ಬೆಳಗಾವಿ:ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗಿದೆ ಎಂಬ ಸಂಕೇತವನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ನೀಡಿದ್ದಾರೆ.
ಭಾನುವಾರದಂದು ಬೆಳಗಾವಿಯ ಸರ್ಕೀಟ್ ಹೌಸ್ನಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಅತುಲನೀಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆ ಪಕ್ಷದ ಶಕ್ತಿಸಂವರ್ಧನೆಗೆ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಜನರು ಕೂಡ ಬಿಜೆಪಿಯೆಡೆ ಒಲವು ತೋರುತ್ತಿದ್ದು, ಸಹಜವಾಗಿಯೇ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ.
ಮುಂದಿನ ಚುನಾವಣೆಯ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂಬ ಸಂಕೇತವನ್ನು ಕೂಡ ಅವರು ನೀಡಿದರು. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರಮೇಶ ಜಾರಕಿಹೊಳಿ ಅವರ ವರ್ಚಸ್ಸಿದೆ. ಚುನಾವಣೆ ಬಳಿಕ ಬಿಜೆಪಿಯನ್ನು ಗಟ್ಟಿಗೊಳಿಸಲು ಅವರ ಯೋಗದಾನ ಮಹತ್ತರವಾಗಿದೆ ಎಂದರು.
ಅರುಣ್ ಸಿಂಗ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿ, ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರಿದ್ದಾರೆ. ಸಾಮಾನ್ಯವಾಗಿ ಎಲ್ಲರೊಂದಿಗೆ ನಮ್ಮ ಚರ್ಚೆ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು, ಕಾಂಗ್ರೆಸ್ ಸೋಲಿಸಲು ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿದ್ದರು.
ಬಿಜೆಪಿ ನಾಯಕರ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ರನ್ನು ಮಂತ್ರಿ ಮಾಡಿಲ್ಲ ಎಂದು ಹೀಗೆ ಮಾಡುತ್ತಿದ್ದಾರೆ. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡಬೇಕು. ಪಕ್ಷದ ಹಿರಿಯ ನಾಯಕರನ್ನು ಗೌರವಿಸಬೇಕು. ಯತ್ನಾಳ್ ರ ಇಂಥ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದರು.