ಬೆಳಗಾವಿ : ಲೋಕಸಭೆ ಉಪ ಚುನಾವಣೆ ವೆಚ್ಛದಲ್ಲಿ ನಡೆದ ಹಗರಣದ ಬಗ್ಗೆ ಸರ್ಕಾರಕ್ಕೆ ತನಿಖಾ ಸಮಿತಿ ವರದಿ ಸಲ್ಲಿಸಿದೆ. ಆದರೂ ಕೂಡ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ತೆಗೆದುಕೊಂಡಿಲ್ಲ. ತಕ್ಷಣವೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಸಿದ್ದಾರೆ.
2021ರಲ್ಲಿ ನಡೆದ ಬೆಳಗಾವಿ ಲೋಕಸಭೆ ಉಪಚುನಾವಣೆಯ ವೆಚ್ಛಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗಿದ್ದ 1 ಕೋಟಿ 2 ಲಕ್ಷ 90 ಸಾವಿರ ರೂಪಾಯಿಗಳಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ. ಈ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಚುನಾವಣಾ ವೆಚ್ಛದ ಓಚರ್‍ಗಳು, ಬ್ಯಾಂಕ್ ನಗದು, ವಿಥ್‍ಡ್ರಾವಲ್ ಸ್ಟೇಟಮೆಂಟ್ಸ, ಕಚೇರಿ ನಗದು ಪುಸ್ತಕ, ವಿವಿದ ಏಜೆನ್ಸಿಗಳಿಗೆ ಹಣ ಸಂದಾಯ ಮಾಡಿದ ವೆಚ್ಛದ ವಿವರಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಚುನಾವಣಾ ವೆಚ್ಛದ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಬೆಳಗಾವಿಯ ಹಿರಿಯ ಉಪವಿಭಾಗಾಧಿಕಾರಿಗಳ ನೇತೃತ್ವದ ಸಮಿತಿಯು ಇದೇ ಸೆಪ್ಟಂಬರ್ 20ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಸಮಿತಿಯು ವರದಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಭೀಮಪ್ಪ ಗಡಾದ್ ತಕ್ಷಣವೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅದೇ ರೀತಿ ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ್ ಕರ್ತವ್ಯ ಲೋಪ ಎಸಗಿರುವ ಸಧ್ಯ ದಾಂಡೇಲಿ ತಹಶೀಲ್ದಾರ್ ಆಗಿರುವ ಅಂದಿನ ಬೆಳಗಾವಿ ತಹಶೀಲ್ದಾರ್ ಶೈಲೇಶ ಪರಮಾನಂದ, ಅಂದಿನ ಚುನಾವಣೆ ಶಿರಸ್ತೇದಾರ ಕೆ.ಆರ್.ರಮೇಶ, ಆಗಿನ ಪ್ರಭಾರಿ ಶಿರಸ್ತೇದಾರ ರಾಘವೇಂದ್ರ ಪೂಜಾರಿ, ಚುನಾವಣೆ ವಿಷಯ ನಿರ್ವಾಹಕ ಎಫ್‍ಡಿಎ ಎಮ್.ಎಸ್.ಫಾವಲಿ, ಪ್ರಸ್ತುತ ಹಿರೇಬಾಗೇವಾಡಿಯ ಕಂದಾಯ ನಿರೀಕ್ಷಿಕ ಎಮ್.ಎಸ್.ಗುರವ, ಡಾಟಾ ಎಂಟ್ರಿ ಆಪರೇಟರ್ ಕಲಿಮುಲ್ಲಾ ಡಿ ಮುಲ್ಲಾ ಅವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.