ದೀಪಾವಳಿ ಹಬ್ಬ ಹತ್ತಿರದಲ್ಲೆ ಬಿಹಾರದ ಕೇಸರಿ ಪಕ್ಷದ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಲ್ಲಿ ಸಾಕಷ್ಟು ವಿರೋಧ ಉಂಟಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿದೆ. ಅಂದಹಾಗೆ,ಯಾರು ಆ ಬಿಜೆಪಿ ಶಾಸಕ..? ಅವರು ಹೇಳಿರುವುದೇನು…? ಇಲ್ಲಿದೆ ವಿವರ..
ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ಬಿಹಾರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ವಿವಾದ ಸೃಷ್ಟಿಸಿದ್ದಾರೆ. ಬಿಹಾರದ ಭಗಲ್ಪುರ ಜಿಲ್ಲೆಯ ಪೀರ್‌ಪೇಂಟಿ ವಿಧಾನಸಭೆ ಕ್ಷೇತ್ರದ ಶಾಸಕ ಹಿಂದೂ ನಂಬಿಕೆಗಳನ್ನು ಪ್ರಶ್ನಿಸಿದ್ದಾರೆ. ಹಾಗೂ, ತನ್ನ ನಿಲುವನ್ನು ಸಮರ್ಥನೆ ಮಾಡಿಕೊಳ್ಳಲು ತಮ್ಮದೇ ರೀತಿಯ ಪುರಾವೆಗಳನ್ನು ಸಹ ಒದಗಿಸಿದ್ದಾರೆ. ಇನ್ನು, ಲಲನ್ ಪಾಸ್ವಾನ್ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಭಗಲ್ಪುರದ ಶೇರ್ಮಾರಿ ಬಜಾರ್‌ನಲ್ಲಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, ಅವರ ಪ್ರತಿಕೃತಿಯನ್ನು ಸಹ ದಹಿಸಲಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮೀ ದೇವತೆಯ ಪೂಜೆ ಮಾಡುವುದನ್ನು ಸಹ ಲಲನ್ ಪಾಸ್ವಾನ್ ಬುಧವಾರ ಪ್ರಶ್ನೆ ಮಾಡಿದ್ದಾರೆ
ನಾವು ಲಕ್ಷ್ಮೀ ದೇವತೆಯಿಂದ ಮಾತ್ರ ಹಣ, ಶ್ರೀಮಂತಿಕೆ ಪಡೆಯೋದಾದರೆ ಮುಸ್ಲಿಮರಲ್ಲಿ ಬಿಲಿಯನೇರ್‌ಗಳು ಹಾಗೂ ಟ್ರಿಲಿಯನೇರ್‌ಗಳು ಇರಲೇಬಾರದಿತ್ತು. ಮುಸಲ್ಮಾನವರು ಲಕ್ಷ್ಮೀ ದೇವತೆಯನ್ನು ಪೂಜಿಸಲ್ಲ, ಆದರೂ ಅವರು ಶ್ರೀಮಂತರಾಗಿಲ್ಲವೇ..? ಹಾಗೂ, ಮುಸ್ಲಿಮರು ಸರಸ್ವತಿ ದೇವತೆಯನ್ನು ಸಹ ಪೂಜಿಸಲ್ಲ. ಆದರೂ, ಅವರಲ್ಲಿ ವಿದ್ವಾಂಸರಿಲ್ಲವೇ..? ಅವರೂ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗಿಲ್ಲವೇ ಎಂದೂ ಬಿಹಾರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಪ್ರಶ್ನೆ ಮಾಡಿದ್ದಾರೆ.
"मुसलमान लक्ष्मी की पूजा नहीं करते, तो क्या वे अमीर नहीं होते"
"मुसलमान सरस्वती को नहीं पूजते, तो क्या मुसलमान शिक्षित नहीं होते" – BJP MLA Lalan Paswan from Bhagalpur,Bihar pic.twitter.com/RDoSM0jMEY— Muktanshu™ 🆇 (@muktanshu) October 19, 2022
ಅಲ್ಲದೆ, ಆತ್ಮ ಹಾಗೂ ಪರಮಾತ್ಮ ಎಂಬ ಪರಿಕಲ್ಪನೆ ಕೇವಲ ಜನರ ನಂಬಿಕೆಯಷ್ಟೇ ಎಂದೂ ಅವರು ಹೇಳಿದ್ದಾರೆ. ನೀವು ನಂಬಿಕೆ ಇಡುವುದಾದರೆ, ಅವರು ದೇವತೆ. ಇಲ್ಲದಿದ್ದರೆ ಒಂದು ಕಲ್ಲಿನ ವಿಗ್ರಹವಷ್ಟೇ. ನಾವು ದೇವರು ಹಾಗೂ ದೇವತೆಯನ್ನು ನಂಬುತ್ತೇವೋ ಬಿಡುತ್ತೇವೋ ಎಂಬುದು ನಮಗೆ ಬಿಟ್ಟಿದ್ದು. ತಾರ್ಕಿಕ ತೀರ್ಮಾನ ತೆಗೆದುಕೊಳ್ಳಲು ನಾವು ವೈಜ್ಞಾನಿಕ ಆಧಾರದಲ್ಲಿ ಚಿಂತಿಸಬೇಕು. ನಾವು ದೇವರನ್ನು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದೂ ಅವರು ಹೇಳಿದ್ದಾರೆ.
ಭಜರಂಗಬಲಿ (ಹನುಮಂತ) ಶಕ್ತಿ ಹೊಂದಿರುವ ದೇವರು ಹಾಗೂ ಬಲವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಮುಸ್ಲಿಮರು ಅಥವಾ ಕ್ರೈಸ್ತರು ಭಜರಂಗಬಲಿಯನ್ನು ಪೂಜಿಸುವುದಿಲ್ಲ. ಆದರೂ, ಅವರು ಶಕ್ತಿವಂತರಾಗಿಲ್ಲವೇ..? ನೀವು ನಂಬುವುದನ್ನು ನಿಲ್ಲಿಸಿದ ದಿನ ಈ ಎಲ್ಲ ವಿಷಯಗಳು ಕೊನೆಗೊಳ್ಳುತ್ತವೆ ಎಂದೂ ಬಿಹಾರದ ಭಗಲ್ಪುರ ಜಿಲ್ಲೆಯ ಪೀರ್‌ಪೇಂಟಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಹೇಳಿದ್ದಾರೆ.
ಕೃಪೆ:ಸುವರ್ಣಾಟಿವಿ