್ಷಗಳೇ ಉರುಳಿದೆ. ಈಗ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದ್ದರೂ ಮೂಲ ಮತ್ತು ವಲಸೆ ಅನ್ನೋ ಸಣ್ಣನೆಯ ಬಿರುಕು ಬಿಜೆಪಿಯಲ್ಲೂ ಇರುವುದು ಸುಳ್ಳಲ್ಲ. ಬೈಲಹೊಂಗಲ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್ ಮತ್ತು ಜಗದೀಶ್ ಮೆಟಗುಡ್ ಮಧ್ಯೆ ಹಗ್ಗ ಜಗ್ಗಾಟ ನಡೆದಿದ್ದು ಕೇಸರಿ ಪಾಳಯದಲ್ಲಿ ಬಣ ರಾಜಕಾರಣದ ಹೊಗೆ ಕಾವೇರುತ್ತಿದೆ.
ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ವಿಶ್ವನಾಥ್ ಪಾಟೀಲ ಎದರಾಳಿ ಬಿಜೆಪಿ ಅಭ್ಯರ್ಥಿ ಜಗದೀಶ್ ಮೆಟಗುಡ್ಡ ಅವರನ್ನು ಪರಾಭವಗೊಳಿಸಿದ್ದರು. ಇದೇ ಕಾರಣಕ್ಕೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಮೆಟಗುಡ್ಡ ಬಿಜೆಪಿ ಟಿಕೇಟ್ ವಂಚಿತರಾಗಿ ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 41 ಸಾವಿರಕ್ಕೂ ಅಧಿಕ ಮತ ಪಡೆಯುವ ಮೂಲಕ ಬಿಜೆಪಿ ಮತಗಳನ್ನು ಸೆಳೆದು, ಬಿಜೆಪಿ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲರ ಸೋಲಿಗೆ ಕಾರಣರಾಗಿದ್ದರು. ಹೀಗಾಗಿ ಕಾಂಗ್ರೇಸ್ ಅಭ್ಯರ್ಥಿ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದರು.
ಆಗಿನಿಂದಲೂ ಬೈಲಹೊಂಗಲ ವಿಧಾನಸಭೆ ಮತಕ್ಷೇತ್ರದಲ್ಲಿ ಬಿಜೆಪಿ -ಕೆಜೆಪಿ ಮಧ್ಯೆ ಸಣ್ಣದೊಂದು ಅಂತರ ಈಗಲೂ ಹಾಗೆಯೇ ಇದೇ. ಪಾಟೀಲ ಬಿ.ಎಸ್.ವೈ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದು ಮೆಟಗುಡ್ ಅವರು ಮೂಲ ಬಿಜೆಪಿ ಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಟಿಕೇಟ್ ಯಾರಿಗೆ ಲಭಿಸಲಿದೆ ಅನ್ನೋದು ಕ್ಷೇತ್ರದ ಜನರಲ್ಲಿ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ಬೈಲಹೊಂಗಲಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಬಿಎಸ್‌ವೈ ಜಾಣ ನಡೆ ಅನುಸರಿಸಿದ್ದು,ಮೊದಲು ಮಾಜಿ ಶಾಸಕ ಮೆಟಗುಡ್ಡ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ, ನಂತರ ಕಾರ್ಯಕ್ರಮದ ಬಳಿಕ ಮಾಜಿ ಶಾಸಕ ಡಾ. ವಿಶ್ವನಾಥ್ ಪಾಟೀಲ್ ಮನೆಗೆ ಭೇಟಿ ನೀಡಿ ಊಟ ಮಾಡುವ ಮೂಲಕ ಬಣ ರಾಜಕಾರಣ ಸ್ಫೋಟಗೊಳ್ಳದಂತೆ ಬ್ಯಾಲನ್ಸ್ ಮಾಡಿದ್ದಾರೆ.
ಬಿಎಸ್‌ವೈ ಜಾಣ ನಡೆಯಿಂದ ಬೈಲಹೊಂಗಲದಲ್ಲಿ ಬಣ ರಾಜಕೀಯ ಒಂದು ಹಂತದಲ್ಲಿ ಶಮನವಾಗಿದ್ದರೂ ಟಿಕೇಟ್ ಯಾರಿಗೆ ಅನ್ನೋ ಕೌತುಕವಂತೂ ಇದ್ದೇ ಇದೆ.
ಬಣ ರಾಜಕೀಯದ ಮಧ್ಯೆ ಹೈ ಕಮಾಂಡ್ ಹೇಗೆ ಮಧ್ಯೆ ಪ್ರವೇಶ ಮಾಡಿ ಇಬ್ಬರೂ ಘಟಾನುಘಟಿ ನಾಯಕರನ್ನು ಒಂದು ಮಾಡಲಿದೆ? ಇಬ್ಬರ ಮಧ್ಯೆ ಒಬ್ಬರೇ ಟಿಕೇಟ್ ಪಡೆಯುವುದರಿಂದ ಇಲ್ಲಿ ಆ ಅದೃಷ್ಟ ಯಾರಿಗೆ ಒಲಿದು ಬರಲಿದೆ? ಒಟ್ಟಾರೆ ಅನ್ನೋ ಚರ್ಚೆಗಳು ಶುರುವಾಗಿದ್ದು ಜನಾಭಿಪ್ರಾಯದ ಅನ್ವಯ ಬಿ.ಎಸ್.ವೈ ಪ್ರಭಾವ ಬೀರಿ ಅವರ ಆಪ್ತ ಡಾ.ವಿ.ಐ.ಪಾಟೀಲ ಈ ಬಾರಿ ಟಿಕೇಟ್ ಪಡೆದರೂ ಅಚ್ಚರಿಯಿಲ್ಲ ಅನ್ನೂ ಮಾತುಗಳು ರಾಜಕೀಯದ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.