ಬೆಂಗಳೂರು :ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ, ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ.ಟಿಕೆಟ್‌ಗೆ ಸಂಬಂಧಿಸಿದಂತೆ ಬೆಳಗಾವಿ ಪೊಲಿಟಿಕ್ಸ್ ಬಿಜೆಪಿಗೆ ಬಿಸಿತುಪ್ಪವಾಗಿದೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ – ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕತ್ವದ ವಿರುದ್ಧ ತೊಡೆ ತಟ್ಟಿದ್ದಾರೆ.
ನಿನ್ನೆ ನಡೆದ ಬಿಜೆಪಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಈ ಬೆಳವಣಿಗೆ ಬಿಜೆಪಿಯಲ್ಲೀಗ ತಲ್ಲಣವನ್ನೇ ಸೃಷ್ಟಿಸಿದೆ. ಅಥಣಿ ಕ್ಷೇತ್ರದಿಂದ ಮಹೇಶ್ ಕಮಠಳ್ಳಿ ಹಾಗೂ ಕಾಗವಾಡದಿಂದ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಕೇಳಿದ್ದಾರೆ.
ಮೂಲಗಳ ಪ್ರಕಾರ ಅಥಣಿಯಿಂದ ಮಹೇಶ್ ಕುಮಠಳ್ಳಿ ಮತ್ತು ಕಾಗವಾಡದಿಂದ ಶ್ರೀಮಂತ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ರಮೇಶ್ ಒತ್ತಾಯಿಸಿದ್ದಾರೆ. ಈ ಇಬ್ಬರೂ ಶಾಸಕರು 2019ರಲ್ಲಿ ರಮೇಶ್ ಜೊತೆಗೂಡಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಅಥಣಿ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಅಲ್ಲಿಂದ ಮತ್ತೆ ಕುಮಠಳ್ಳಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೆಚ್ಚು ಒಲವು ತೋರಿಲ್ಲ ಎನ್ನಲಾಗಿದೆ. ಶ್ರೀಮಂತ ಪಾಟೀಲರನ್ನು ಕಾಗವಾಡದಿಂದ ಪುನರಾವರ್ತನೆ ಮಾಡಲು ಪಕ್ಷವೂ ಬಯಸುತ್ತಿಲ್ಲವೆಂದು ಮೂಲಗಳು ತಿಳಿಸಿವೆ.ಲಕ್ಷ್ಮಣ ಸವದಿ ಅಥಣಿ ಟಿಕೆಟ್‌ಗೆ ಪಟ್ಟು ಹಿಡದಿದ್ದರಿಂದ ಅವರ ಆಪ್ತ ವಲಯದಲ್ಲಿ ಗುರುತ್ತಿಸಿಕೊಂಡ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಬದಲಾಗಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಮ್ಮ ಆಪ್ತರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ರಮೇಶ್ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೇಡಿಕೆಗಳು ಪಕ್ಷದ ನಾಯಕತ್ವಕ್ಕೆ ಒಪ್ಪಿಗೆ ಆಗಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಬಿಗಿ ಪಟ್ಟು ಹಿಡದಿದ್ದು ಅವರ ಮುಂದಿನ ನಿರ್ಧಾರ ಎನು ಎನ್ನುವುದು ಬಿಜೆಪಿ ವಲಯದಲ್ಲಿ ಕೂತಹಲ ಮೂಡಿಸಿದೆ.
ಒಂದು ವೇಳೆ ಕುಮಟಳ್ಳಿಗೆ ಟಿಕೆಟ್ ನೀಡದಿದ್ರೆ, ತಾನೂ ಚುನಾವಣೆಗೆ ಸ್ಪರ್ಧಿಸಲ್ಲ ಅಂತಾ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡ್ತಿದ್ದಾರೆ. ಹೀಗಾಗಿ ಕಮಲ ಮುಖಂಡರ ಮುನಿಸಿಗೆ ಮದ್ದು ಹಾಕೋ ಕೆಲಸ ಮಾಡಲಾಗ್ತಿದೆ.
ಬಿಜೆಪಿಯ ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್ ಆಗಿದೆ. ಬಿಜೆಪಿಯ ಅತೃಪ್ತ ನಾಯಕರೆಲ್ಲಾ ಒಂದೇ ಕಡೆ ಸೇರಿದ್ದಾರೆ. ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಸೀಕ್ರೆಟ್ ಮೀಟಿಂಗ್ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.