ಸಪ್ಪೆ ಮುಖದಲ್ಲೇ ದೆಹಲಿಯಿಂದ ಬೆಂಗಳೂರಿಗೆ ಮುಖಮಾಡಿದ ಬಿ.ಎಸ್.ವೈ​

ಉಮೇಶ ಗೌರಿ (ಯರಡಾಲ)

ಕರ್ನಾಟಕ ವಿಧಾನಸಭೆ ಚುನಾವಣೆ 2023 ಸಮೀಪಿಸುತ್ತಿದ್ದರೂ ಬಿಜೆಪಿ ಈವರಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇಂದು ತಡರಾತ್ರಿ ಇಲ್ಲಾ ನಾಳೆ ಪಟ್ಟಿ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ಸಭೆ ನಡೆಸಿದೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್‌ ಯಡಿಯೂರಪ್ಪ ಅವರ ಜೊತೆ ಕೆಲವು ನಿಮಿಷಗಳ ಕಾಲ ಪಕ್ಷ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಭೆ ನಡೆಸಿದ್ದು, ಟಿಕೆಟ್ ಬಗ್ಗೆ ಹಾಗೂ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಕಳೆದ 15 ದಿನಗಳಿಂದ ಹೈವೋಲ್ಟೇಜ್‌ ಮೀಟಿಂಗ್‌ ಮಾಡಿರುವ ನಾಯಕರು ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನ್ ಹೇಳುತ್ತೆ? ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಟಿಕೆಟ್​ ಘೋಷಣೆಗೂ ಮುನ್ನ ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಅದರಂತೆ ಇಂದು ಕೇವಲ 10 ನಿಮಿಷ ನಡ್ಡಾ ಭೇಟಿಯಾಗಿದ್ದ ಯಡಿಯೂರಪ್ಪ, ಕೆಲವು ಕ್ಷೇತ್ರಗಳಲ್ಲಿ ಬೆಂಬಲಿಗರ ಪರ ಯಡಿಯೂರಪ್ಪ ಬ್ಯಾಟಿಂಗ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಟಿಕೆಟ್ ನೀಡುವ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಬೇಸರದಲ್ಲೇ ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿನತ್ತ ಮುಖಮಾಡಿದ್ದಾರೆ.

ಬಿ.ಎಸ್.ವೈ​ ಬಿಟ್ಟು ಸಭೆ ನಡೆಸಿದ ಹೈಕಮಾಂಡ್: ಇಂದು ಬೆಳಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಬಿಟ್ಟು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಇತರೆ ನಾಯಕರೊಂದಿಗೆ ಸಭೆ ನಡೆಸಿದ್ದರು. ಈ ಸಭೆ ಬಳಿಕ ಜೆಪಿ ನಡ್ಡಾ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಬಳಿಕ ಯಡಿಯೂರಪ್ಪ ಜೊತೆ ನಡ್ಡಾ ಅವರು ಸಭೆ ನಡೆಸಿ ಕೊನೆಯದಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 10-20 ನಿಮಿಷಗಳ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಸರಣಿ ಸಭೆಗಳು, ಸುದೀರ್ಘ ಚರ್ಚೆಗಳು ನಡೆಯುತ್ತಿದ್ದರೆ ಇತ್ತ ದಿಲ್ಲಿ ನಾಯಕರ ದಾಳಕ್ಕೆ ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಈ ಬಾರಿ 16 ಅಥವಾ ಅದಕ್ಕಿಂತ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗುತ್ತೆ ಎನ್ನುವ ಮಾಹಿತಿ ಬಿಜೆಪಿ ಪಾಳಯದಿಂದಲೇ ತಿಳಿದುಬಂದಿದೆ. ಹೀಗಾಗಿ ಕೇಸರಿ ಮನೆಯಲ್ಲಿ ಕಂಪನ ಎದ್ದಿದ್ದು, ಯಾರಿಗೆ ಟಿಕೆಟ್ ಮಿಸ್ಸಾಗುತ್ತೋ ಎನ್ನುವ ತಳಮಳ ಶುರುವಾಗಿದೆ.
……..
ಕೃಪೆ:ಟಿವಿ9
Share This Article
";