ಬೆಳಗಾವಿ: ಬೈಲೂರು ಸ್ವಾಮೀಜಿ ಸೇರಿ ಸಿಎಂ ಸಿದ್ದರಾಮಯ್ಯ ಸಂಪುಟದ ಮೂವರು ಸಚಿವರಿಗೆ ಅನಾಮಿಕನೋರ್ವ ಜೀವ ಬೆದರಿಕೆ ಪತ್ರ ಬರೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳಿಗೆ ಸೇರಿ ಮೂವರು ಸಚಿವರಿಗೆ ಅನಾಮಧೇಯ ವ್ಯಕ್ತಿಯೋರ್ವ ಜೀವ ಬೆದರಿಕೆ ಪತ್ರ ಬರೆದಿದ್ದು, ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೇ ಹಲವು ಪ್ರಗತಿಪರ ವಿಚಾರವಾದಿಗಳಿಗೂ ಈ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪ ಆಶ್ರಮಕ್ಕೆ ಸೆಪ್ಟೆಂಬರ್ 20ರಂದು ಈ ಜೀವ ಬೆದರಿಕೆ ಪತ್ರ ಬಂದಿದೆ. ಕಳೆದ ತಿಂಗಳಷ್ಟೇ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ನಿಷ್ಕಲಮಂಟಪಕ್ಕೆ ಇನ್ನೊಂದು ಜೀವ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ
ಪತ್ರದಲ್ಲಿ ಏನಿದೆ?
ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ ಅಥವಾ ಸಾವಿನ ಪತ್ರವಂತಾದರೂ ತಿಳಿ. ನಾನು ನಿನ್ನ ಜೊತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತದೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿಯೇ ಇಲ್ಲ. ನಿನ್ನಂಥ ದುಷ್ಟ ರಾಕ್ಷಸ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
ಹಲವು ವಿಚಾರವಾದಿಗಳು ಹಾಗೂ ಪ್ರಗತಿಪರರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ರಾಜ್ಯದ ಮೂವರು ಸಚಿವರು, ಸಾಹಿತಿಗಳ ಹೆಸರುಗಳನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎಸ್‌ಜಿ ಸಿದ್ದರಾಮಯ್ಯ, ಕೆ ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೊ.ಭಗವಾನ್, ಪ್ರೊ.ಮಹೇಶ್‌ಚಂದ್ರ, ಬಿಟಿ ಲಲಿತಾ ನಾಯಕ್, ನಟ ಚೇತನ್, ನಟ ಪ್ರಕಾಶರಾಜ್, ಪ್ರಿಯಾಂಕ್ ಖರ್ಗೆ, ಜಾರಕಿಹೊಳಿ, ದಿನೇಶ್ ಗುಂಡೂರಾವ್, ದ್ವಾರಕಾನಾಥ, ದೇವನೂರು ಮಹದೇಪ್ಪ, ಬಿಎಲ್ ವೇಣು, ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಅನಾಮಧೇಯ ಸವಾಲೆಸೆದಿದ್ದಾನೆ.
ಮತಾಂಧ ಮುಸ್ಲಿಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡುತ್ತಿರುವುದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದೆಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ಧೈರ್ಯವಿದ್ದರೆ ಹೇಳಿ. ಇಲ್ಲವಾದರೆ ನಿಮ್ಮ ಕೊನೆಯ ದಿನಗಳನ್ನು ಎಣಿಸಿ. ನಿಜಗುಣಾನಂದ ನಿನ್ನ ಕೊನೆಯ ದಿನಗಳನ್ನು ಎಣಿಸು ಎಂದು ಪತ್ರದ ಮೂಲಕ ಬೆದರಿಕೆ ಹಾಕಿದ್ದಾನೆ.
ಎಸ್ಪಿ ಪ್ರತಿಕ್ರಿಯೆ: ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ, ”ಚನ್ನಮ್ಮ ಕಿತ್ತೂರು ತಾಲೂಕಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಶಿವಾಜಿ ರಾವ್ ಜಾಧವ್ ಎಂಬಾತನೆ ಬಂಧಿತ ಆರೋಪಿ. ಒಂದೂವರೆ ತಿಂಗಳ ಹಿಂದೆ ನಿಜಗುಣಾನಂದ ಸ್ವಾಮೀಜಿಗೆ ಬೆದರಿಕೆ ಪತ್ರ ಬಂದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಜೊತೆಗೆ ಕಳೆದ ಒಂದು ವಾರದ ಹಿಂದೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆಯೂ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೆವು. ಈ ಎಲ್ಲ ಬೆದರಿಕೆ ಪತ್ರಗಳನ್ನು ಬರೆದಿರುವುದು ಇದೇ ಆರೋಪಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ” ಎಂದು ತಿಳಿಸಿದರು.