ಬೆಳಗಾವಿ ಬಿಜೆಪಿ ಒಳಬೇಗುದಿ ಶಮನಕ್ಕೆ ಅಖಾಡಕ್ಕಿಳಿದ ಬಿ.ಎಲ್ ಸಂತೋಷ್.

ಬೆಳಗಾವಿ:  ರಾಜ್ಯ ರಾಜಕಾರಣದಲ್ಲಿ ತನ್ನದೇಯಾದ ಛಾಪು ಮೂಡಿಸಿದ ಬೆಳಗಾವಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯದ್ದೇ ಮೇಲುಗೈ. ಕಾಂಗ್ರೆಸ್ ನಾಯಕರು ಕಮಲದ ಭದ್ರಕೋಟೆಯನ್ನು ಅದೆಷ್ಟೋ ಬಾರಿ ಬೇಧಿಸಲು ಹೊರಟರೂ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಬೆಳಗಾವಿ ಬಿಜೆಪಿ ಹೊಡೆದು ಹೋಳು ಹೋಳಾಗಿದೆ. ಮೂಲ ಬಿಜೆಪಿಗರು ಹಾಗೂ ಜಾರಕಿಹೊಳಿ ಬದರ್ಸ್​ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಖಾಡಕ್ಕಿಳಿದಿದ್ದು, ಜಿಲ್ಲೆಯಲ್ಲಿನ ಬಣಗಳ ಒಳಬೇಗುದಿಯನ್ನು ತಣಿಸಲು ಮುಂದಾಗಿದ್ದಾರೆ.

18 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಿಜೆಪಿಯು ತನ್ನ ನೆಲೆ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಖುದ್ದು ಬಿ.ಎಲ್.ಸಂತೋಷ್ ಅವರನ್ನು ಅಖಾಡಕ್ಕಿಳಿಸಿರುವುದು ವಿಶೇಷ.

ಎರಡು ಬಣಗಳಾಗಿ ಎಂಎಲ್‌ಸಿ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯನ್ನು ಒಗ್ಗೂಡಿಸಲು ಬಿ.ಎಲ್​.ಸಂತೋಷ್​ ನೇತೃತ್ವದಲ್ಲಿ ಸಾವಗಾಂವ್​​​​ನ ಅಂಗಡಿ ಕಾಲೇಜಿನಲ್ಲಿ ಸಭೆ ಮಾಡುವ ಮೂಲಕ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ಎರಡು ಬಣಗಳಾಗಿ ಎಂ.ಎಲ್‌.ಸಿ ಚುನಾವಣೆಯಲ್ಲಿ ಎರಡು ಸ್ಥಾನ ಕಳೆದುಕೊಂಡಿದ್ದ ಬಿಜೆಪಿ, ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಬಣ ರಾಜಕೀಯದಿಂದ ಪರಿಣಾಮ ಆಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಈ ಹಿನ್ನೆಲೆ ಸವದಿ ಬಣ ಹಾಗೂ ಜಾರಕಿಹೊಳಿ ಬಣ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರ ಜತೆಗೆ ಮಹತ್ವದ ಸಭೆ ನಡೆಸಿದರು.

ಈ ವರೆಗೂ ಪಕ್ಷದ ಕಾರ್ಯಚಟುವಟಿಕೆಗಳ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದ ಜಾರಕಿಹೊಳಿ ಬ್ರದರ್ಸ್ (ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ) ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾನ್ನಾಗಿ ಕಣಕ್ಕಿಳಿಸಿ ಬಿಜೆಪಿ ಅಭ್ಯರ್ಥಿ, ಹಿರಿಯ ನಾಯಕ ಮಹಾಂತೇಶ ಕವಟಿಗಿಮಠ ಸೋಲಿಗೆ ಕಾರಣರಾಗಿದ್ದಾರೆ. ಇದು ಬೆಳಗಾವಿ ಜಿಪಿಯಲ್ಲಿನ ಭಿನ್ನಮತಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಹಲವು ದಿನಗಳ ಹಿಂದೆ ಜಾರಕಿಹೊಳಿ ಸಹೋದರನ್ನು ಹೊರಗಿಟ್ಟು ಸಚಿವ ಉಮೇಶ್ ಕತ್ತಿ ಬಣದ ಗುರುತಿಸಿಗೊಂಡಿದ ಲಕ್ಷಣ್ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ ಒಂದಾಗಿ ಮಹತ್ವದ ಸಭೆ ನಡೆಸುವ ಮೂಲಕ ಜಾರಕಿಹೊಳಿ ಬಣದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದಾಗಿ, ಪಕ್ಷದ ವರಿಷ್ಠರಿಗೆ ರಾಜ್ಯದ ಹಲವು ನಾಯಕರು ಉತ್ತರ ಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಜಿಲ್ಲೆಯ ಬಿಜೆಪಿ ಇಬ್ಬಾಗದತ್ತ ಸಾಗುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ದ ಸ್ವಪಕ್ಷೀಯರು ದೆಹಲಿ ಮಟ್ಟಕ್ಕೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";