ಶಿವಮೊಗ್ಗ: ನಿನ್ನೆ ಭಾನುವಾರ ರಾತ್ರಿ 9.30 ರ ಸಮಯ.ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆ ಬೆಚ್ಚಿ ಬಿದ್ದಿತ್ತು. ಯಾಕ ಅಂದ್ರೆ ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಕೂಡಲೇ ಯುವಕನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೇ ಹರ್ಷ ಜೀವಬಿಟ್ಟಿದ್ದಾನೆ.
ಸಿಗೇಹಟ್ಟಿ ಬಡಾವಣೆ ನಿವಾಸಿಯಾಗಿದ್ದ ಹರ್ಷ, ಐದು ವರ್ಷಗಳಿಂದ ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದ. ಈ ಹಿಂದೆ ಎರಡು ಬಾರಿ ಈತನ ಮೇಲೆ ಅಟ್ಯಾಕ್ ನಡೆದಿತ್ತು. ಆದ್ರೆ, ನಿನ್ನೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಹರ್ಷನ ಮೇಲೆ ಡೆಡ್ಲಿ ದಾಳಿ ಮಾಡಿದ್ದಾರೆ. ನೋಡ ನೋಡ್ತಿದ್ದಂತೆ ಮಾರಕಾಸ್ತ್ರ ಬೀಸಿ ಎಸ್ಕೇಪ್ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸೀಗೆಹಟ್ಟಿ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಜಮಾಯಿಸಿದ್ರು. ರವಿವರ್ಮ ಬೀದಿ, ಕಲರ್ ಪೇಟೆ, ಶಾಮರಾವ್ ಬೀದಿ ಸೀಗೆಹಟ್ಟಿ ಸೇರಿ ವಿವಿಧ ಬಡಾವಣೆಯಲ್ಲಿ 2 ಉದ್ರಿಕ್ತ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆಯಿತು. ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.
ಇನ್ನು, ಬಜರಂಗದಳದ ಕಾರ್ಯಕರ್ತನ ಕೊಲೆ ಸುದ್ದಿ ಮಲೆನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತು. ಕೂಡಲೇ ಸ್ಥಳಕ್ಕೆ ಬಂದ ಎಸ್ಪಿ ಲಕ್ಷ್ಮಿಪ್ರಸಾದ್ ಮತ್ತು ಡಿಸಿ ಡಾ. ಸೆಲ್ವಮಣಿ ಪರಿಶೀಲನೆ ನಡೆಸಿದ್ರು.. ಸೂಕ್ಷ್ಮ ಪ್ರದೇಶಗಳಲ್ಲಿ ರೌಂಡ್ಸ್ ಹಾಕಿದ್ರು.ಮುಂಜಾಗ್ರತಾ ಕ್ರಮವಾಗಿ ಇಂದು ಶಿವಮೊಗ್ಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶಿಸಿದ್ರು. ಇದೇ ವೇಳೆ, ಮಾತಾಡಿದ ಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ ಅಂತಾ ಮನವಿ ಮಾಡಿದ್ರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅಲರ್ಟ್ ಆದ್ರು. ಉದ್ವಿಗ್ನಗೊಂಡ ಏರಿಯಾಗಳಲ್ಲಿ ರೌಂಡ್ಸ್ ಹಾಕಿದ್ರು. ಮತ್ತೊಂದ್ಕಡೆ, ಹಿಂದೂಕಾರ್ಯಕರ್ತನ ಕೊಲೆ ಸ್ಥಳೀಯರನ್ನ ಬಡಿದೆಬ್ಬಿಸಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಅಂತಾ ಆಗ್ರಹಿಸಿದ್ರು. ಒಟ್ನಲ್ಲಿ, ಮೊದಲೇ ಹಿಜಾಬ್ ವಿವಾದದ ಮೂಲಕ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಈ ನಡುವೆ ಭಜರಂಗದಳ ಕಾರ್ಯಕರ್ತನ ಕಗ್ಗೊಲೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.