ಕಿತ್ತೂರಿನಲ್ಲಿ ಕ್ಷುಲಕ ಕಾರಣಕ್ಕಾಗಿ ವಯೋವೃದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪಟ್ಟಣದ ಚೌಕಿಮಠ ಕ್ರಾಸ್ ಹತ್ತಿರ ಗುರುವಾರ ಕ್ಷುಲಕ ಕಾರಣಕ್ಕಾಗಿ ವಯೋವೃದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ.

ಪಟ್ಟಣದ ಸೋಮವಾರ ಪೇಟೆಯ ನಿವಾಸಿ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿವೃತ್ತ ನೌಕರ ವಿಜಯ ಮಹಾಂತೇಶ ಹಿರೇಮಠ (74) ಮೃತ ದುರ್ದೈವಿ.
ಇವರು ಪಟ್ಟಣದ ಎಸ್,ಬಿ,ಐ ಬ್ಯಾಂಕಿನಿದ ಮರಳಿ ಮನೆಗೆ ತೆರಳುವಾಗ ಪಟ್ಟಣದ ಚೌಕಿಮಠದ ಕ್ರಾಸ್‌ನಲ್ಲಿ ಮಲ್ಲಾಪೂರ ಗ್ರಾಮದ ನಿವಾಸಿ ಅದೃಶ್ಯ ಶಿವಲಿಂಗನವರ(32) ಎಂಬಾತ ಹಲ್ಲೆ ನಡೆಸಿದ್ದಾನೆ.

 

ಮೃತ ವಿಜಯ ಮಹಾಂತೇಶ ಹಿರೇಮಠ      ಆರೋಪಿ ಅದೃಶ್ಯ ಶಿವಲಿಂಗನವರ

ಘಟನೆಯ ವಿವರ : ಮೃತಪಟ್ಟ ವಿಜಯ ಮಹಾಂತೇಶ ಪಟ್ಟಣದ ಎಸ್.ಬಿ.ಐ ಬ್ಯಾಂಕಿಗೆ ಬಂದಿದ್ದರು. ಅಲ್ಲಿಯೇ ಕೂಗಳತೆಯ ದೂರದಲ್ಲಿರುವ ಚೌಕಿಮಠದ ಬಳಿ ತಾಲೂಕಿನ ಮಲ್ಲಾಪೂರ ಗ್ರಾಮದ ಅದೃಶ್ಯ ಶಿವಲಿಂಗನವರ ತಮ್ಮ ಹೊಲದ ಮಾಲೀಕರ ಜೊತೆ ಕಬ್ಬು ಕಾರ್ಖಾನೆಗೆ ಕಳುಹಿಸಲು ಪರ್ಮಿಟ್ ಪಡೆಯಲು ಕಾರ್ಖಾನೆಯ ಕಚೇರಿಗೆ ಬಂದಿದ್ದರು. ವಿಜಯ ಮಹಾಂತೇಶ ಎಸ್,ಬಿ,ಐ ಬ್ಯಾಂಕಿನಿ೦ದ ತಮ್ಮ ಕೆಲಸ ಮುಗಿದು ಮನೆಗೆ ತೆರಳಲು ತಮ್ಮ ಸೈಕಲ್ ಮೋಟಾರ (ಬಜಾಜ್ ಎಮ್ 80) ಮೂಲಕ ಬರುವಾಗ ಚೌಕಿಮಠದ ಬಳಿ ಅದೃಶ್ಯ ಶಿವಲಿಂಗನವರ ಸೇರಿದಂತೆ ಇತರರು ಬರುತ್ತಿದ್ದರು.

ಹಿಂದಿನಿ೦ದ ಬರುತ್ತಿದ್ದ ಕಾರೊಂದು ವಿಜಯ ಮಹಾಂತೇಶ ಅವರ ಬಜಾಜ್ ಎಮ್ 80 ಬೈಕ್‌ಗೆ ತಾಗಿ ಆಯತಪ್ಪಿದ ಸೈಕಲ ಮೋಟಾರ ಅದೃಶ್ಯ ಶಿವಲಿಂಗನವರ ಮತ್ತು ಜೊತೆಗೆ ಇರುವವರಿಗೆ ತಗುಲಿದ್ದು ಕೂಡಲೇ ಸೈಕಲ್ ಮೋಟಾರ ಸವಾರ ವಿಜಯ ಮಹಾಂತೇಶ ಬೈಕ್ ತಗುಲಿದ ವ್ಯಕ್ತಿಗೆ ಏನಾಗಿದೆ ಎಂದು ನೋಡಲು ಬರುತ್ತಿದ್ದಂತೆ ಅಲ್ಲಿದ್ದ ಅದೃಶ್ಯ ಶಿವಲಿಂಗನವರ ಏಕಾಏಕಿ ವಿಜಯ ಮಹಾಂತೇಶ ಅವರ ಮೇಲೆ ಹಲ್ಲೆ ಮಾಡಲಾರಂಭಿಸಿ ಹಿಗ್ಗಾಮುಗ್ಗಾ ಥಳಿಸಿ ಅಲ್ಲದೆ ಮನ ಬಂದ೦ತೆ ಎದೆಗೆ ಒದ್ದಿರುವ ಪರಿಣಾಮ ವಿಜಯ ಮಹಾಂತೇಶ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದ್ದು ತುರ್ತು ಚಿಕಿತ್ಸೆಗಾಗಿ ಕಿತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತರಾಗಿರುವುದು ದೃಢಪಟ್ಟಿದೆ.
ಆಗ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಹಲ್ಲೆಕೋರ ಅದೃಶ್ಯ ಶಿವಲಿಂಗನವರ ಅವನನ್ನು ಅಲ್ಲಿಯೇ ಹಿಡಿದಿಟ್ಟುಕೊಂಡು ವಿಜಯ ಮಹಾಂತೇಶ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ವಿಜಯ ಮಹಾಂತೇಶ ಕೊನೆಯುಸಿರೆಳೆದಿದ್ದಾರೆ. ನಂತರ ಸಾರ್ವಜನಿಕರು ಹಲ್ಲೆ ನಡೆಸಿದ ಅದೃಶ್ಯ ಶಿವಲಿಂಗನವರ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಮೃತ ವಿಜಯ ಮಹಾಂತೇಶ ಅವರ ಮಗ ಗುರು ಹಿರೇಮಠ ನೀಡಿದ ದೂರಿನ ಅನ್ವಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

Share This Article
";