ಬಿಜೆಪಿ ಹೈಕಮಾಂಡ್‌ಗೆ ಬಿಸಿ ತುಪ್ಪವಾದ ಅಥಣಿ ಟಿಕೆಟ್‌ ಫೈಟ್ 

ಉಮೇಶ ಗೌರಿ (ಯರಡಾಲ)

ಬೆಳಗಾವಿ:  ಬಿಜೆಪಿ ಹೈಕಮಾಂಡ್‌ಗೆ ಬಿಸಿ ತುಪ್ಪವಾದ ಅಥಣಿ ಟಿಕೆಟ್‌ ಫೈಟ್ ಬೆಳಗಾವಿಯ 18 ಕ್ಷೇತ್ರಗಳ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ನಾಯಕರಿಗೆ ನೂರೆಂಟು ಸವಾಲು ಎದುರಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಪ್ರತಿಷ್ಠೆಯ ಗುದ್ದಾಟ ನಡೆಯುತ್ತಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ನಡುವೆ ಫೈಟ್‌ ಜೋರಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಲಕ್ಷ್ಮಣ ಸವದಿ ಹಠಕ್ಕೆ ಬಿದ್ದಿದ್ದಾರೆ. ಇದು ಬಿಜೆಪಿ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದೆ. ನಾಯಕರಲ್ಲಿ ಭುಗಿಲೆದ್ದ ಭಿನ್ನಮತದ ಹೋರಾಟ ಇನ್ನಷ್ಟು ತಾರಕಕ್ಕೇರುವ ಭೀತಿ ಕೂಡಾ ಎದುರಾಗಿದ್ದು, ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಆತಂಕ ಕೂಡ ಬಿಜೆಪಿ ಗೆ ಎದುರಾಗಿದೆ. ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಬಿಜೆಪಿಗೆ ಅಥಣಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲಾಗಿದೆ.

ಈ ಬಾರಿಯ ಚುನಾವಣೆಯೂ ಲಕ್ಷ್ಮಣ ಸವದಿ ಅವರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದರೆ, ರಮೇಶ ಜಾರಕಿಹೊಳಿ ಅವರಿಗೆ ಪ್ರತಿಷ್ಠೆ ಎದುರಾಗಿದೆ. ತಮ್ಮ ಆಪ್ತ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್‌ ನೀಡಲೇಬೇಕು, ಒಂದು ವೇಳೆ ಟಿಕೆಟ್‌ ನೀಡದಿದ್ದರೆ ನಾನು ಕೂಡ ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ರಮೇಶ ಪಕ್ಷದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ರಮೇಶ ವಿರುದ್ಧ ತೊಡೆ ತಟ್ಟಿನಿಂತಿರುವ ಸವದಿ ಅವರು ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆ ಸವದಿ ಅವರ ಮುಂದಿದೆ. ಹೀಗಾಗಿ ಹಿಂಬಾಗಿಲ ಬದಲು ಜನರಿಂದಲೇ ನೇರವಾಗಿ ಆಯ್ಕೆಯಾಗಲು ಅವರು ಬಯಸಿದ್ದಾರೆ. ಅಲ್ಲದೇ, ಅಥಣಿಯಲ್ಲಿ ತಮ್ಮ ಬೆಂಬಲಿಗರ ಜೊತೆ ಸಭೆಯನ್ನೂ ನಡೆಸಿದ್ದು, ತಮ್ಮದೆಯಾದ ಶಕ್ತಿಯನ್ನು ತೋರಿಸುವ ಮೂಲಕ ಬಿಜೆಪಿ ವರಿಷ್ಠರಿಗೂ ಪರೋಕ್ಷ ಸಂದೇಶವನ್ನು ಕೂಡ ರವಾನಿಸಿದ್ದಾರೆ.

ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಮೇಲಾಗಿದೆ. ಹಾಗಾಗಿ, ಸವದಿಗೆ ರಾಜಕೀಯ ಭವಿಷ್ಯ ಡೋಲಾಯಮಾನವಾಗುತ್ತದೆ. ಕಳೆದ ಬಾರಿ ಸೋತವರನ್ನೇ ಒಂದು ಉಪಚುನಾವಣೆಯಲ್ಲಿ ಗೆಲ್ಲಿಸಿರುವೆ. ಈಗ ಮತ್ತೆ ಅವರ ಮುಖವನ್ನು ಮುಂದು ಮಾಡಿಕೊಂಡು ಮತದಾರರ ಬಳಿ ಹೋಗಿ ಮತಕ್ಕಾಗಿ ಕೈಒಡ್ಡಬೇಕಲ್ಲ ಎಂಬ ನೋವು ಕಾಡುತ್ತಿದೆ. ಮಾತ್ರವಲ್ಲ, ಸವದಿ ಅವರ ಮುಂದಿನ ರಾಜಕೀಯ ಭವಿಷ್ಯ ಕೂಡ ಈ ಚುನಾವಣೆ ನಿರ್ಧರಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ನಿಟ್ಟಿನಲ್ಲಿ ಹೈಕಮಾಂಡ್‌ವರೆಗೂ ತಮ್ಮ ಲಿಂಕ್‌ಗಳನ್ನು ಬಳಸಿಕೊಂಡಿರುವ ಸವದಿ ಅವರು ಅಥಣಿ ಟಿಕೆಟ್‌ ತಮಗೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ನನ್ನ ವಿಧಾನ ಪರಿಷತ್‌ ಸದಸ್ಯತ್ವದ ಅವಧಿ ಇನ್ನೂ ಐದು ವರ್ಷ ಇದೆ. ಹಾಗಾಗಿ ಮಹೇಶ ಕುಮಟಳ್ಳಿ ಅವರನ್ನು ಎಂಎಲ್‌ಸಿ ಮಾಡಿ, ನನಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಥಣಿ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂಬ ಹೊಸ ಸೂತ್ರವನ್ನು ವರಿಷ್ಠರ ಮುಂದೆ ಅವರಿಟ್ಟಿದ್ದಾರೆ. ಮಹೇಶ ಕುಮಟಳ್ಳಿ ಮಾತ್ರ ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಕಾರ್ಯಕರ್ತನಂತೆ ದುಡಿಯುತ್ತೇನೆ. ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುವುದಾಗಿ ಹೇಳುತ್ತಾರೆ.

ಆದರೆ ಸವದಿ ಸೂತ್ರಕ್ಕೆ ರಮೇಶ ಜಾರಕಿಹೊಳಿ ಸುತಾರಾಂ ಒಪ್ಪುತ್ತಿಲ್ಲ. ಮಹೇಶ ಅವರಿಗೆ ಪಕ್ಷ ಟಿಕೆಟ್‌ ನೀಡಲೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಪ್ರಭಾವಿ ನಾಯಕರಿಬ್ಬರ ಭಿನ್ನಾಪ್ರಾಯ ಈಗ ಮತ್ತಷ್ಟು ತಾರಕಕ್ಕೇರಿದೆ. ಹೀಗಾಗಿ ಅಥಣಿಯಲ್ಲಿ ಬಿಜೆಪಿ ಬಂಡಾಯ ವಾಸನೆ ಅರಿತಿರುವ ವರಿಷ್ಠರು ಅಳೆದು ತೂಗಿ ಒಂದು ಸೂತ್ರದ ಆಧಾರದ ಮೇಲಿಂದ ಟಿಕೆಟ್‌ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹಸ್ತಕ್ಷೇಪದಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ, ಹೇಗಾದರೂ ಸರಿ ಟಿಕೆಟ್‌ ದಕ್ಕಿಸಿಕೊಳ್ಳುತ್ತೇನೆ ಎಂದು ಲಕ್ಷ್ಮಣ ಸವದಿ ಪಣ ತೊಟ್ಟಿದ್ದಾರೆ. ಹಾಗೆ ನೋಡಿದರೆ ರಮೇಶ ಜಾರಕಿಹೊಳಿ ಮತ್ತು ಸವದಿ ರಾಜಕೀಯ ಎದುರಾಳಿಗಳು. ಈ ಹಿಂದೆ 2018ರ ಚುನಾವಣೆಯಲ್ಲಿ ಸವದಿ ವಿರುದ್ಧ ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಗೆಲ್ಲುವಲ್ಲಿ ರಮೇಶ ಜಾರಕಿಹೊಳಿ ಪಾತ್ರ ಪ್ರಮುಖವಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019ರಲ್ಲಿ ಆಪರೇಷನ್‌ ಕಮಲಕ್ಕೊಳಗಾಗಿ ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಇದೆ ಮಹೇಶ ಕುಮಟಳ್ಳಿ ಮರು ಆಯ್ಕೆಯಾದರು. ಇದರಲ್ಲಿ ಸವದಿ ಪಾತ್ರ ಕೂಡ ಇತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

 

Share This Article
";