ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಮಾಧ್ಯಮಗಳ 1ರಿಂದ 9ನೇ ತರಗತಿ ಶಾಲೆಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನದಿಂದ ಹೆಚ್ಚಾಗುತ್ತಿದೆ. ಅಲ್ಲದೇ ಕಿತ್ತೂರಿನ ಸೈನಿಕ ಶಾಲೆಯಲ್ಲಿ 80 ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿನ 10 ಸಿಬ್ಬಂದಿಗಳಿಗೆ ಸೋಂಕು ಹರಡಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ಡಿಸಿ ಮಹಾಂತೇಶ ಹಿರೇಮಠ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿ, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ವಿಸ್ತøತವಾಗಿ ಚರ್ಚೆ ನಡೆಸಿದರು. ಒಂದು ವಾರಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ 1ರಿಂದ 9ನೇ ತರಗತಿ ಶಾಲೆ ಬಂದ್ ಮಾಡುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿ ಜಿಲ್ಲಾಧಿಕಾರಿಗಳು ಮಹತ್ವದ ತೀರ್ಮಾನ ತೆಗೆದುಕೊಂಡರು.
ಸಭೆ ಮುಗಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿ ಮಹಾಂತೇಶ ಹಿರೇಮಠ ಅವರು ಕೊರೊನಾ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಜನವರಿ 11ರಿಂದ ಜನವರಿ 18ರವರೆಗೆ ವಸತಿ ಶಾಲೆಗಳನ್ನು ಒಳಗೊಂಡು ಬೆಳಗಾವಿ ಜಿಲ್ಲೆಯ ಎಲ್ಲಾ ಮಾಧ್ಯಮಗಳ 1ರಿಂದ 9ನೇ ತರಗತಿ ಶಾಲೆಗಳನ್ನು ಬಂದ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. 10, 11ನೇ ತರಗತಿಗಳು ಎಂದಿನಂತೆ ಇರಲಿವೆ ಎಂದರು. ಇನ್ನು ಡಿಎಚ್‍ಓ, ಡಿಡಿಪಿಐ, ಡಿಡಿಎಸ್‍ಓಗಳ ಜೊತೆಗೆ ಸಭೆ ಮಾಡಿ, ಸರ್ಕಾರಕ್ಕೆ ತಿಳಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ಇನ್ನು ಪೋಷಕರು ಸಾಕಷ್ಟು ಜಾಗರೂಕತೆಯಿಂದ ಇರಬೇಕು, ತಮ್ಮ ಮಕ್ಕಳಲ್ಲಿ ಏನಾದ್ರೂ ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಬೇಕು, ತುರ್ತು ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಹೀಗಾಗಿ ಯಾವ ಪಾಲಕರು, ಪೋಷಕರು ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.