ಹೊಸ ರಸ್ತೆ ರಾದ್ದಾಂತಕ್ಕೆ ಮಾರಾಮಾರಿ! ವಿರೋಧ ಮಾಡಿದ ಮಹಿಳೆಯ ತಲೆಯಿಂದ ರಕ್ತ.

ಉಮೇಶ ಗೌರಿ (ಯರಡಾಲ)

ಉಡುಪಿ (ಸೆ.7): ರಸ್ತೆ ನಿರ್ಮಾಣಕ್ಕೆ ವಿರೋಧ ಮಾಡಿದ ಮಹಿಳೆಯನ್ನು ನಡುಬೀದಿಯಲ್ಲಿ ತಳ್ಳಿ ಆಕೆಯ ತಲೆಯಿಂದ ರಕ್ತ ಚಿಮ್ಮುವಂತೆ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆ ಆತ್ರಾಡಿ ಎಂಬಲ್ಲಿ ನಡೆದಿರುವ ಈ ಘಟನೆ, ಇದೇನು ಗುಂಡಾ ರಾಜ್ ನಡೆಯುತ್ತಿದೆಯಾ ಎಂಬ ಪ್ರಶ್ನೆ ಹುಟ್ಟಿಸಿದೆ.  ಉಡುಪಿ ಜಿಲ್ಲೆಯ ಆತ್ರಾಡಿ ಗ್ರಾಮದಲ್ಲಿ ನಡುಬೀದಿಯಲ್ಲೇ ರಾದ್ದಾಂತ ನಡೆದಿದೆ.

ನಿರ್ಮಾಣ ಹಂತದಲ್ಲಿರುವ ರಸ್ತೆಯ ನಡುವೆ, ಮಹಿಳೆಯೊಬ್ಬರು ಕೈಯಲ್ಲಿ ಚಪ್ಪಲಿ ಹಿಡಿದು ಬೊಬ್ಬಿಡುತ್ತಿದ್ದರೆ, ಕೆಲ ಗಂಡಸರು ಆಕೆಯ ಜೊತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿದೆ. ಪರಸ್ಪರ ಹೊಡೆದಾಟ ತಿಕ್ಕಾಟಗಳು ಆರಂಭವಾಗಿದೆ. ಮಹಿಳೆ ಚಪ್ಪಲಿ ಏಟು ಕೊಡುತ್ತಿದ್ದಂತೆ, ವ್ಯಕ್ತಿಯೊಬ್ಬ ಆಕೆಯನ್ನು ತಳ್ಳಿದ್ದಾರೆ. ಇದರಿಂದ ನೆಲಕ್ಕೆ ಕುಸಿದ ಮಹಿಳೆಯ ತಲೆಯಿಂದ ರಕ್ತ ಹರಿದಿದೆ. ಆತ್ರಾಡಿಯ ಗ್ರಾಮೀಣ ರಸ್ತೆ ರಣರಂಗವಾಗಿದೆ. ಸದ್ಯ ಈ ಮಾರಾ ಮಾರಿಯ ವಿಡಿಯೋ ವೈರಲ್ ಆಗುತ್ತಿದೆ. ಹಲ್ಲೆಗೀಡಾದ ಮಹಿಳೆ ಸ್ಥಳೀಯ ನಿವಾಸಿ ಆರತಿ ಶೆಟ್ಟಿ, ಆಕೆಯನ್ನು ತಳ್ಳಿದ್ದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಶೆಟ್ಟಿ! ಈ ಗದ್ದಲಕ್ಕೆ ಅಲ್ಲಿದ್ದ ನಾಗರಿಕರೆಲ್ಲರೂ ಸಾಕ್ಷಿಯಾಗಿದ್ದರು.

ಹಲ್ಲೆಗೊಳಗಾದ ಮಹಿಳೆ ಆರತಿ ಅವರ ಪ್ರಕಾರ, ತನ್ನ ವಿರೋಧದ ಹೊರತಾಗಿಯೂ ಮನೆಯ ಮುಂದೆ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ನಾನು ತಡೆದಿದ್ದೇನೆ, ಈ ವೇಳೆ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ದೂರಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯನೇ ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಆಕೆಯ ತಲೆಯಿಂದ ರಕ್ತ ಸುರಿಯಲು ಕಾರಣವಾಗಿರುವುದು ಜನರ ಆಕ್ರೋಶ ಕ್ಕೆ ಕಾರಣವಾಗಿದೆ.

ಆತ್ರಾಡಿ ಯ ಈ ರಸ್ತೆ ನಿರ್ಮಾಣಕ್ಕೆ ಬಹಳ ಕಾಲದಿಂದ ಬೇಡಿಕೆ ಇತ್ತು. ರಸ್ತೆಯ ಕಾಂಕ್ರಿಟೀಕರಣಕ್ಕೆ ಇತ್ತೀಚೆಗೆ 5 ಲಕ್ಷ ರೂಪಾಯಿ ಮಂಜೂರಾಗಿತ್ತು. ಹಲ್ಲೆಗೊಳಗಾದ ಆರತಿ ಶೆಟ್ಟಿ ಅವರ ಮನೆಯ ನಕ್ಷೆಯ ಪ್ರಕಾರ ಹಿಂಭಾಗದಲ್ಲಿ ರಸ್ತೆ ನಮೂದಿಸಲಾಗಿದೆ. ಆದರೆ ವಾಸ್ತುವಿನ ನೆಪವಡ್ಡಿ ಮನೆ ನಿರ್ಮಾಣದ ವೇಳೆ, ಎದುರುಗಡೆಯಿಂದ ರಸ್ತೆ ನಿರ್ಮಿಸಲಾಗಿತ್ತು. ಆಸು ಪಾಸಿನ ಮನೆಯವರು ಕೂಡಾ ಹಿಂಬದಿಯ ರಸ್ತೆಗೆ ಬದಲಾಗಿ ಮನೆ ಎದುರಿಂದ ರಸ್ತೆ ಮಾಡಿಕೊಂಡಿದ್ದರು. ಈ ರಸ್ತೆಯನ್ನು ಪಂಚಾಯತ್ ನಿರ್ವಹಣೆ ಮಾಡುತ್ತಾ ಬಂದಿತ್ತು.

ನೂತನ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಆರತಿ ಶೆಟ್ಟಿ ಸಹಿತ ಸ್ಥಳೀಯ ಹನ್ನೆರಡು ಮಂದಿ ಒಪ್ಪಿಗೆ ಪತ್ರ ನೀಡಿದ್ದರು. ಈ ಒಪ್ಪಿಗೆ ಪತ್ರದ ಆಧಾರದಲ್ಲಿ ಕಾಮಗಾರಿ ನಡೆಸಲಾಗಿತ್ತು. ಆದರೆ ಇತ್ತೀಚೆಗೆ ಆರತಿ ಶೆಟ್ಟಿ ಮತ್ತು ಸ್ಥಳೀಯರ ನಡುವೆ ಮನಸ್ತಾಪ ಉಂಟಾಗಿದೆ. ಆರತಿ ಶೆಟ್ಟಿ ರಸ್ತೆ ಕಾಂಕ್ರೀಟೀಕರಣಕ್ಕೆ ಆಕ್ಷೇಪ ಎತ್ತಿದ್ದಾರೆ. ನಕ್ಷೆಯಲ್ಲಿ ನಮೂದಾದಂತೆ ಮನೆಯ ಹಿಂದಿನಿಂದಲೇ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಹೊಸ ರಸ್ತೆ ನಿರ್ಮಿಸುವ ವೇಳೆ ಹೈಡ್ರಾಮ ಸೃಷ್ಟಿ ಮಾಡಿದ್ದಾರೆ.

ತಾನು ಆರತಿ ಶೆಟ್ಟಿಯ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ, ಆಕೆ ತನ್ನ ಮೇಲೆ ಚಪ್ಪಲಿ ಯಿಂದ ಏಟು ಕೊಟ್ಟಾಗ, ರಕ್ಷಣೆಗೆಂದು ನನ್ನ ಕೈ ಮೇಲೆತ್ತಿದ್ದೇನೆ. ಇದರಿಂದ ಆಕೆ ನೆಲಕ್ಕೆ ಕುಸಿದಿದ್ದು ಈ ವೇಳೆ ಗಾಯವಾಗಿದೆ, ಎಂದು ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ. ಕಾನೂನು ವೇದಿಕೆಯಲ್ಲಿ ಇತ್ಯರ್ಥವಾಗಬೇಕಾದ ವಿವಾದ ರಸ್ತೆರಂಪಾಟಕ್ಕೆ ಕಾರಣವಾಗಿದ್ದು ಸರಿಯಲ್ಲ ಎಂಬುದು ನಾಗರಿಕರ ಅಭಿಪ್ರಾಯ. ಸದ್ಯ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು ಇಬ್ಬರೂ ಕೂಡ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 

 

(tvsuvrna)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";