ಭಕರೆಯವರ ಕಾದಂಬರಿ ‘ಬಿಸಿಲೂರಿನ ಬಂಡೆ’: ಸಿಕಾ ಅವರು ಬರೆದ ವಿಮರ್ಶೆ ಲೇಖನ.

ಉಮೇಶ ಗೌರಿ (ಯರಡಾಲ)
ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನವನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾದ ನೈಜ ಚಿತ್ರಣದ ಕಾದಂಬರಿ- “ಬಿಸಿಲೂರಿನ ಬಂಡೆ” ಲೇಖಕ ವಿಶ್ವನಾಥ ಭಕರೆ ಅವರ ಈ ಕಾದಂಬರಿಗೆ ಲೇಖಕಿ ಕಾವ್ಯಶ್ರೀ ಮಹಾಗಾಂವಕರ (ಸಿಕಾ) ಅವರು ಬರೆದ ವಿಮರ್ಶೆ ಲೇಖನ.

 

ಕಲ್ಯಾಣ ಕರ್ನಾಟಕದ ಕಾದಂಬರಿಕಾರ ವಿಶ್ವನಾಥ ಭಕರೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾದವರು. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ, ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯಕ ಚಟುವಟಿಕೆಗಳಲ್ಲಿ ಅಸಕ್ತಿ ಇಟ್ಟುಕೊಂಡು, ಕೆಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ‘ಬಿಸಿಲೂರಿನ ಬಂಡೆ’ ಕೃತಿಯನ್ನು ಹೊರ ತಂದಿದ್ದಾರೆ.

ಕಲ್ಯಾಣ ಕರ್ನಾಟಕದ ಕಾದಂಬರಿ ಸಾಹಿತ್ಯ ಸಮೃದ್ಧಿಯಾಗಿ ಕಂಡು ಬರದಿದ್ದರೂ, ಸಮಾಧಾನಕರವಾಗಿ ಇರುವುದನ್ನು ಗಮನಿಸಬಹುದು. ನಾಡೋಜ ಗೀತಾ ನಾಗಭೂಷಣ ಅವರು ಈ ಭಾಗದ ಬಹು ದೊಡ್ಡ ಪ್ರತಿಭೆ, ನಂತರದಲ್ಲಿ ಲಕ್ಷ್ಮಣ ಕೌಂಟೆಯವರು ಹೆಚ್ಚು ಹೆಚ್ಚು ಕಾದಂಬರಿಗಳನ್ನು ರಚಿಸುತ್ತಿದ್ದಾರೆ. ಶಾಂತರಸರು, ಸುಬ್ಬಣ್ಣ ಅಂಬೆಸಿಂಗಿ, ಯಶೋದಮ್ಮ ಸಿದ್ದಬಟ್ಟೆ, ಗವೀಶ ಹಿರೇಮಠ ಮುಂತಾದವರು ಇಂದು ಇಲ್ಲವಾದರೂ ಅವರ ಕಾದಂಬರಿಗಳಿವೆ. ಬಾಲಚಂದ್ರ ಜಯಶೆಟ್ಟಿ, ಪ್ರಭಾಕರ ಜೋಶಿ, ಸ್ವಾಮಿರಾವ ಕುಲಕರ್ಣಿ, ಜಯದೇವಿ ಗಾಯಕವಾಡ, ಸುನೀತಾ ಬಿರಾದಾರ, ಜ್ಯೋತಿ ಕುಲಕರ್ಣಿ, ಕಾವ್ಯಶ್ರೀ ಮಹಾಗಾಂವಕರ(ಸಿಕಾ) ಮುಂತಾದವರು ಕಾದಂಬರಿ ರಚಿಸಿ ಈ ಪ್ರಕಾರವನ್ನು ಹುಲುಸಾಗಿಸುವ ಪ್ರಯತ್ನದ ಹಾದಿಯಲ್ಲಿದ್ದಾರೆ.

ಪ್ರಸ್ತುತ ವಿಶ್ವನಾಥ ಭಕರೆಯವರ ಕಾದಂಬರಿ ‘ಬಿಸಿಲೂರಿನ ಬಂಡೆ’ ಈ ಭಾಗದ ಕಾದಂಬರಿಗಳಿಗೆ ಇನ್ನೊಂದು ಹೊಸ ಸೇರ್ಪಡೆ. ಇದೊಂದು ಜೀವನ ಚರಿತ್ರೆಯೂ ಹೌದು. ಕಾದಂಬರಿ ಶೈಲಿಯ ನಿರೂಪಣೆ ಇರುವುದರಿಂದ ಇದನ್ನು ಕಾದಂಬರಿ ಪ್ರಕಾರಕ್ಕೆ ಸೇರಿಸಬಹುದು. ಇದರ ಕಥಾವಸ್ತು ವ್ಯಕ್ತಿ ಕೇಂದ್ರಿತವಾಗಿದೆ. ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನವನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾದ ನೈಜ ಚಿತ್ರಣವಿದು.

ಕೃತಿಯ ಶೀರ್ಷಿಕೆ ‘ಬಿಸಿಲೂರಿನ ಬಂಡೆ’ ಮತ್ತು ಮುಖಪುಟದಲ್ಲಿ ಇರುವ ಮಲ್ಲಿಕಾರ್ಜುನ ಬಂಡೆಯವರ ಭಾವಚಿತ್ರ, ಇವುಗಳನ್ನು ನೋಡಿದ ಕೂಡಲೆ, ಓದುಗನಿಗೆ ಹಳೆಯ ನೆನಪು ಮರುಕಳಿಸುತ್ತದೆ. ಕೆಲವು ವರ್ಷಗಳ ಹಿಂದೆ ಕಲಬುರಗಿಯಲ್ಲಿ ನಡೆದು ಹೋದ ದಾರುಣ ಘಟನೆ ಹಾಗೂ ಆ ಕಹಿ ನೆನಪನ್ನು ಈ ಕೃತಿಯ ಓದು ಮತ್ತೆ ಮತ್ತೆ ಜ್ಞಾಪಿಸಿ ಕಾಡುತ್ತದೆ. ಮಲ್ಲಿಕಾರ್ಜುನ ಬಂಡೆಯವರು ಅತ್ಯಂತ ಪ್ರಾಮಾಣಿಕವಾಗಿ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ. ಅಂದು ಎಲ್ಲರ ಮನೆ ಮಾತಾಗಿ ಸಣ್ಣ ಮಕ್ಕಳಿಗೂ ತಿಳಿದ ವಿಷಯವಾಗಿತ್ತು.

ಈ ಕಾದಂಬರಿಯ ನಾಯಕ ಮಲ್ಲಿಕಾರ್ಜುನ ಬಂಡೆಯವರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾಗ ಶೂಟೌಟ್‌ನಲ್ಲಿ ಗಾಯಗೊಳ್ಳುತ್ತಾರೆ. ಅವರ ತಲೆ, ಹೊಟ್ಟೆ ಭಾಗಕ್ಕೆ ಗುಂಡು ತಗುಲಿ, ಅನೇಕ ದಿನಗಳವರೆಗೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುವ ಸಂದರ್ಭ ಎದುರಾಗುತ್ತದೆ. ಆಗ ಸಮಾಜದಲ್ಲಿ ಹುಟ್ಟಿಕೊಂಡ ತಲ್ಲಣ, ದುಃಖ, ಕನಿಕರ, ರೋಷಾವೇಶ, ಜನಸಾಮಾನ್ಯರ ಕೋಪ, ತಾಪ, ಸಿಟ್ಟು, ಸೆಡವು, ಯಾವುದನ್ನೂ ಮರೆಯಲು ಸಾಧ್ಯವಿಲ್ಲ. ಆಗ ಪ್ರತಿಯೊಬ್ಬರು ಪ್ರತಿನಿತ್ಯ ಬರುವ ದಿನಪತ್ರಿಕೆಗಾಗಿ ಕಾಯುತ್ತ ಕುಳಿತಿರುತ್ತಿದ್ದರು. ಮಲ್ಲಿಕಾರ್ಜುನ ಬಂಡೆಯವರ ಆರೋಗ್ಯ ಸ್ಥಿತಿ ಸುಧಾರಿಸಿತೆ? ಎನ್ನುವ ಆತಂಕದ ಕುತೂಹಲ. ಆ ಸುದ್ದಿಗಾಗಿ ತಹತಹಿಸುವುದು, ಆಸ್ಪತ್ರೆಯಲ್ಲಿ ನರಳುವ ಬಂಡೆಯವರಿಗಾಗಿ ಪರಿತಪಿಸುವುದು, ಪ್ರಾಮಾಣಿಕ ವ್ಯಕ್ತಿಯ ಪರವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು, ಎಲ್ಲಾ ಕಡೆ ಸಾಮಾನ್ಯವಾಗಿತ್ತು.

ಇಂತಹ ನಿಷ್ಠಾವಂತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರ ಇಡೀ ಜೀವನ ವೃತ್ತಾಂತವನ್ನು ವಿಶ್ವನಾಥ ಭಕರೆಯವರು ಒಂದೂ ಬಿಡದಂತೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಹುಟ್ಟು, ಬಾಲ್ಯ, ಊರು, ಮನೆತನದ ಹಿನ್ನೆಲೆ, ಬಡತನ, ಅಸಹಾಯಕತೆ, ಶಿಕ್ಷಣ, ವೃತ್ತಿ, ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ನ್ಯಾಯಕ್ಕಾಗಿ ಹೋರಾಟ, ಮುಂತಾದ ವಿಷಯಗಳನ್ನು ಕಲೆ ಹಾಕುತ್ತ ಬಂಡೆಯವರ ವ್ಯಕ್ತಿತ್ವವನ್ನು ಕಟ್ಟಿ ಕೊಟ್ಟಿದ್ದಾರೆ. ಇದಕ್ಕೆ ಕಾದಂಬರಿ ಸ್ವರೂಪ ಕೊಟ್ಟು, ಬಂಡೆಯವರ ಬದುಕಿನ ಅನೇಕ ಉಪಕತೆಗಳನ್ನು ಅಳವಡಿಸಿ ಸುಂದರವಾಗಿ ಸಂಯೋಜಿಸಿದ್ದಾರೆ.

ವಿಶ್ವನಾಥ ಭಕರೆಯವರು ಈ ಕಾದಂಬರಿಗಾಗಿ ಒಬ್ಬ ಸಂಶೋಧನಾ ವಿದ್ಯಾರ್ಥಿಯಂತೆ ಶ್ರಮಿಸಿದ್ದಾರೆ. ಲೇಖಕರು ವ್ಯಕ್ತಿನಿಷ್ಠ ಮತ್ತು ವಸ್ತುನಿಷ್ಠ ಹುಡುಕಾಟ ಅಧ್ಯಯನಶೀಲತೆ ಇಲ್ಲಿರುವುದನ್ನು ಗ್ರಹಿಸಬಹುದು. ಅನೇಕ ಮೂಲಗಳಿಂದ ವಿಷಯ ಸಂಗ್ರಹಿಸಿ, ಮಾಹಿತಿಗಳನ್ನು ಕಲೆ ಹಾಕಿ, ನಂತರ ಅದಕ್ಕೊಂದು ಸಾಹಿತ್ಯದ ರೂಪ ಕೊಟ್ಟು, ಕಾದಂಬರಿ ಪ್ರಕಾರಕ್ಕೆ ಅಳವಡಿಸಿದ್ದಾರೆ.

‘ಬಿಸಿಲೂರಿನ ಬಂಡೆ’ ಕಾದಂಬರಿಯ ಮೊದಲ ಅಧ್ಯಾಯ ಮಲ್ಲಿಕಾರ್ಜುನ ಬಂಡೆಯವರ ಅಂತಿಮ ಯಾತ್ರೆಯಿಂದ ಆರಂಭವಾಗುತ್ತದೆ. ಇದು ಕರುಣಾ ರಸ ಜಿನುಗಿಸುವಂತೆ ಮೂಡಿ ಬಂದಿದೆ. ಫ್ಯಾಶ್‌ಬ್ಯಾಕ್ ತಂತ್ರದ ನಿರೂಪಣೆಯಲ್ಲಿ ಕತೆ ಮುಂದುವರಿಯುತ್ತದೆ. ಆದರೆ ಮುಂದಿನ ಅಧ್ಯಾಯಗಳಲ್ಲಿ ಆರಂಭದ ಅಧ್ಯಾಯಗಳ ತೀವ್ರತೆ ಗೌಣವಾಗುವುದು ಓದಿನ ರಸ ಭಂಗಕ್ಕೆ ಕಾರಣವಾಗುತ್ತದೆ. ಒಂದು ರೀತಿ ಮಾಹಿತಿ ನೀಡುತ್ತಿರುವಂತೆ ಗೋಚರಿಸುವುದರಿಂದ ಓದುಗ ನಿರಾಶನಾಗಲು ಕಾರಣವಾಗುತ್ತದೆ.

ಹಿಂದೆ ಬಂಡೆಯವರ ಶೂಟೌಂಟ್ ಘಟನೆ ಜರುಗಿದಾಗ ಪ್ರತಿಯೊಬ್ಬ ಜನಸಾಮಾನ್ಯರ ಬಾಯಲ್ಲೂ ಅವರ ಹೆಸರು ಹರಿದಾಡಿತು. ಅನೇಕ ಅಪರಿಚಿತರ ಸಾಂತ್ವನಕ್ಕೆ ಪಾತ್ರರಾದರು. ಅವರು ಕೊನೆಯುಸಿರೆಳೆದ ನಂತರ ಅವರ ಪತ್ನಿ, ಮಕ್ಕಳ ಕುರಿತು ದಿನಪತ್ರಿಕೆಯಲ್ಲಿ ಸುದ್ದಿಯೋ ಸುದ್ದಿ. ದಿನಾಲು ಏನಾದರೊಂದು ಬೆಳವಣಿಗೆ ಇದ್ದೇ ಇರುತ್ತಿತ್ತು. ಹೀಗಾಗಿ ಕಲಬುರಗಿ ಸ್ಥಳೀಯರಿಗೆ ಎಲ್ಲಾ ವಿಷಯಗಳು ಮೊದಲೇ ತಿಳಿದಿತ್ತು. ಆದರೆ ಬಂಡೆಯವರು ವೃತ್ತಿಯಲ್ಲಿದ್ದಾಗ ಹೇಗೆ ಸೇವೆ ಸಲ್ಲಿಸಿದರು? ಯಾವ ಯಾವ ಸ್ಥಳಗಳಲ್ಲಿದ್ದರು? ಎಂತೆಂತಹ ಕೆಲಸಗಳನ್ನು ಮಾಡಿದರು? ಎಂಥ ಕಷ್ಟಗಳನ್ನಾದರೂ ಎದುರಿಸುವ ಅವರ ಆತ್ಮವಿಶ್ವಾಸ ಹೇಗಿತ್ತು? ಒಬ್ಬ ಪೋಲಿಸ್ ಅಧಿಕಾರಿಯ ಬದ್ಧತೆ ಹೇಗಿರಬೇಕು? ಬಂಡೆಯವರು ಹೇಗೆ ಮಾದರಿ ವ್ಯಕ್ತಿ ಎನಿಸಿಕೊಳ್ಳುತ್ತಾರೆ? ಇಂತಹ ಅನೇಕ ಪ್ರಶ್ನೆಗಳಿಗೆ ಬಿಸಿಲೂರಿನ ಬಂಡೆ ಕಾದಂಬರಿ ಉತ್ತರ ನೀಡುತ್ತದೆ.

ಒಬ್ಬ ಯುವ ಪೋಲಿಸ ಅಧಿಕಾರಿಯು ಹುತಾತ್ಮನಾದ ಬಗೆಯನ್ನು ವಿಶ್ವನಾಥ ಭಕರೆಯವರು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಯುವ ಜನತೆಗೆ ಪ್ರೇರಣಾದಾಯಕವಾದ ಈ ಕೃತಿ ಒಂದು ಕಾಲಮಾನದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಪೋಲಿಸ್ ಇಲಾಖೆಯ ಕುರಿತು ನಕಾರಾತ್ಮಕ ವಿಷಯಗಳು ಕೇಳಿ ಬರುವ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಬಂಡೆಯವರ ಜೀವನ ಚಿತ್ರಣ ಹೆಮ್ಮೆಯ ವಿಷಯ ಎನಿಸುವುದರಲ್ಲಿ ಸಂಶಯವೇ ಇಲ್ಲ.

ಈ ಕಾದಂಬರಿಯು ಒಂದು ಸುಂದರ ಕುಟುಂಬ ಹೇಗೆ ಛಿದ್ರ ಛಿದ್ರವಾಯಿತು? ಎನ್ನುವುದಕ್ಕೆ ಉದಾಹರಣೆಯಾಗುತ್ತದೆ. ಬಂಡೆ ಪತ್ನಿಯ ಅನಾರೋಗ್ಯ, ಬ್ರೇನ್ ಟ್ಯೂಮರ್‌ನಿಂದ ಬದುಕು ನರಕವಾಗುವ ಪರಿ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದ ಸನ್ನಿವೇಶ, ಅಸುನೀಗುವ ಮಲ್ಲಮ್ಮ, ಈ ಎಲ್ಲಾ ಸುದ್ದಿಗಳು ಕರುಳು ಕಿತ್ತು ಬರುವಂಥವು. ಬಂಡೆ ದಂಪತಿಗಳ ಮಕ್ಕಳಿಗುಂಟಾದ ಅನಾಥ ಪ್ರಜ್ಞೆಯನ್ನು ದೂರ ಮಾಡಿದವರು ಮರಡಿ ದಂಪತಿಗಳು. ಅವರೇ ಆಶ್ರಯ ನೀಡಿ, ಇಂದಿಗೂ ಸಲಹುತ್ತಿರುವುದು ಸಮಾಧಾನಕರ ಸಂಗತಿ. ಯಾವುದೇ ಘಟನೆ ಮನುಷ್ಯನ ಕೈ ಮೀರಿ ಹೋದಾಗ ಆರೋಪಿಸುವುದಾದರೂ ಯಾರನ್ನು? ಸಾವಿನೆದುರು ಅಸಹಾಯಕತೆ ಕಾಡಿದಾಗ ಇಂಥ ಪ್ರಶ್ನೆ ಹುಟ್ಟುವುದು ಸಹಜ. ಈ ದುರಂತಕ್ಕೆ ವಿಧಿಯಾಟ ಎಂದು ಜನ ಅಭಿಪ್ರಾಯ ಪಡುವುದೂ ಅಷ್ಟೇ ಸಹಜ.

ಕಾದಂಬರಿಕಾರ ವಿಶ್ವನಾಥ ಭಕರೆಯವರು ಒಬ್ಬ ವ್ಯಕ್ತಿಯ ಸುತ್ತ ಅಧ್ಯಯನ ಮಾಡಿ, ಅನೇಕರಿಂದ ವಿಷಯ ಸಂಗ್ರಹಿಸಿ, ಸುದೀರ್ಘವಾದ ಕೃತಿ ರಚಿಸಿ, ಓದುಗರಿಗೆ ನೀಡಿ, ಸಾಹಿತ್ಯ ಲೋಕದಲ್ಲಿ ದಕ್ಷ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ಸಮಾಜದಲ್ಲಿ ಅಳಿಸಲಾಗದ ನೆನಪಾಗಿ ‘ಬಿಸಿಲೂರಿನ ಬಂಡೆ’ ಕಾದಂಬರಿಯು ಉಳಿಯುತ್ತದೆ.

ಇಡೀ ಕಾದಂಬರಿಯುದ್ದಕ್ಕೂ ಶಿಷ್ಟ ಭಾಷೆಯ ಬಳಕೆಯೇ ಪ್ರಮುಖವಾಗಿದೆ. ಕೆಲವು ಕಡೆ ಮಾತ್ರ ಸಂವಾದದಲ್ಲಿ ಆಡುಭಾಷೆಯ ಪ್ರಯೋಗವಿರುವುದು ಕಂಡು ಬರುತ್ತದೆ. ಈ ಪ್ರದೇಶದಲ್ಲಿ ಹಿಂದಿ ಭಾಷೆ ಹೆಚ್ಚು ಪ್ರಚಲಿತವಾಗಿದೆ. ಆದ್ದರಿಂದ ಅಲ್ಲಲ್ಲಿ ಅನಿವಾರ್ಯವಾಗಿ ಹಿಂದಿ ಭಾಷೆಯ ಸಂವಾದ ಇರುವುದನ್ನು ಗಮನಿಸುತ್ತೇವೆ.

ಒಟ್ಟಾರೆ ಕಥಾ ಹಂದರ ಸಮಾಧಾನಕರವಾಗಿ ಮೂಡಿ ಬಂದಿದೆ. ಮಲ್ಲಿಕಾರ್ಜುನ ಬಂಡೆಯವರು ಕಥಾವಸ್ತುವಿಗೆ ಆಹಾರವಾಗಿರುವುದು, ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಒಬ್ಬ ದಕ್ಷ ಪೋಲಿಸ್ ಅಧಿಕಾರಿಯ ಪ್ರಾಮಾಣಿಕ ಬದುಕು ಮಾದರಿಯಾಗಿ, ಚಿರಸ್ಥಾಯಿಯಾಗಿ ಉಳಿಯುವಂತೆ ಭಕರೆಯವರ ಈ ಪ್ರಯತ್ನ ಕಾರಣವಾಗಿದೆ.

 

ಲೇಖಕರು:ಸಿಕಾ ಕಲಬುರ್ಗಿ
ಸಿಕಾ (ಕಾವ್ಯಶ್ರೀ ಮಹಾಗಾಂವಕರ)
1-18, ಮಹಾಗಾಂವಕರ ಮ್ಯಾನ್ಷನ್
ಕೋರ್ಟ್ ರಸ್ತೆ
ಕಲಬುರಗಿ – 585102
9343456704

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";