ಬೆಳಗಾವಿ: ರೈತರ ಹೆಸರಿನಲ್ಲೇ ಅಧಿಕಾರಕ್ಕೆ ಬಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗ ರೈತರನ್ನು ಕಡೆಗಣಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೇ ಕೊಳೆ ರೋಗ ಬಂದಿದೆ ಎಂದು ಚನ್ನಮ್ಮನ ಕಿತ್ತೂರು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಆನಂದ ಹಂಪಣ್ಣವರ ಹರಿಹಾಯ್ದಿದ್ದಾರೆ.
ಅತಿವೃಷ್ಠಿಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.ಬೆಳೆ ನಷ್ಟಕ್ಕೆ ಸರಿಯಾದ ಪರಿಹಾರ ನೀಡುತ್ತಿಲ್ಲ. ಧಾರಾಕಾರ ಮಳೆಗೆ ರೈತರು ಬೆಳೆದ ಬೆಳೆ ಮಣ್ಣುಪಾಲಾಗುತ್ತಿರುವುದು ಒಂದಡೆಯಾದರೆ,ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಸರಿಯಾಗಿ ಹಣ ಪಾವತಿಯಾಗದೆ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಆನಂದ ಹಂಪಣ್ಣವರ ಅವರು ರೈತರ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಪ್ರತಿಬಾರಿಯೂ ಹಿಂದನ ಸರಕಾದ ಆಡಳಿತದ ಬಗ್ಗೆ ಟೀಕಿಸುವ ಬಿಜೆಪಿ ಮುಖಂಡರು ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿ,ಬಿಜೆಪಿ ನಾಯಕರಿಗೆ ರೈತರು, ಬಡವರ ಕಲ್ಯಾಣಕ್ಕಿಂತಲೂ ಚುನಾವಣೆಯೇ ಮುಖ್ಯವಾಗಿದೆ. ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಅಧಿಕಾರದ ಅಮಲು ಹೆಚ್ಚಾಗಿದೆ. ಮೀಸಲಾತಿ ಎಂಬ ತುಪ್ಪವನ್ನು ಜನರ ಮೂಗಿಗೆ ಸವರುತ್ತಿದ್ದಾರೆ. ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ಎಷ್ಟೂ ಹಳ್ಳಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಆರೋಪಿಸಿದರು.
ಈ ವೇಳೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.