ಚುನಾವಣಾ ಕರ್ತವ್ಯಕ್ಕೆ ಹಾಜರಾಗದಿದ್ದರೇ ಅರೆಸ್ಟ್! ನೌಕರರೇ ಹುಷಾರ್.

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಕುಂಟು ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ನುಣಿಚಿಕೊಂಡರೆ ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಮನೆಗೆ ಬಂದು ಅರೆಸ್ಟ್​ ಮಾಡಿ, ಕರೆದೊಯ್ಯುತ್ತಾರೆ! ಸರ್ಕಾರಿ ನೌಕರರೇ ಹುಷಾರ್​!

ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸುವುದಕ್ಕೆ ಅಗತ್ಯ ಸಿಬ್ಬಂದಿಯೊಂದಿಗೆ ಸನ್ನದ್ಧವಾಗಿರುವ ಚುನಾವಣಾ ಆಯೋಗ ಇಂಥದ್ದೊಂದು ಖಡಕ್​ ಸಂದೇಶ ರವಾನಿಸಿದೆ.

ಸುಳ್ಳು ಹೇಳಿ ಚುನಾವಣೆ ಕರ್ತವ್ಯ ತಪ್ಪಿಸಿಕೊಳ್ಳುವಂತಿಲ್ಲ. ಚುನಾವಣೆಗೆ ಡ್ಯೂಟಿ ಹಾಕಿದರೂ ಹಾಜರಾಗದಿದ್ದರೆ ಅಂತಹವರ ಮೇಲೆ ಎಫ್​ಐಆರ್​ ದಾಖಲಿಸಿ, ಅರೆಸ್ಟ್​ ಮಾಡಿ ಕರ್ತವ್ಯಕ್ಕೆ ಹಾಜರುಪಡಿಸುವ ನಿಯಮವಿದೆ. ಈ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆಯೋಗ ಈಗಾಗಲೆ ಸೂಚಿಸಿದೆ.

ಹೆರಿಗೆ ಹಂತದಲ್ಲಿರುವ ಗರ್ಭಿಣಿಯರು, 3 ಅಥವಾ 4 ತಿಂಗಳು ಅವಧಿಯ ನಿವೃತ್ತಿ ಅಂಚಿನಲ್ಲಿರುವವರು ಹಾಗೂ ಗಂಭೀರವಾದ ಆರೋಗ್ಯ ಸಮಸ್ಯೆಗಳಿದ್ದವರಿಗೆ ಮಾತ್ರ ಚುನಾವಣಾ ಕರ್ತವ್ಯದಿಂದ ರಿಯಾಯತಿ ಇದೆ. ಇನ್ನುಳಿದವರಿಗೆ ರಿಯಾಯತಿ ಅನ್ವಯಿಸುವುದಿಲ್ಲ. ಮೇಲಧಿಕಾರಿ ಹಾಗೂ ಪ್ರಭಾವಿಗಳ ಮೂಲಕ ಹೇಳಿಸಿ, ಚುನಾವಣೆ ಕರ್ತವ್ಯದಿಂದ ದೂರ ಉಳಿಯುವುದಕ್ಕೆ ಪ್ರಯತ್ನಿಸಿದರೆ ಅಂತಹವರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಚುನಾವಣಾಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

Share This Article
";