ಬಿಜೆಪಿ ಮತ್ತು ಆರ್​ಎಸ್​ಎಸ್ ದೇಶ ವಿಭಜನೆ ಮಾಡುತ್ತಿದೆ: ರಾಹುಲ್​ ಗಾಂಧಿ.

ಬಳ್ಳಾರಿ : ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶದ ವಿರುದ್ಧ ಕೆಲಸ ಮಾಡುತ್ತಿವೆ.ಅವರ ವಿಚಾರಧಾರೆ ದೇಶವನ್ನು ವಿಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಳ್ಳಾರಿಯಲ್ಲಿಂದು ಭಾರತ್ ಜೋಡೋ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿದ್ದೇವೆ. ಸುಮಾರು 3500 ಕಿ.ಮೀ. ನಡೆಯುವುದು ಸಾಮಾನ್ಯ ವಿಷಯವಲ್ಲ ಎಂದು ತಿಳಿದಿದ್ದೆ. ನಡಿಗೆ ಆರಂಭದ ಬಳಿಕ ದಿನಕಳೆದಂತೆ ಸುಲಭವಾಯಿತು. ಯಾವುದೋ ಒಂದು ಶಕ್ತಿ ನಮಗೆ ನಡೆಯಲು ಅವಕಾಶ ಕೊಡುತ್ತಿದೆ ಎಂದು ಹೇಳಿದರು.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ : ಈ ಯಾತ್ರೆಯನ್ನು ನಾವು ಯಾಕೆ ಪ್ರಾರಂಭ ಮಾಡಿದ್ದೇವೆ?. ಈ ಯಾತ್ರೆಗೆ ನ ಭಾರತ್ ಜೋಡೋ ಎಂದು ಹೆಸರು ಯಾಕೆ ಇಟ್ಟಿದ್ದೇವೆ ಎಂದರೆ, ವಿವಿಧ ಧರ್ಮದ, ವಿವಿಧ ಭಾಷೆಯ ಜನರು ನಮ್ಮ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.ಈ ನಡಿಗೆಯಲ್ಲಿ ಸಾಕಷ್ಟು ಯುವಕರನ್ನು ಭೇಟಿ ಮಾಡಿರುವೆ. ಯುವಕರಲ್ಲಿ ನೀವು ಭವಿಷ್ಯದಲ್ಲಿ ಏನ್ ಮಾಡ್ತೀರಾ ಎಂದು ಪ್ರಶ್ನಿಸಿದೆ. ಡಾಕ್ಟರ್, ಇಂಜಿನಿಯರ್, ಆಗುವುದಾಗಿ ಹೇಳುತ್ತಿದ್ದಾರೆ. ವಿದ್ಯಾಭ್ಯಾಸ ಮುಗಸಿದ ಬಳಿಕ ನಿಮಗೆ ಉದ್ಯೋಗ ಸಿಗುತ್ತಾ ಎಂದು ಕೇಳುವಾಗ ನೌಕರಿ ಸಿಗುವ ವಿಶ್ವಾಸವಿಲ್ಲ ಎಂದು ಯುವಕರು ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಯಾವುದೇ ಉದ್ಯೋಗ ನೀಡಿಲ್ಲ ಎಂದು ಟೀಕಿಸಿದರು.

ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ : ಕರ್ನಾಟಕದಲ್ಲಿ ಪಿಎಸ್ ಐ ಆಗಬೇಕು ಎಂದರೆ 80ಲಕ್ಷ ರೂಪಾಯಿ ಲಂಚ ಕೊಡಬೇಕು. ಕರ್ನಾಟಕದಲ್ಲಿ ನಿಮಗೆ ದುಡ್ಡು ಇದ್ರೆ ನೌಕರಿ ಪಡೆಯಬಹುದು. ಸಹಕಾರಿ ಸಂಘ, ಎಲ್ಲಾ ನೌಕರಿ ನೇಮಕದಲ್ಲಿ ಹಗರಣ. ಇದಕ್ಕಾಗಿ ಇಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಯಾತ್ರೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಮಾಡುತ್ತಿದ್ದೇವೆ. ಎಲ್ಲದರ ಬೆಲೆ ಗಗನಕ್ಕೇರಿದೆ. ಅದು ನಿಲ್ಲುತ್ತಿಲ್ಲ. ಮೋದಿಯವರು 400 ರೂ.ಗೆ ಗ್ಯಾಸ್ ಕೊಡುವುದಾಗಿ ಹೇಳುತ್ತಿದ್ದರು. ಆದರೆ ಅದೇ ಸಿಲಿಂಡರ್ ಬೆಲೆ ಈಗ 1100 ರೂ. ಆಗಿದೆ.ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ಮೋದಿ ಇದಕ್ಕೆ ಯಾಕೆ ಉತ್ತರ ನೀಡುತ್ತಿಲ್ಲ? ಎಂದು ರಾಹುಲ್ ಪ್ರಶ್ನಿಸಿದರು.

ಒಂದು ಕಡೆ ನಿರುದ್ಯೋಗ ಮತ್ತೊಂದೆಡೆ ಬೆಲೆ ಏರಿಕೆ : ಯಾತ್ರೆಯಲ್ಲಿ ನಾನು ರೈತರನ್ನು ಭೇಟಿ ಮಾಡಿರುವೆ. ಕೃಷಿ ಉತ್ಪನ್ನಗಳ ಬಗ್ಗೆ ಕೇಳಿದ್ದೇನೆ, ಖರ್ಚು ವೆಚ್ಚದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ರೈತರಿಗೆ ಸಹಾಯ ಮಾಡುವುದನ್ನು ಬಿಟ್ಟು ಕೃಷಿ ಉತ್ಪನ್ನಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಇಂತಹ ಸಮಸ್ಯೆಯನ್ನು ಇಡೀ ದೇಶಾದ್ಯಂತ ರೈತರು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಎಸ್ಸಿ ಎಸ್ಟಿ ಜನರ ದೌರ್ಜನ್ಯ ಹೆಚ್ಚಾಗಿದೆ : ಈ ಸರ್ಕಾರ ಬಂದ ಮೇಲೆ ಎಸ್ಸಿ ಎಸ್ಟಿ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಎಸ್ಟಿ ಎಸ್ಟಿ ಜನರಿಗೆ ಮೀಸಲಿಟ್ಟ ಹಣವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ನಾಗಮೋಹನ್ ದಾಸ್ ಕಮಿಟಿ ಮಾಡಿದ್ವಿ, ಇದನ್ನು ಬಿಜೆಪಿ ಮುಚ್ಚಿದೆ. ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371 ಕೊಡುವಾಗ ವಾಜಪೇಯಿ, ಅಡ್ವಾಣಿ ತಿರಸ್ಕಾರ ಮಾಡಿದರು. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಆರ್ಟಿಕಲ್ 371 ಜೆ ಕೊಟ್ಟಿದ್ದೇವೆ.ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಜೊತೆಗೆ ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿದೆ ಎಂದು ಹೇಳಿದರು.

ನಮ್ಮ ತಾಯಿ ಸೋನಿಯಾಗಾಂಧಿ ಬಳ್ಳಾರಿ ಕ್ಷೇತ್ರದಿಂದ ಗೆದ್ದಿದ್ದರು. ನಮ್ಮ ಅಜ್ಜಿ ಇಂದಿರಾಗಾಂಧಿ ಚಿಕ್ಕಮಂಗಳೂರಿನಿಂದ ಗೆದ್ದಿದ್ದರು. ನಮಗೆ ಬಳ್ಳಾರಿ ಹಾಗೂ ಕರ್ನಾಟಕದ ಜೊತೆ ಅಪರೂಪದ ಸಂಬಂಧ ಇದೆ ಎಂದು ಇದೇ ವೇಳೆ ರಾಹುಲ್ ಗಾಂಧಿ ಸ್ಮರಿಸಿದರು.

 

 

 

 

ಕೃಪೆ:ಈಟಿವಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";