ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್ ಬೇಧಿಸಿದ ಬೆಳಗಾವಿ ಪೊಲೀಸರು

ಉಮೇಶ ಗೌರಿ (ಯರಡಾಲ)

ಬೆಳಗಾವಿ : ಟೆಲಿಗ್ರಾಂ ಬಳಸುವ ಮುನ್ನ ಎಲ್ಲರೂ ಎಚ್ಚರ ವಹಿಸುವುದು ಅಗತ್ಯ. ಸೈಬರ್​ ಖದೀಮರು ಬಣ್ಣ ಬಣ್ಣದ ಮಾತುಗಳಿಂದ ಜನರ ಬಳಿ ಹಣ ದೋಚಿ ವಂಚನೆ ಮಾಡುತ್ತಿದ್ದಾರೆ. ಇದೀಗ ಇನ್ವೆಸ್ಟಮೆಂಟ್ ಹೆಸರಿನಲ್ಲಿ ವಂಚಿಸೋ ಖರ್ತನಾಕ್ ಸೈಬರ್ ಗ್ಯಾಂಗ್​ವೊಂದು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ವಂಚಕರ ಜಾಲವನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊದಲು ಟೆಲಿಗ್ರಾಂ ಚಾಟಿಂಗ್​ ಮೂಲಕ ಸಾರ್ವಜನಿಕರನ್ನು ಖದೀಮರು ಸಂಪರ್ಕಿಸುತ್ತಾರೆ. ಆ ಬಳಿಕ ಒಳ್ಳೆಯ ಇನ್ವೆಸ್ಟಮೆಂಟ್ ಪ್ಲಾನ್ ಹೇಳಿ ನಂಬಿಕೆ ಗಳಿಸುತ್ತಾರೆ. ಮೊದಲು 3 ಇನ್ವೆಸ್ಟಮೆಂಟ್ ಮೇಲೆ ಒಳ್ಳೆಯ ರಿಟರ್ನ್ಸ್ ಕೊಡುತ್ತಾರೆ. ಆನಂತರ ಲಕ್ಷಾಂತರ ರೂ. ಇನ್ವೆಸ್ಟಮೆಂಟ್ ಮಾಡಲು ನಂಬಿಸಿ ಮೋಸ ಮಾಡುತ್ತಾರೆ. ಹೀಗೆ, ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾವಂತ ಮಹಿಳೆಯರಿಗೆ ಈ ಗ್ಯಾಂಗ್ ವಂಚಿಸಿತ್ತು. ರಾಯಬಾಗ ನಿವಾಸಿ ಡಾ. ಶಿಲ್ಪಾ ಶಿರಗಣ್ಣವರ, ನಿಪ್ಪಾಣಿ ನಿವಾಸಿ ಆಶಾ ಕೋಟಿವಾಲೆ ವಂಚನೆಗೆ ಒಳಗಾದವರು.

ಡಾ. ಶಿಲ್ಪಾ 27 ಲಕ್ಷದ 74 ಸಾವಿರ, ಆಶಾ 18 ಲಕ್ಷದ 41 ಸಾವಿರ ಕಳೆದುಕೊಂಡಿದ್ದರು. ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಇಬ್ಬರೂ ಕೂಡ ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಕೂಡಲೇ ಹಣ ಹಾಕಿದ್ದ ಅಕೌಂಟ್ ಅನ್ನು ಪೊಲೀಸರು ಪ್ರೀಜ್ ಮಾಡಿದ್ದರು. ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್​ನ 21 ವಿವಿಧ ಬ್ಯಾಂಕ್​ಗಳಲ್ಲಿನ ಖಾತೆಗಳನ್ನು ಪ್ರೀಜ್ ಮಾಡಿರುವುದಲ್ಲದೇ, ವಂಚಕರ ಬ್ಯಾಂಕ್ ಖಾತೆಯಲ್ಲಿದ್ದ 72 ಲಕ್ಷದ 50 ಸಾವಿರ ರೂ. ಹಣವನ್ನು ಸಹ ಪ್ರೀಜ್ ಮಾಡಲಾಗಿತ್ತು. ಇದೀಗ, ಬೆಳಗಾವಿ 3ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಸಂಬಂಧಿಸಿದವರ ಖಾತೆಗೆ ಹಣ ಮರು ಜಮಾ ಮಾಡುವಂತೆ ಆದೇಶ‌ ನೀಡಲಾಗಿದೆ.

“ಹೊರ ರಾಜ್ಯದಲ್ಲಿ ಇದ್ದುಕೊಂಡು ಈ ಸೈಬರ್ ಗ್ಯಾಂಗ್ ಕೆಲಸ ಮಾಡುತ್ತಿದ್ದು, ನಕಲಿ ಅಕೌಂಟ್ ಸೃಷ್ಟಿಸಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಖರ್ತನಾಕ್ ವಂಚಕರ ಗ್ಯಾಂಗ್ ಅರೆಸ್ಟ್ ಮಾಡಲು ವಿಶೇಷ ತಂಡ ರಚಿಸಲಾಗಿದೆ. 21 ಬ್ಯಾಂಕ್ ಖಾತೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆನ್​ಲೈನ್ ನಲ್ಲಿ ಹಣ ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್​ ಪಾಟೀಲ್ ಮಾಹಿತಿ ನೀಡಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";