ಸಾವರ್ಕರ್‌ ಹಾಗೂ ಹಿಂದುತ್ವದ ಮೂಲಕ ಕಾಂಗ್ರೆಸ್ ಗೆ ಕೌಂಟರ್‌ ನೀಡಲು ಬಿಜೆಪಿ ತಂತ್ರ ಹೂಡುತ್ತಿದೆ.

ಬೆಳಗಾವಿ: 2023 ರ ವಿಧಾನಸಭೆ ಚುನಾವಣೆಗೆ ಇನ್ನೇನು ಎಂಟು ತಿಂಗಳು ಬಾಕಿ ಉಳಿದಿದೆ. ಇದರ ಹಿನ್ನಲೆ ರಾಜ್ಯದಲ್ಲಿ ಮತೀಯ ಆಧಾರದ ಮೇಲೆ ರಾಜಕೀಯ ಕೆಸರಾಟ ಶುರುವಾಗುತ್ತಿವೆ. ಸರ್ಕಾರದ ವಿರುದ್ಧ 40% ಭ್ರಷ್ಟಾಚಾರ, ಪಿಎಸ್‌ಐ ಹಗರಣ ಸೇರಿದಂತೆ ಇತರೆ ನೇಮಕಾತಿಯಲ್ಲಿ ಹಗರಣ, ಪ್ರವಾಹ ಪರಿಹಾರ, ಬೆಲೆ ಏರಿಕೆ, ಅಭಿವೃದ್ದಿ ಹಿನ್ನಡೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಹೋರಾಟ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದರೆ, ಇದಕ್ಕೆ ಪ್ರತ್ಯಸ್ತ್ರವಾಗಿ ಸಾವರ್ಕರ್‌ ಹಾಗೂ ಹಿಂದುತ್ವದ ಮೂಲಕ ಕೌಂಟರ್‌ ನೀಡಲು ಬಿಜೆಪಿ ತಂತ್ರ ಹೂಡುತ್ತಿದೆ.

ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಭ್ರಷ್ಟಾಚಾರದ ಆರೋಪ ದೊಡ್ಡ ಮಟ್ಟಿನಲ್ಲಿ ಹೊಡೆತ ಬಿದ್ದಿತ್ತು. ಚುನಾವಣಾ ಸಂದರ್ಭದಲ್ಲೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‌ ಸಿದ್ದತೆ ನಡೆಸುತ್ತಿದೆ.ಇದರ ನಡುವೆ ಸರಣಿ ಸಭೆಗಳ ಮೂಲಕ ಬಿಜೆಪಿ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದೆ.

ಈಗಾಗಲೇ ಶುರುವಾದ ಸಾವರ್ಕರ್ ಗದ್ದಲ ಬಿಜೆಪಿ ಪಾಲಿಗೆ ಕಾಂಗ್ರೆಸ್‌ ಮಣಿಸಲು ಸಿಕ್ಕಿರುವ ಉತ್ತಮವಾದ ಅಸ್ತ್ರವಾಗಿದೆ. ಇದರ ಜೊತೆಗೆ ಕೊಡಗಿನಲ್ಲಿ ನಡೆದ ಮೊಟ್ಟೆ ಎಸೆತ ಘಟನೆಯ ಬಳಿಕ ಮಾಂಸಹಾರ, ಸಸ್ಯಹಾರ ವಿವಾದವೂ ಶುರುವಾಗಿದೆ. ಸಿದ್ದರಾಮಯ್ಯ ಅವರು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರವನ್ನು ಬಿಜೆಪಿ ಮುನ್ನಲೆಗೆ ತರುತ್ತಿದೆ. ಈ ಹಿಂದೆ ಮೀನು ತಿಂದು ದೇವಸ್ಥಾನಕ್ಕೆ ಹೋಗಿರುವ ವಿಚಾರವನ್ನು ಕೂಡಾ ಬಿಜೆಪಿ ಚರ್ಚೆಗೆ ತರುತ್ತಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ತಮ್ಮ ಮನೆಯ ಮುಂದೆ ಸಾವರ್ಕರ್‌ ಫ್ಲೆಕ್ಸ್ ಹಾಕಿದ್ದಾರೆ. ಇದರ ಜೊತೆಗೆ ತಾಕತ್ತಿದ್ದರೆ ಟಿಪ್ಪು ಫೋಟೋವನ್ನು ನಿಮ್ಮ ಮನೆ ಕಚೇರಿ ಮುಂದೆ ಹಾಕಿ ಎಂದು ಬಿಜೆಪಿ ನಾಯಕರಿಗೂ ಸವಾಲು ಹಾಕಿದ್ದಾರೆ. ಈ ಮೂಲಕ ಸಾವರ್ಕರ್ ಟಿಪ್ಪು ವಿಚಾರಗಳೇ ರಾಜಕೀಯ ಚರ್ಚೆಯ ಸುದ್ದಿ ಕೇಂದ್ರವಾಗಿದೆ.

ಇನ್ನು ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಲು ಕಾಂಗ್ರೆಸ್ ಕೂಡಾ ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ತಂತ್ರಕ್ಕೆ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ. ಸಾವರ್ಕರ್‌, ಟಿಪ್ಪು, ಮಾಂಸಹಾರ ಚರ್ಚೆಗೆ ಅವಕಾಶ ನೀಡದೆ ಅಭಿವೃದ್ದಿ, ಭ್ರಷ್ಟಾಚಾರ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸಬೇಕು ಎಂಬುವುದು ಕಾಂಗ್ರೆಸ್ ಯೋಜನೆಯಾಗಿದೆ. ಅದರ ಜೊತೆಗೆ ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ತಂತ್ರ ಹೂಡುತ್ತಿದೆ. ಒಟ್ಟಿನಲ್ಲಿ  ಮುಂದಿನ ದಿನಗಳಲ್ಲಿ ಮತಷ್ಟು ಭಾವನಾತ್ಮಕ ವಿಚಾರಗಳು ಮುನ್ನಲೆಗೆ ಬರುವುದರಲ್ಲಿ ಅಚ್ಚರಿಯಿಲ್ಲ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";