ಚಂಪಾ ಹಾಗೂ ಬಸಲಿಂಗಯ್ಯಾ ಹಿರೇಮಠ ನಿಧನಕ್ಕೆ ಕಂಬನಿ ಮಿಡಿದ ಬೆಳಗಾವಿ ಜಿಲ್ಲಾ ಕಸಾಪ

ಬೆಳಗಾವಿ 11: ಚಂಪಾ ಹಾಗೂ ಬಸಲಿಂಗಯ್ಯಾ ಹಿರೇಮಠ ನಿಧನಕ್ಕೆ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸಂತಾಪ ವ್ಯಕ್ತಪಡಿಸಿ ಹಿರಿಯ ಸಾಹಿತಿಗಳನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಇಂದು ಬಡವಾಗಿದೆ ಎಂದು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಾತನಾಡಿದ ಅವರು

ಪ್ರೊ.ಚಂದ್ರಶೇಖರ ಪಾಟೀಲ ಅವರು ಕನ್ನಡದ ಹಿರಿಯ ಕವಿ, ನಾಟಕಕಾರ, ಪತ್ರಿಕಾ ಸಂಪಾದಕ ಹಾಗೂ ಕಸಾಪ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದರು. ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವ ಸಾಹಿತ್ಯದ ಆತ್ಮ, ಕನ್ನಡದ ಶಕ್ತಿ, ಪರಿಶುದ್ದ ಮನಸ್ಸಿನ ವ್ಯಕ್ತಿತ್ವವುಳ್ಳವರಾಗಿದ್ದರು. ಸಾಹಿತ್ಯ ಲೋಕದಲ್ಲಿ ‘ಚಂಪಾ’ ಎಂಬ ಹೆಸರಿನಿಂದಲೇ ಪ್ರಖ್ಯಾತರಾದವರು.

ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ ಮಾಧ್ಯಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.

ಮಂಗಲಾ ಮೆಟಗುಡ್ಡ ಮಾತನಾಡುತ್ತಿರುವುದು

ನಮ್ಮ ಜಿಲ್ಲೆಯ ಹಿರಿಯ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಅವರು ಕಂಚಿನ ಕಂಠದ ಜಾನಪದ ಗಾಯಕರಾಗಿದ್ದವರು. ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ ಹೀಗೆ ಸಾಕಷ್ಟು ನಾಟಕಗಳಿಗೆ ಹಾಗೂ ಜಾನಪದ ಕಲೆಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದವರು. ನಾಡಿನಾದ್ಯಂತ ಸಂಚರಿಸಿ ಹಾಗೂ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಗುರುತಿಸಿಕೊಂಡವರು. ಜಾನಪದ ಲೋಕ ಮತ್ತು ರಂಗಭೂಮಿ ಸಂಗೀತಕ್ಕೆ ಜೀವ ತುಂಬಿದವರು. ಇವರು ನಾಟಕ, ಚಲನಚಿತ್ರ, ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಕೇವಲ ಮೂರು ಗಂಟೆಯಲ್ಲಿ ಪೂರ್ಣಗೊಳಿಸಿ ಎಲ್ಲರ ಗಮನ ಸೆಳೆದವರು. ದುಬೈ, ಸಿಂಗಾಪುರ, ಅಮೇರಿಕ, ಲಂಡನ್‌ನಲ್ಲಿಯೂ ಕನ್ನಡ ಜಾನಪದ ಕಂಪು ಹರಡಿದ್ದಾರೆ. ಅವರ ಕಲಾ ಸೇವೆಗೆ 2005 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ಇಂಥಹ ಹಿರಿಯ ಜಾನಪದ ರಂಗಭೂಮಿ ಕಲಾವಿದರು ನಮ್ಮನ್ನಗಲಿದ್ದು ಇಡೀ ಕನ್ನಡ ನಾಡಿಗೆ ತುಂಲಾರದ ನಷ್ಟವುಂಟಾಗಿದೆ ಎಂದು ಮಂಗಲಾ ಮೆಟಗುಡ್ಡ ಸಂತಾಪ ವ್ಯಕ್ತಪಡಿಸಿದರು.

ಇಂಥಹ ಹಿರಿಯ ಸಾಹಿತಿಯನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಇಂದು ಬಡವಾಗಿದೆ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಕಂಬನಿ ಮಿಡಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ನುಡಿ ನಮನ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ಡಾ. ಸರಜೂ ಕಾಟ್ಕರ ಮಾತನಾಡಿ ಚಂಪಾ ಮತ್ತು ಬಸಲಿಂಗಯ್ಯಾ ಹಿರೇಮಠರವರ ಜೊತೆಗಿನ ತಮ್ಮ ಒಡನಾಟ ಸ್ಮರಿಸಿಕೊಂಡು ಚಂಪಾ ಎಂದರೆ ಬಿರುಗಾಳಿ ಇದ್ದಂತೆ ಈಗ ಬಿರುಗಾಳಿ ಶಾಂತವಾಗಿದೆ. ಕೇವಲ ನೈಸರ್ಗಿಕ ವರ್ಣನೆಗೆ ಸೀಮಿತವಾಗಿದ್ದ ಸಾಹಿತ್ಯ ಕ್ಷೇತ್ರವನ್ನು ಬದಲಿಸಿ ಸಮಾಜದಲ್ಲಿನ ಅಂಕುಡೊಂಕಗಳ ಸುಧಾರಣೆಗೆ, ದೀನದಲಿತ ಬಡ ವರ್ಗದ ಏಳ್ಗೆಗಾಗಿ ಬದಲಿಸಿದ ಕೀರ್ತಿ ಅವರಿಗೆ ಸಲ್ಲಬೇಕೆಂದರು.

ಕನ್ನಡ ನಾಡು ನುಡಿ ನೆಲದ ರಕ್ಷಣೆ ಸುಧಾರಣೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಎಂದು ಬಾವುಕರಾದರಲ್ಲದೇ ಗೋಕಾಕ ಚಳುವಳಿ, ಸಾಹಿತ್ಯಿಕ, ಸಾಂಸ್ಕೃತಿಕ ಲೋಕದಲ್ಲಿ ವೈಚಾರಿಕ ಬದಲಾವಣೆಗಾಗಿ ದಿಟ್ಟತನ ತೋರಿದ್ದ ಇಂತಹ ದಿಗ್ಗಜನ ಅಗಲಿಕೆ ನಿಜಕ್ಕೂ ಕನ್ನಡ ನಾಡಿಗೆ ಅಘಾತವನ್ನುಂಟು ಮಾಡಿದೆ ಎಂದರು.

ಜಾನಪದ ಲೋಕದ ಮಿನುಗುವ ನಕ್ಷತ್ರವಾಗಿದ್ದ ಮಿತ್ರ ಬಸಲಿಂಗಯ್ಯ ಹಿರೇಮಠ ಸಹ ಕನ್ನಡ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ಅವರಿಗೆ ಸಲ್ಲಬೇಕಾದದ್ದು ಈ ಇಬ್ಬರೂ ಮಹಾನ ವ್ಯಕ್ತಿಗಳು 24 ಘಂಟೆಗಳಲ್ಲಿ ನಮ್ಮನ್ನಗಲಿದ್ದು ನಿಜಕ್ಕೂ ನಾಡಿನ ದುರ್ದೈವ ಎಂದರಲ್ಲದೇ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ದಿ ಪ್ರಾಧಿಕಾರಿದ ರಾಜ್ಯಮಟ್ಟದ ಮಾಜಿ ಸದಸ್ಯ ಮೋಹನ ಬಸನಗೌಡ ಪಾಟೀಲ, ಹಿರಿಯ ಪತ್ರಕರ್ತ ಮುರಗೇಶ ಶಿವಪೂಜಿ, ಸಾಂಖಿಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಬಿ.ಬನಶಂಕರಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ, ನ್ಯಾಯವಾದಿ ಸುನೀಲ ಸಾಣಿಕೊಪ್ಪ, ಆಶುಕವಿ ಸಿ.ಕೆ ಕೋಳಿವಾಡ ಮಾತನಾಡಿ ಚಂಪಾ ಮತ್ತು ಬಸಲಿಂಗಯ್ಯಾ ಹಿರೇಮಠ ಇಬ್ಬರೂ ಕನ್ನಡದ ಅಪ್ಪಟ ರತ್ನಗಳು. ಇವರಿಬ್ಬರ ಅಗಲಿಕೆಯಿಂದ ಕನ್ನಡ ನಾಡು ಬಡವಾಗಿದೆ. ಇಂತಹ ಮಹಾನ ವ್ಯಕ್ತಿಗಳು ಮತ್ತೇ ಕನ್ನಡ ನಾಡಿನಲ್ಲಿ ಹುಟ್ಟಿ ಬರಲಿ ಎಂದರಲ್ಲದೇ ನಾಡು ನುಡಿ ಸಾಹಿತ್ಯ ಜಾನಪದ ಲೋಕಕ್ಕೆ ಅವರುಗಳು ನೀಡಿದ ಕೊಡುಗೆ ಸಾಧನೆ ಈ ನಾಡು ಎಂದು ಮರೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅಗಲಿದ ಇಬ್ಬರ ಆತ್ಮಕ್ಕೆ ಶಾಂತಿ ಸದ್ಗತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸುವುದರೊಂದಿಗೆ ನುಡಿ ನಮನ ಸಲ್ಲಿಸಲಾಯಿತು.

ನಿವೇದಿತಾ ಮಾಸ್ತಿಹೊಳಿಮಠ, ರಕ್ಷಾ ದೇಗಿನಹಾಳ ಮತ್ತಿತರರು ವಚನ ಗಾಯನದೊಂದಿಗೆ ಪುಷ್ಪ ಸಮರ್ಪಿಸಿ ಅಗಲಿದ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದರು.

ರತ್ನಪ್ರಭಾ ಬೆಲ್ಲದ, ಜಯಶೀಲಾ ಬ್ಯಾಕೋಡ, ಕೀರ್ತಿ ಶಿವಪೂಜಿಮಠ, ಪ್ರತಿಭಾ ಕಳ್ಳಿಮಠ, ಸಿ.ಎಂ ಬೂದಿಹಾಳ, ಬಿ.ಬಿ.ಮಠಪತಿ, ಶಿವಾನಂದ ತಲ್ಲೂರ ಸೇರಿದಂತೆ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು. ಎಂ.ವೈ.ಮೆಣಸಿನಕಾಯಿ ಸ್ವಾಗತಿಸಿದರು. ಆಕಾಶ್ ಥಬಾಜ ವಂದಿಸಿದರು. ಕಿರಣ ಸಾವಂತನವರ ಕಾರ್ಯುಕ್ರಮ ನಿರ್ವಹಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";