ಬೆಳಗಾವಿ(ಅ.11): ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಬೇಕಿದ್ದ ಬುಡಾ ಮೀಟಿಂಗ್ ಬಿಜೆಪಿ ಶಾಸಕರು ಗೈರಾಗಿದ್ದ ಹಿನ್ನಲೆಯಲ್ಲಿ ಮತ್ತೆ ಸಭೆಯನ್ನು ಮುಂದೂಡಲಾಗಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ 4ನೇ ಸಭೆಯನ್ನು ಸೋಮವಾರ ಕರೆಯಲಾಗಿತ್ತು. ಕಳೆದ ಮೂರು ಸಭೆಗೆ ಗೈರಾಗಿದ್ದ ನಗರ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಮತ್ತೆ ಗೈರಾಗಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದೆ.
ಸಭಗೆ ಆಗಮಿಸಿದ ಸತೀಶ ಜಾರಕಿಹೊಳಿ ಮಾದ್ಯಮರೊಂದಿಗೆ ಮಾತನಾಡಿ ಕಳೆದ ನವೆಂಬರ್‌ನಲ್ಲಿ ಬುಡಾ ಸಭೆ ಆಗಿತ್ತು. ಇದಾದ ಬಳಿಕ ಯಾವುದೇ ಸಭೆ ಆಗಿಲ್ಲ. ಮುಂದಿನ ಬಾರಿಯೂ ಸಭೆಗೆ ಬಿಜೆಪಿ ಶಾಸಕರು ಆಗಮಿಸದಿದ್ರೆ ಅಧ್ಯಕ್ಷರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ. ಸದಸ್ಯರ ಸಂಖ್ಯೆ ಇರದ ಹಿನ್ನೆಲೆ ಯಾವುದೇ ರೀತಿ ಚರ್ಚೆ ಆಗಿಲ್ಲ. ಕಣಬರಗಿ ಸ್ಕೀಮ್-61 ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಹೇಳಿದರು.
ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಮಾತನಾಡಿ ಶಾಸಕರಿಗೆ ತಿಳಿಸಿಯೇ ನಾವು ಸಭೆಯನ್ನು ಕರೆದಿದ್ದೇವು. ಶಾಸಕರು, ಸದಸ್ಯರು ಬಾರದ ಹಿನ್ನೆಲೆ ಎರಡು ಬಾರಿ ಸಭೆ ಮುಂದಕ್ಕೆ ಹೋಗಿದೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇರುವಾಗ ನಮ್ಮ ಮಿಟಿಂಗ್‍ನಲ್ಲಿ ಶಾಸಕರು ಗೈರಾಗಿರುವುದು ಸರಿಯಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಿಂದ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಪ್ಲಾಟ್ ಗಳನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದ್ದು ಇದರಿಂದಾಗಿ ಅಲ್ಪ ಪ್ರಮಾಣದ ಜಮೀನು ಹೊಂದಿರುವ ರೈತರಿಗೆ ಆರ್ಥಿಕವಾಗಿ ತುಂಬ ನಷ್ಟವಾಗುತ್ತಿದ್ದು ಜೀವನೋಪಾಯಕ್ಕಾಗಿ ಕೃಷಿ ಜಮೀನನ್ನೇ ಅವಲಂಬಿಸಿರುವ ಇಲ್ಲಿನ ರೈತರಿಗೆ ಇರುವ ತುಸು ಜಮೀನನ್ನೇ ಅವಲಂಬಿಸಿ ಉಪಜೀವನ ಮಾಡುತ್ತಿದ್ದಾರೆ. ಬುಡಾ ಅಧ್ಯಕ್ಷರು ಮತ್ತು ಆಯುಕ್ತರು ಕೂಡಲೇ ಈ ಪ್ರಕ್ರಿಯೆಯನ್ನು ಕೈ ಬಿಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ರೈತರು ಎಚ್ಚರಿಸಿ ಇದೇ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.