ಬೆಂಗಳೂರು (ಅ.17):ಪ್ರಾಥಮಿಕ ಶಾಲೆ ಪ್ರಾರಂಭಿಸುವ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲು ಸಮಯ ಕೋರಿದ್ದು, ಎರಡು ಮೂರು ದಿನದಲ್ಲಿ ಅವರು ಸಮಯ ನೀಡುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಶಾಲಾ ಆರಂಭ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಚರ್ಚೆಗೆ ಸಮಯ ನಿಗದಿಯಾದ ಕೂಡಲೇ ತಾಂತ್ರಿಕ ಸಮಿತಿಯ ಅಭಿಪ್ರಾಯ ಕೊಡ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆ ಆರಂಭವಾದರೂ ಯಾವುದೇ ಪಠ್ಯಕ್ರಮ ಕಡಿಮೆ ಮಾಡುವ ಯಾವುದೇ ಯೋಚನೆ ಇಲ್ಲ. ಶನಿವಾರ ಪೂರ್ಣ ದಿನ ಹಾಗೂ ಭಾನುವಾರವೂ ತರಗತಿ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಭೌತಿಕವಾಗಿ 1ರಿಂದ 5 ನೇ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಎರಡ್ಮೂರು ದಿನದಲ್ಲಿ ಶಾಲೆ ಆರಂಭ ಮಾಡುವ ಉದ್ದೇಶವಿದೆ. ಬಿಇಓಗಳು , ಡಿಡಿಪಿಐಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೆ ತಾಂತ್ರಿಕ ಸಲಹಾ ಸಮಿತಿ ನೀಡುವ ತೀರ್ಮಾನದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
ಒಂದು ವೇಳೆ ಹಂತ ಹಂತವಾಗಿ ಶಾಲೆ ಆರಂಭಿಸಿ ಎಂದರೆ, ಮೊದಲು 3 ರಿಂದ 5ನೇ ತರಗತಿ, ನಂತರ 1 ರಿಂದ 3 ನೇ ತರಗತಿ ಆರಂಭಿಸುವ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.