ಪ್ರತ್ಯಕ್ಷವಾಗಿ ಕಂಡರೂ, ಪ್ರಮಾಣಿಸಿ ನೋಡಿ. ಮುರುಗೇಶ ನಿರಾಣಿಯವರ ವಿಚಾರದಲ್ಲಿ ತಪ್ಪು ಗ್ರಹಿಕೆ ಬೇಡ: ಬಿ ಎಮ್‌ ಚಿಕ್ಕನಗೌಡರ.

ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಮ್.ಚಿಕ್ಕನಗೌಡರ

ಬೈಲಹೊಂಗಲ: ಮುರುಗೇಶ ನಿರಾಣಿಯವರನ್ನು ಗುರಿಯಾಗಿಸಿಕೊಂಡು ಮಾಡಿರುವ ಆರೋಪ ಹಾಗೂ ಅವರು ಕೊಟ್ಟ ದಾನವನ್ನು ಜೋಳಿಗೆ ಹಾಕಿ ಮರಳಿಸುತ್ತೇನೆ ಎಂಬ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳ ಹೇಳಿಕೆ ತೀವ್ರ ಬೇಸರ ತರಿಸಿದೆ. ಇದು ಸಮಾಜಕ್ಕೆ ದೇಣಿಗೆ ನೀಡುವ ಇನ್ನಿತರ  ದಾತರನ್ನು ಅಪಮಾನಿಸಿದಂತಾಗುತ್ತದೆ. ಎಂದು  ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಮ್.ಚಿಕ್ಕನಗೌಡರ ಬೈಲಹೊಂಗಲದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವೆಲ್ಲ ಕಂಡ ಹಾಗೆ ಮುರುಗೇಶ ನಿರಾಣಿಯವರು ಹಾಗೂ ಅವರ ಪರಿವಾರ ಕೂಡಲ ಸಂಗಮ ಹಾಗೂ ಹರಿಹರ ಎರಡು ಪೀಠಗಳನ್ನು ಸಮದೃಷ್ಠಿಯಿಂದ ಹಾಗೂ ಸಮಭಾವದಿಂದ ನೋಡಿಕೊಂಡು ಬಂದಿದ್ದಾರೆ. ಎಂದೂ ತಾರತಮ್ಯ ಮಾಡಿಲ್ಲ. ಕೇವಲ ಲಿಂಗಾಯತ ಪಂಚಮಸಾಲಿ ಮಠಗಳಷ್ಟೆ ಅಲ್ಲ, ಸಮಾಜದ ಎಲ್ಲ ಮಠಗಳನ್ನು ಸಮವಾಗಿ ನೋಡುತ್ತ ಬಂದಿದ್ದಾರೆ. ದಾನ-ಧರ್ಮ ಮಾಡುವುದರಲ್ಲಿಯೂ ಸಮಾನತೆ ತೋರಿದ್ದಾರೆ. ಅವರೆಂದೂ ಪ್ರತಿಫಲ ಬಯಸಿ ಸೇವೆ ಮಾಡಿದವರಲ್ಲ. ಸುದ್ದಿಗಾಗಿಯೂ ಸೇವೆ ಮಾಡಲಿಲ್ಲ. ಆತ್ಮತೃಪ್ತಿಗಾಗಿ, ಸರ್ವ ಸಮಾಜದ ಶ್ರೇಯೋಭಿವೃದ್ದಿಗಾಗಿ ಸೇವಾ ಕೈಂಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನಿರಾಣಿಯವರಾಗಲಿ ಹಾಗೂ ಅವರ ಸಹೋದರರಾಗಲಿ ಎಡಗೈಗೆ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು ಎಂಬಂತೆ ದಾನ ಧರ್ಮ ಮಾಡುವುದನ್ನು ರೂಢಿಯಾಗಿಸಿಕೊಂಡು ಬಂದಿದ್ದಾರೆ. ಅಂಥವರನ್ನು ಗುರಿಯಾಗಿಸಿಕೊಂಡು ಆಪಾದನೆ ಮಾಡುವುದು, ತೇಜೋವಧೆ ಮಾಡವುದು ಒಳ್ಳೆಯದಲ್ಲ.

 ಮುರುಗೇಶ ನಿರಾಣಿಯವರಾಗಲಿ ಅವರ ಪರಿವಾರದವರಾಗಲಿ ನೇರವಾಗಿ ಮಾಧ್ಯಮದ ಮುಂದೆ ಅಥವಾ ನೇರವಾಗಿ ಸ್ವಾಮೀಜಿಗೆ ಮತ್ತು ಆಪ್ತ ವರ್ಗದಲ್ಲಾಗಲಿ ಎಲ್ಲೂ ಹೇಳಿಲ್ಲ. ಅವರ ಹಿತೈಷಿಗಳೋ ಅಥವಾ ಬೆಂಬಲಿಗರೋ ಸ್ವಾಮೀಜಿ ಅಥವಾ ಅವರ ಆಪ್ತವಲಯದಲ್ಲಿ ಹೇಳಿಲ್ಲ. ಕೇವಲ ವ್ಯಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯವಾಗಿ ಯಾರೋ ಫಾರ್ವರ್ಡ್ ಮಾಡಿದ್ದನ್ನು ಆಧರಿಸಿ ಮಾಧ್ಯಮಗಳ ಮುಂದೆ ಬಂದು ಹೇಳಿ ವೃಥಾ ಆರೋಪ ಮಾಡುವುದು ಸಮಂಜಸವಲ್ಲ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡುವುದು ಉತ್ತಮವಲ್ಲವೇ? ಇದರಿಂದ ಪಂಚಮಸಾಲಿ ಸಮಾಜವು ಮುಜುಗರ ಅನುಭವಿಸುವಂತಾಗಿದೆ ಎಂದಿದ್ದಾರೆ. 

 ಲಿಂಗಾಯತ ಪಂಚಮಸಾಲಿ ಸಮಾಜ ಎನ್ನುವುದು ಮಹಾಮನೆ ಇದ್ದಂತೆ. ಇಲ್ಲಿಯ ಭಿನ್ನಾಭಿಪ್ರಾಯಗಳನ್ನು ಪ್ರತಿ ಬಾರಿಯೂ ಮಾದ್ಯಮದ ಮುಂದೆ ಹೇಳುವುದು ತರವಲ್ಲ. ಸ್ವಾಮೀಜಿಗಳು ಮಾಧ್ಯಮದ ಮುಂದೆ ಬಂದಷ್ಟು ಯಾವ ಮಠಾಧೀಶರು ಮಾಧ್ಯಮದ ಮುಂದೆ ಬಂದಿಲ್ಲ. ಬಹಿರಂಗವಾಗಿ ಹೇಳಿಕೆ ನೀಡುವ ಬದಲು ನೀವೇ ಫೋನ್ ಮೂಲಕವೋ ಅಥವಾ ನೆರವಾಗಿಯೇ ಮುರುಗೇಶ ನಿರಾಣಿಯವರಿಗೆ ಕೇಳಬಹುದಿತ್ತಲ್ಲ! ಅವರೇನೂ ಹೊರಗಿನವರಲ್ಲ. ನಿಮ್ಮ ಪಕ್ಕದಲ್ಲಿರುವ ಅವರಿಬ್ಬರೂ ಮುರುಗೇಶ ನಿರಾಣಿಯವರ ಜೊತೆಗೆ ಮಾತನಾಡದಷ್ಟು ನಿಮ್ಮನ್ನು ಬಿಗಿ ಮಾಡಿಟ್ಟರೇ? ಎಂದು ಪರೋಕ್ಷವಾಗಿ ಕಾಶಪ್ಪನವರ ಮತ್ತು ಯತ್ನಾಳ ಅವರ ವಿರುದ್ದ ಕಿಡಿ ಕಾರಿದ್ದಾರೆ. 

ಮುರುಗೇಶ ನಿರಾಣಿಯವರಾಗಲಿ ಅವರ ಪರಿವಾರದವರಾಗಲಿ ನೇರವಾಗಿ ಮಾಧ್ಯಮದ ಮುಂದೆ ಅಥವಾ ನೇರವಾಗಿ ಸ್ವಾಮೀಜಿಗೆ ಮತ್ತು ಆಪ್ತ ವರ್ಗದಲ್ಲಾಗಲಿ ತಾವು ಮಾಡಿದ ಸಹಾಯ ಸಹಕಾರದ ಬಗ್ಗೆ ಎಲ್ಲಿಯಾದರೂ ಮಾತನಾಡಿದ ಸಾಕ್ಷಾದಾರಗಳು ಇದ್ದರೆ ಸ್ವಾಮೀಜಿಗಳು ಸಾಬೀತು ಪಡಿಸಲಿ ಆಗ ನಾವು ನಮ್ಮ ವೇದಿಕೆ ಮುಖಾಂತರ ಬಹಿರಂಗ ಕ್ಷೇಮೆಯಾಚಿಸುವಂತೆ ಒತ್ತಾಯಿಸುತ್ತೇವೆ.

ಧರ್ಮಗುರುಗಳಾದವರು ಯಾರ ಮಾತಿಗೂ ಕಿವಿಯಾಗಬೇಡಿ. ನಿಮ್ಮ ಘನತೆ ಸಮಾಜದ ಘನತೆಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಜೋಳಿಗೆ ಹಾಕಿದ ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಹುಟ್ಟಿದ ಪಾವನ ನೆಲವಿದು. ಸಂತರ ಜೋಳಿಗೆ ಯಾರದ್ದೋ ಋಣ ತೀರಿಸಲೋ ಅಥವಾ ವೈಯಕ್ತಿಕ ಹಿತಾಸಕ್ತಿಗೋ ಬಳಕೆಯಾಗಬಾರದು ಎಂಬುದು ಸಮಾಜ ಬಾಂಧವರ ಇಂಗಿತ. ಮತ್ತೊಂದು ಪೀಠದ ವಿಷಯ ಆ ಸ್ವಾಮೀಜಿಗಳು ಸಮಾಜಕ್ಕೆ ಸೇವೆ ಸಲ್ಲಿಸಲು ಮಾಡಿಕೊಂಡ ವ್ಯವಸ್ಥೆ. ಪೀಠಗಳು, ಮಠ ಮಾನ್ಯಗಳು, ಸಮಾಜ ಸಂಘಟನೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ದಾಸೋಹಕ್ಕೆ, ಧರ್ಮ ಪ್ರಚಾರಕ್ಕೆ ಹಾಗೂ ಸಮಾಜಕ್ಕೆ ಸಂಸ್ಕಾರ ಮಾಡಲು ಉಪಯೋಗವಾಗುವಂತಾದರೆ ಸಮಾಜ ಉದ್ಧಾರವಾಗುತ್ತದೆ. ಆದೆಸೆಯಿಂದಲೇ 3 ನೇ ಪೀಠದ ಮೇಲೆಯೂ ಹೊಸ ಭರವಸೆ ಇಟ್ಟು ಮುನ್ನಡೆಯೋಣ.‌

ನೀವು ಕೂಡಲಸಂಗಮ ಪೀಠಾಧಿಪತಿಯಾದಾಗಲು ಸಮಾಜ ನಿಮ್ಮನ್ನು ಮುಕ್ತವಾಗಿ ಸ್ವಾಗತಿಸಿದೆ. ನಿಮ್ಮನ್ನು ಬೆಳೆಸಿದೆ. ನೀವು ತುಂಬು ಮನಸ್ಸಿನಿಂದ ಹಾರೈಸಿ. ಅದು ನಿಮ್ಮ ಹಾಗೂ ನಮ್ಮ ಸಮಾಜದ ಹೃದಯ ವೈಶಾಲ್ಯತೆಯನ್ನು ಪ್ರತಿಬಿಂಬಿಸುತ್ತದೆ. ಒಳ್ಳೆಯದೋ, ಕೆಟ್ದದ್ದೋ ಅವರವರ ಬುತ್ತಿ ಅವರ ಹೆಗಲಿಗಿರುತ್ತದೆ. ಒಬ್ಬ ಸಾಮಾನ್ಯ ಪಂಚಮಸಾಲಿಯಾಗಿ ಇದು ನನ್ನ ಕಳಕಳಿ. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಮ್.ಚಿಕ್ಕನಗೌಡರ ಇಂಗಿತ ವ್ಯಕ್ತಪಡಿಸಿದರು. 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";