ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವತಂತ್ರ ಭಾರತದಲ್ಲಿ ನಾವು ನಿಜವಾಗಲೂ ಇದ್ದೇವಾ..?

ಉಮೇಶ ಗೌರಿ (ಯರಡಾಲ)

ಲೇಖಕರು:ಉಮೇಶ ಗೌರಿ (ಯರಡಾಲ)

ಸ್ವಾತಂತ್ರ್ಯ ದಿನಾಚರಣೆ.. ನಮಗೆಲ್ಲರಿಗೂ ಹೆಮ್ಮೆಯ ದಿನ. ಬ್ರಿಟೀಷರ ಆಳ್ವಿಕೆ ಹೇಗಿತ್ತು ಅನ್ನುವುದನ್ನು ಸ್ಮರಿಸಿಕೊಂಡು,ಅವರನ್ನು ಬೈದುಕೊಂಡು,ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ಕಿತ್ತೂರ ರಾಣಿ ಚನ್ನಮ್ಮಾಜಿ ಯಿಂದ ಮಹಾತ್ಮ ಗಾಂಧೀಜಿ ವರೆಗೆ ನಮ್ಮ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದು ಭಾವುಕರಾಗುವ ಕ್ಷಣವೆ ಈ ದಿನ. ಆದರೆ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನನಗೆ ಈ ದಿನ ಬೇಸರ ಆಗುತ್ತಿರುವುದು. ಅವರು ಅಷ್ಟೆಲ್ಲ ಕಷ್ಟಪಟ್ಟು ನಮಗಂತ ಸ್ವಾತಂತ್ರ್ಯ ತಂದು ಕೊಟ್ಟರೆ ನಾವು, ನೀವು ಮಾಡುತ್ತಿರುವುದು ಏನು..?

ಇನ್ನೂ ಅದೆಷ್ಟೋ ಜನರಿಗೆ ದೇಶಭಕ್ತಿ ಅಂದರೇನು, ಸ್ವಾತಂತ್ರ್ಯ ಅಂದರೆ ಯಾವುದು ಎಂಬುವುದರ ಸರಿಯಾದ ಮಾಹಿತಿ ಸಿಕ್ಕಿಲ್ಲ. ಯಾಕೆಂದರೆ, ಈ ದಿನ ತಮ್ಮ ಲಾಭಕ್ಕೋಸ್ಕರ ಅಲ್ಲದೆ ದೇಶಕ್ಕೊಸ್ಕರ ಏನಾದರೂ ಮಾಡಬೇಕೆಂಬ ಮನಸ್ಥಿತಿ ಅದೆಷ್ಟು ಯುವಕರಲ್ಲಿದೆ ಹೇಳಿ..?

ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿರುವುದು ಒಂದು ಕಡೆ ಖುಷಿ ವಿಷಯ.ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಎಷ್ಟೂ ಹಳ್ಳಿಗಳು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ವಿದ್ಯುತ ದ್ವೀಪ, ರಸ್ತೆ, ಶಿಕ್ಷಣ, ಆರೋಗ್ಯ, ಆಸರೆ, ರಕ್ಷಣೆ ಇತ್ಯಾದಿಗಳಿದ ವಂಚಿತವಾಗಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನೌಕರರಿಗೆ ಭದ್ರತೆ ಇಲ್ಲದಂತಾಗುತ್ತಿದೆ. ಸತತ ಬೆಲೆ ಏರಿಕೆ ಸಾರ್ವಜನಿಕರಿಗೆ ಹೊರೆ,ರೈತರ ಬಗ್ಗೆ ನಿಷ್ಕಾಳಜಿ ತೋರುತ್ತಿರುವುದು ಸೇರಿದಂತೆ ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳ ತಾಂಡವಾಡುತ್ತಿವೆ. 

ಜಾತ್ಯತೀತ ರಾಷ್ಟ್ರ ಕೇವಲ ಹೆಸರಿಗೆ ಮಾತ್ರನಾ? ಅಥವಾ ಅದು ಸಂವಿಧಾನದ ಪುಸ್ತಕಕ್ಕೆ ಮಾತ್ರ ಸೀಮಿತವಾ? ಜಾತಿ ಆಧಾರದ ಮೇಲೆ ಮತ್ತು ಖುರ್ಚಿ, ಪದವಿ ಆಸೆಯಿಂದ ಆಡಳಿತ ನಡೆಯುತ್ತಿರುವ ರಾಜಕಾರಣಿಗಳಿಂದ ಹಿಡಿದು, ಜಾತಿ ಆಧಾರದ ಮೇಲೆ ಸರಕಾರಿ ಸವಲತ್ತುಗಳನ್ನು ನೀಡುತ್ತಿರುವ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಸ್ವಾತಂತ್ರ್ಯ ನಮಗಿನ್ನು ಎಲ್ಲಿ ಬಂದಿದೆ.?  ಎಲ್ಲೆಲ್ಲೂ ರಾರಾಜಿಸುತ್ತಿರುವ ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತಿರುವ ಯುವಕರು ಎಲ್ಲಿವರೆಗೂ ಹುಟ್ಟುತ್ತಿರುತ್ತಾರೋ ಅಲ್ಲಿಯವರೆಗೂ ಸ್ವಾತಂತ್ರ್ಯ ಎಲ್ಲಿ ಸಿಗುತ್ತದೆ?

ಅಗಸ್ಟ್ 15 ಬಂತೆಂದರೆ ಸಾಕು ನಮ್ಮಲ್ಲಿರುವ ದೇಶ ಪ್ರೇಮ ಉಕ್ಕಿ ಹರಿದು ಭಾರತದ ಬಗ್ಗೆ ಯಾವತ್ತೂ ತೋರದ ಪ್ರೀತಿ, ವಿಶ್ವಾಸ, ದೇಶಾಭಿಮಾನ ತನ್ನಿಂತಾನೇ ಹೊರಬರುತ್ತದೆ. ಅದರಲ್ಲೂ ಆ ದಿನ ಕೇಸರಿ, ಬಿಳಿ , ಹಸಿರು ಬಣ್ಣ ಬಳಿದುಕೊಂಡು, ತ್ರಿವರ್ಣ ಧ್ವಜ ಹಿಡಿದುಕೊಂಡು ಸಂಭ್ರಮಿಸುವವರನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ಅವರಲ್ಲಿ ಯಾವತ್ತೂ ಇಲ್ಲದ ದೇಶ ಪ್ರೇಮ ಕಂಡಾಗ ಅವರಿಗೆ ಆ ದಿನ ಮಾತ್ರ ಸ್ವಾತಂತ್ರ್ಯ ದೊರೆತಿದೆಯೆನೋ ಎಂಬ ಸಂಶಯವೂ ನನ್ನಲ್ಲಿ ಆ ದಿನ ಮೂಡುವುದು ಸಹಜ.

ಇನ್ನು ಈ ದಿನ ಧ್ವಜಾರೋಹಣ ನಂತರ ರಾಜಕಾರಣಿಗಳಿಂದ ಹಿಡಿದು ಪುಟಾಣಿಯವರೆಗೂ ದೇಶದ ಬಗ್ಗೆ ಉದ್ದುದ್ದ ಭಾಷಣ ಮಾಡಿ, ಅದನ್ನು ಕೇಳಿ ಚಪ್ಪಾಳೆ ತಟ್ಟಿ ಕೊನೆಗೆ ಒಂದು ರೂಪಾಯಿ ಚಾಕ್ಲೇಟ್ ತಿಂದು ಆ ದಿನದ ಮಟ್ಟಿಗೆ ಮಾತ್ರ ದೇಶಭಕ್ತಿ ಮೆರೆಯುವುದು ಈ ದಿನದ ಇನ್ನೊಂದು‌ ವಿಶೇಷ.

ಹಾಗಾದರೆ ಈ ದೇಶದಲ್ಲಿ ಬದುಕುತ್ತಿರುವ ಮತ್ತು ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಗಳಿಗೂ ನಿಜವಾಗಿಯೂ ದೇಶಭಕ್ತಿ ಇದೆಯಾ? ಅಥವಾ ಬರೀ ತೋರಿಕೆಗಾಗಿ “ಮೇರಾ ಭಾರತ್ ಮಹಾನ್” ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗೂ ಬಂದಿದೆಯಾ?

ನಮ್ಮ ನೆಲದಲ್ಲಿ ಹಿಂದೂತ್ವ ವಿರೋಧಿಗಳನ್ನು ನಕ್ಸಲರು ಅಥವಾ ದೇಶದ್ರೊಹಿ ಎಂದೂ, ಮುಸಲ್ಮಾನರನ್ನು ಭಯೋತ್ಪಾದಕರೆಂದೂ ಬಣ್ಣಿಸುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಬಿಂಬಿಸುವ ಹುನ್ನಾರವೇನಿರಬಹುದು? ಇವತ್ತು ನಮ್ಮನ್ನಾಳುವವರ ಮನಸ್ಥಿತಿ ಹೇಗಿದೆಯೆಂದರೆ, ರಾಜಕಾರಣವೆಂದರೆ ಅವರಿಗೆ ಅಧಿಕಾರ ಮಾತ್ರ. ಆ ಅಧಿಕಾರ ಪಡೆಯಲು ಅವರು ಅವಲಂಭಿಸಿರೋದು ಹಣವನ್ನು. ಆ ಹಣ ಹರಿದು ಬರೋದು ಬಂಡವಾಳಶಾಹಿಗಳಿಂದ. ಹಾಗಾಗಿ ದೇಶದ ಸಂಪತ್ತನ್ನು ವಿದೇಶಿ ಕಂಪನಿ ಮತ್ತು ಬಂಡವಾಳಶಾಹಿ ಲೂಟಿಕೋರರಿಗೆ ಧಾರೆಯೆರೆಯಲು ಯಾವ ಮುಲಾಜೂ ಇಲ್ಲದೆ ತಯಾರಾಗಿರುತ್ತಾರೆ. ಅಂತಹ ಅವರ ಹಾದಿಗೆ ಯಾರೆಲ್ಲ ಅಡ್ಡಿಯಾಗುತ್ತಾರೊ ಅಂತವರಿಗೆ ನಕ್ಸಲರ ಪಟ್ಟಿಯನ್ನೋ, ಭಯೋತ್ಪಾದಕ ಕಟ್ಟಿ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆ. ಈ ಕೆಲಸವನ್ನು ಅಧಿಕಾರಕ್ಕಂಟಿಕೂತ ಎಲ್ಲರೂ ಇದನ್ನೇ ಶುರು ಮಾಡಿಕೊಂಡಿದ್ದಾರೆ.

ಇಂತಹ ಘನಕಾರ್ಯಕ್ಕೆ ಅದ್ಯಾಕೆ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ, ಜೀವ ತೆತ್ತು, ರಕ್ತ ಹರಿಸಿ, ಬಂಧನಕ್ಕೊಳಗಾಗಿ ಸ್ವಾತಂತ್ರ್ಯವನ್ನು ಪಡೆಯಬೇಕಿತ್ತು? ಬ್ರಿಟಿಷರು ನಮ್ಮನ್ನು ಲೂಟಿ ಮಾಡುತ್ತಿದ್ದಂತೆಯೇ ಇವತ್ತು ನಮ್ಮ ಈ ದೊಡ್ಡ ‘ಪ್ರಜಾಪ್ರಭುತ್ವ’ದಲ್ಲಿ ಜನಪ್ರತಿನಿಧಿಗಳೇ ದೇಶವನ್ನು ತುಂಡುತುಂಡಾಗಿ ವಿದೇಶಿ ಕಂಪನಿಗಳಿಗೆ ಮಾರುತ್ತಾರೆಂದರೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅರ್ಥ ಇದೆಯೇ? ನಿಜವಾಗಲೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

ಜಾಗತೀಕರಣ-ಖಾಸಗೀಕರಣ-ಉದಾರೀಕರಣ ಎಂಬ ಮೂರು ಭೂತಗಳಿಂದ ಒಂದು ಕಡೆ ಸರ್ಕಾರದ ತಿಜೋರಿಗೆ ನಷ್ಟವಾದರೂ ಪರವಾಗಿಲ್ಲ ಭೂಮಿಯನ್ನು ಬಂಡವಾಳಶಾಹಿಗಳಿಗೆ ನೀಡುತ್ತೇವೆ ಎಂದು ಸರ್ಕಾರ ಪಟ್ಟು ಹಿಡಿದಿದ್ದರೆ, ಇಲ್ಲಿ ಅಧಿಕಾರದಲ್ಲಿರುವವರು ಗಣಿ ಹಗರಣ,ಭೂ ಹಗರಣದಲ್ಲಿ ಮುಳುಗಿ ದೇಶ ಮತ್ತು ರಾಜ್ಯಗಳನ್ನೇ ಮನೆ ಆಸ್ತಿ ಮಾಡಿಕೊಳ್ಳತೊಡಗಿದ್ದಾರೆ. ಹಣ-ಹೆಂಡ ಹರಿಸಿ ಚುನಾವಣೆ ಎಂಬ ಸರ್ಕಸ್‍ನಲ್ಲಿ ಗೆದ್ದವರನ್ನು ನಿಜವಾಗಲೂ ಜನಪ್ರತಿನಿಧಿಗಳು ಎಂದು ಕರೆಯಲಾಗುತ್ತದೆಯೇ. ನಮ್ಮದೂ ಒಂದು ಪ್ರಜಾಪ್ರಭುತ್ವ ಎಂದು ಹಮ್ಮೆ ಪಡಲಾಗುತ್ತದೆಯೇ?

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";