ಕಾಂಗ್ರೆಸ್‌ಗೆ ಕೌಂಟರ್‌ ಪ್ಲ್ಯಾನ್‌ ನೀಡಲು ಬಿಜೆಪಿ ಚಿಂತನೆ!

ಬೆಂಗಳೂರು: ಕೆಂಪು ಕೋಟೆಯ ಮೇಲೆ  ಮುಂದೊಂದು ದಿನ ಭಗವಧ್ವಜ  ಹಾರಾಡಬಹುದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. .

ಉಭಯ ಸದನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಯಿಂದಾಗಿ ಸರ್ಕಾರಕ್ಕೂ ತಲೆನೋವಾಗಿದ್ದು ಸಂಧಾನ ಪ್ರಯತ್ನಕ್ಕೆ ಬಗ್ಗದೇ ಇದ್ದಲ್ಲಿ ಪ್ರತ್ಯಸ್ತ್ರ ಪ್ರಯೋಗಕ್ಕೆ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಿರಿಯ ಮುಖಂಡರ ಸಭೆ ನಡೆಯಲಿದೆ. ರಾಷ್ಟ್ರ ಧ್ವಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಈಶ್ವರಪ್ಪ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂಬುವುದು ಕಾಂಗ್ರೆಸ್ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ ಪಟ್ಟು ಹಿಡಿದು ಕಾಂಗ್ರೆಸ್ ಧರಣಿ ನಡೆಸುತ್ತಿದೆ. ಮೂರು ಬಾರಿ ಸಂಧಾನ ಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಿಲ್ಲ. ಇದೀಗ ಸೋಮವಾರವೂ ಕಲಾಪಕ್ಕೆ ಅಡ್ಡಿ ಉಂಟು ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ಈ ನಡುವೆ ಸದನದ ಹೊರಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ. ಸೋಮವಾರ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲಿದ್ದಾರೆ. ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಪತ್ರವನ್ನು ನೀಡಲಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಈಶ್ವರಪ್ಪ ವಿಚಾರ ಭಾರೀ ಸದ್ದು ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಶಾಸಕರ ನಿರಂತರ ಧರಣಿ ಪರಿಣಾಮವಾಗಿ ಕಲಾಪ ಸುಗಮವಾಗಿ ನಡೆದಿಲ್ಲ. ಸೋಮವಾರವೂ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ. ಈ ನಡುವೆ ನಾಲ್ಕು ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕಾರ್ಯಕಲಾಪಗಳ ಪಟ್ಟಿಯಲ್ಲಿ, 2022 ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ ( 2021 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ವಿಧೇಯಕ, 2022 ನೇ ಸಾಲಿನ ಕರ್ನಾಟಕ ಸ್ಟಾಂಪು( ತಿದ್ದುಪಡಿ) ವಿಧೇಯಕ, 2022 ನೇ ಸಾಲಿನ ಕರ್ನಾಟಕ ಸ್ಟಾಂಪು ( ಎರಡನೇ ತಿದ್ದುಪಡಿ) ವಿಧೇಯಕ, 2022 ನೇ ಸಾಲಿನ ಕ್ರಿಮಿನಲ್‌ ಕಾನೂನು ತಿದ್ದುಪಡಿ ಅಧ್ಯಾದೇಶ, 1944( ಕರ್ನಾಟಕ ತಿದ್ದುಪಡಿ) ವಿಧೇಯಕ ಪರ್ಯಾಲೋಚನೆ ಪ್ರಸ್ತಾವ ಇದೆ.

ಸೋಮವಾರ ವಿಧೇಯಕಗಳನ್ನು ಅಂಗೀಕರಿಸಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದಣಾ ನಿರ್ಣಯಕ್ಕೆ ಉತ್ತರ ನೀಡಿ ಸದನವನ್ನು ಅನಿರ್ದಿಷ್ಟಾವಧಿಗಳ ಕಾಲ ಮುಂದೂಡಿಕೆ ಮಾಡುವುದು ಸರ್ಕಾರ ಚಿಂತನೆಯಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";